ಉತ್ತರ ಭಾರತದಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ವಿಷಮ ಸ್ಥಿತಿಗೆ: ಹರ್ಯಾಣದಲ್ಲಿ ದಾಖಲೆ

| Published : Nov 17 2024, 01:18 AM IST / Updated: Nov 17 2024, 05:15 AM IST

ಸಾರಾಂಶ

 ಉತ್ತರ ಭಾರತದಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ವಿಷಮ ಸ್ಥಿತಿಗೆ ತಲುಪುತ್ತಿದ್ದು, ದಿಲ್ಲಿ ಹಾಗೂ ಹರ್ಯಾಣದಲ್ಲಿ ಶುಕ್ರವಾರದ ಸ್ಥಿತಿಯೇ ಮುಂದುವರಿದಿದೆ.

ನವದೆಹಲಿ/ಚಂಡೀಗಢ: ಉತ್ತರ ಭಾರತದಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ವಿಷಮ ಸ್ಥಿತಿಗೆ ತಲುಪುತ್ತಿದ್ದು, ದಿಲ್ಲಿ ಹಾಗೂ ಹರ್ಯಾಣದಲ್ಲಿ ಶುಕ್ರವಾರದ ಸ್ಥಿತಿಯೇ ಮುಂದುವರಿದಿದೆ.

ಶನಿವಾರ ಹರ್ಯಾಣದ ಹಲವು ಕಡೆಗಳಲ್ಲಿ ವಾಯುಗುಣಮಟ್ಟ ‘ಕಳಪೆ’ ಸ್ಥಿತಿಯಿಂದ ‘ಅತೀ ಕಳಪೆ’ ಸ್ಥಿತಿಗೆ ತಲುಪಿದೆ. ಇಲ್ಲಿನ ಜಿಂದ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 410ಕ್ಕೆ ತಲುಪಿದ್ದು ದಾಖಲೆ ನಿರ್ಮಿಸಿದೆ. ಹಾಗೆಯೇ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎಕ್ಯುಐ 407 ಇದೆ.

ಹರಿಯಾಣದ ಭಿವಾನಿಯಲ್ಲಿ 392, ಬಹದ್ದೂರ್‌ಗಢದಲ್ಲಿ 383, ಪಾಣಿಪತ್‌ನಲ್ಲಿ 357, ಕೈತಾಲ್‌ನಲ್ಲಿ 321, ರೋಹ್ಟಕ್‌ನಲ್ಲಿ 309, ಗುರುಗ್ರಾಮ್‌ನಲ್ಲಿ 297ರಷ್ಟು ಎಕ್ಯುಐ ಇದೆ.

ಇನ್ನು ಪಂಜಾಬ್‌ನಲ್ಲಿ ಅತ್ಯಂತ ಕಳಪೆ ವಲಯದಲ್ಲಿದ್ದ ಹಲವು ಪ್ರದೇಶಗಳು ಕಳಪೆ ವಲಯಕ್ಕೆ ಬಂದಿದ್ದು, ವಾಯು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಿಸಿದೆ.

ಶುಕ್ರವಾರ ದೆಹಲಿಯಲ್ಲಿ ಮಾಲಿನ್ಯ ತಡೆಗಟ್ಟಲು ಆಪ್‌ ಸರ್ಕಾರ, ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಿದ್ದು, ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಬಸ್‌ ಹಾಗೂ ಮೆಟ್ರೋ ರೈಲು ಸಂಚಾರದಲ್ಲಿ ಹೆಚ್ಚಿಸಿದೆ.

ಬಾಂಗ್ಲಾ ಮೇಲೆ ನಿರ್ಬಂಧ: ಟ್ರಂಪ್‌ಗೆ ಇಂಡೋ ಅಮೆರಿಕನ್ನರ ಒತ್ತಾಯ

ವಾಷಿಂಗ್ಟನ್‌: ಹಿಂದೂಗಳ ಮೇಲೆ ದೌರ್ಜನ್ಯ ಘಟನೆಗಳು ನಡೆಯುತ್ತಿರುವ ಬಾಂಗ್ಲಾದೇಶದ ಮೇಲೆ ಆರ್ಥಿಕ ನಿರ್ಬಂಧ ಹೇರಬೇಕು ಎಂದು ಭಾರತ ಮೂಲದ ಅಮೆರಿಕನ್ನರು ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಆಗ್ರಹಿಸಿದ್ದಾರೆ.ಅಮೆರಿಕದ ಕ್ಯಾಪಿಟಲ್‌ನಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ ಭಾರತ ಮೂಲದ ಅಮೆರಿಕ ವೈದ್ಯ ಡಾ. ಭರತ್‌ ಬರೈ, ‘ಮುಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರವನ್ನು ಉಗ್ರರ ಕೈಗೊಂಬೆ ಆಗಿದ್ದಾರೆ. ಆದರೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದೇವಾಲಯ ಧ್ವಂಸದ ಕುರಿತು ಟ್ರಂಪ್‌ ನೀಡಿದ ಹೇಳಿಕೆಯಿಂದ ಈ ವಿಶ್ವಾಸ ಮೂಡಿದೆ. ಬಾಂಗ್ಲಾದ ರಫ್ತಿನ ಶೇ.80ರಷ್ಟು ಪಾಲು ಹೊಂದಿರುವ ಬಟ್ಟೆ ರಫ್ತನ್ನು ನಿಲ್ಲಿಸಿಬಿಟ್ಟರೆ ಅವರು ಏನು ತಿನ್ನುತ್ತಾರೆ? ಈ ಒತ್ತಡದಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಅಮರನ್‌’ ಚಿತ್ರ ಪ್ರದರ್ಶನ ವೇಳೆ ಪೆಟ್ರೋಲ್‌ ಬಾಂಬ್‌ ದಾಳಿ

ತಿರುನೆಲ್ವೇಲಿ (ತಮಿಳುನಾಡು): ನಟ ಶಿವಕಾರ್ತಿಕೇಯನ್ ಅವರ ‘ಅಮರನ್’ ಚಿತ್ರ ಪ್ರದರ್ಶನ ವೇಳೆ ಚಿತ್ರಮಂದಿರದ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.‘ಅಮರನ್‌’ ಮೇಜರ್‌ ಮುಕುಂದ ವರದರಾಜನ್ ಅವರ ಜೀವನ ಆಧಾರಿತ ಚಿತ್ರವಾಗಿದೆ. ಇದರ ಪ್ರದರ್ಶನದ ವೇಳೆ ಶನಿವಾರ ಮುಂಜಾನೆ ಇಬ್ಬರು ದುಷ್ಕರ್ಮಿಗಳು ಕಾಂಪೌಂಡ್‌ ಗೋಡೆಯೊಳಗೆ ಪೆಟ್ರೋಲ್‌ ಬಾಂಬ್‌ ಎಸೆದಿದ್ದು, ಅದು ಸ್ಫೋಟಗೊಂಡಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ

ಈ ದಾಳಿಯನ್ನು ಖಂಡಿಸಿದ ಬಿಜೆಪಿ ನಾಯಕರು ಮುಸ್ಲಿಂ ಸಂಘಟನೆಗಳು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಘಟನೆಯ ನಂತರ ಚಿತ್ರ ಮಂದಿರ ಪ್ರವೇಶಿಸಿದ ಆರೋಪದ ಮೇಲೆ ಹಿಂದೂ ಮುನ್ನಾನಿ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆ ನಂತರ ಬಿಡುಗಡೆ ಮಾಡಿದ್ದಾರೆ.

ಟ್ರಂಪ್‌ ಹತ್ಯೆ ಉದ್ದೇಶವಿಲ್ಲ: ಇರಾನ್‌ ಸ್ಪಷ್ಟನೆ

ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವ ಉದ್ದೇಶವಿಲ್ಲ ಎಂದು ಇರಾನ್ ಅಮೆರಿಕಕ್ಕೆ ಸಂದೇಶ ರವಾನಿಸಿದೆ ಎಂದು ಅಮೆರಿಕ ಮತ್ತು ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಚುನಾವಣೆ ವೇಳೆ ಟ್ರಂಪ್‌ ಹತ್ಯೆಗೈಯಲು ಇರಾನ್‌ ಸಂಚು ನಡೆಸಿತ್ತು ಎಂದು ಇತ್ತೀಚೆಗೆ ವರದಿಗಳು ಹೇಳಿದ್ದವು. ಇದರ ಬೆನ್ನಲ್ಲೇ ಈ ಸಂಬಂಧ ಅಮೆರಿಕಕ್ಕೆ ಇರಾನ್‌ ಸಂದೇಶ ರವಾನಿಸಿದ್ದು, ಪಾಶ್ಚಿಮಾತ್ಯ ದೇಶದೊಂದಿಗೆ ಉದ್ವಿಗ್ನತೆಯನ್ನು ತಗ್ಗಿಸುವ ಪ್ರಯತ್ನ ಮಾಡಿದೆ.

‘ಆದರೆ 2020ರಲ್ಲಿ ನಡೆದ ಇರಾನ್‌ ಮಿಲಿಟರಿ ಕಮಾಂಡರ್ ಮೇಜರ್ ಜನರಲ್ ಖಾಸಿಮ್ ಸುಲೈಮಾನಿ ಹತ್ಯೆಯಲ್ಲಿ ಟ್ರಂಪ್‌ ಪಾತ್ರವಿದೆ. ಈ ಬಗ್ಗೆ ಇರಾನ್‌ ಕಾನೂನಾತ್ಮಕ ಹೋರಾಟ ನಡೆಸುತ್ತದೆಯೇ ವಿನಾ, ಟ್ರಂಪ್‌ ಹತ್ಯೆ ಯತ್ನಕ್ಕೆ ಕೈಹಾಕುವುದಿಲ್ಲ’ ಎಂದು ಇರಾನ್‌ ಸರ್ಕಾರ ಸ್ಪಷ್ಟಪಡಿಸಿದೆ.

ಮುಂಬೈ- ಬೆಂಗಳೂರು ಎಕ್ಸ್‌ಪ್ರೆಸ್‌ ವೇಗೆ 55 ಸಾವಿರ ಕೋಟಿ ರು.: ಗಡ್ಕರಿ

ಪುಣೆ: ಮುಂಬೈ ಹಾಗೂ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು 55,000 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.ಚಿಂಚ್ವಾಡದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಗಡ್ಕರಿ, ‘ಈ ಮಾರ್ಗ ಪಿಂಪ್ರಿ, ಚಿಂಚ್ವಾಡಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ. ಹೆದ್ದಾರಿ ಮೊದಲ ಹಂತದಲ್ಲಿ 8,000 ಕೋಟಿ ರು. ಖರ್ಚಿನಲ್ಲಿ ನಾಸಿಕ್‌ ಫಾಟಾದಿಂದ ಖೇಡ್‌ ನಡುವೆ, 2ನೇ ಹಂತದಲ್ಲಿ ನರ್ಹೆಯಿಂದ ಪುಣೆಯ ರಾವತ್‌ ಕಿವಾಲೆ ರೋಡ್‌ ನಡುವೆ ರಸ್ತೆ ನಿರ್ಮಾಣವಾಗಲಿದೆ. ಇದು ಕೇವಲ ಘೋಷಣೆಯಲ್ಲ, ಯೋಜನೆಯನ್ನು ಪೂರ್ಣಗೊಳಿಸುವೆ’ ಎಂದರು.