ಸಾರಾಂಶ
ನವದೆಹಲಿ: ಕರ್ನಾಟಕ ಮತ್ತು ತೆಲಂಗಾಣದಲ್ಲಿ ಭರ್ಜರಿಯಾಗಿ ಫಲ ಕೊಟ್ಟಿರುವ ಉಚಿತ ಕೊಡುಗೆಗಳ ಸರಣಿಯನ್ನು ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲೂ ಮುಂದುವರೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಸಂಬಂಧ ಹಲವು ಉಚಿತ ಕೊಡುಗೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಪಕ್ಷ ಬುಧವಾರ ಬಿಡುಗಡೆ ಮಾಡಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ 7 ಪ್ರಮುಖ ಗ್ಯಾರಂಟಿಗಳನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಬಡವರಿಗೆ ಉಚಿತ ಸೈಟ್, ಮನೆ ನಿರ್ಮಾಣ, ಜಾತಿ ಗಣತಿ, ಕರ್ನಾಟಕದ ಗೃಹ ಲಕ್ಷ್ಮೀ ಮಾದರಿ ಮಹಿಳೆಯರಿಗೆ ಮಾಸಿಕ 2000 ರು. ನೆರವಿನ ಅಂಶಗಳು ಸೇರಿವೆ.
ಏನೇನು ಕೊಡುಗೆ?:
ಬಡವರು: ಬಡವರಿಗೆ ಉಚಿತವಾಗಿ 900 ಚದರಡಿ ಜಾಗ, 2 ಕೊಠಡಿಯ 3.5 ಲಕ್ಷ ರು.ವೆಚ್ಚದ ಮನೆ ನಿರ್ಮಾಣ
ಕುಟುಂಬಕ್ಕೆ: ಮಾಸಿಕ 300 ಯುನಿಟ್ ಉಚಿತ ವಿದ್ಯುತ್, 25 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ.
ಮಹಿಳಾ ಸಬಲೀಕರಣ: ಮಹಿಳೆಯರಿಗೆ ಮಾಸಿಕ 2000 ರು.; 500 ರು.ಗೆ ಎಲ್‌ಪಿಜಿ ಸಿಲಿಂಡರ್.
ಯುವಸಮೂಹ: 2 ಲಕ್ಷ ನೇಮಕಾತಿ; ಡ್ರಗ್ ಮುಕ್ತ ರಾಜ್ಯ ನಿರ್ಮಾಣ.
ಸಾಮಾಜಿಕ ಭದ್ರತೆ: ವೃದ್ದರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 6000 ರು.ಪಿಂಚಣಿ. ಹಳೆ ಪಿಂಚಣಿ ಮರು ಜಾರಿ.
ಹಿಂದುಳಿದ ಸಮುದಾಯ: ಜಾತಿ ಗಣತಿ; ಮೀಸಲಿಗೆ ಇರುವ ಕೆನೆಪದರ ಮಿತಿ 10 ಲಕ್ಷರು.ಗೆ ಏರಿಕೆ
ರೈತರು: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ತಕ್ಷಣ ಬೆಳೆ ಪರಿಹಾರ