ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ : ರಾಹುಲ್ ಗಾಂಧಿ

| Published : Aug 27 2024, 01:34 AM IST / Updated: Aug 27 2024, 04:50 AM IST

ಸಾರಾಂಶ

‘ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: ‘ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಶ್ಮೀರದ ಶ್ರೀನಗರದಲ್ಲಿ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿ ರಾಹುಲ್‌ ಅವರು ‘ನೀವು ಮದುವೆಯಾಗುವ ಒತ್ತಡ ಎದುರಿಸುತ್ತಿದ್ದೀರಾ?’ ಎಂದು ವಿದ್ಯಾರ್ಥಿಗಳಿಗೆ ಕೇಳಿದರು. ಆಗ ವಿದ್ಯಾರ್ಥಿಗಳು ಇದೇ ಪ್ರಶ್ನೆಯನ್ನು ರಾಹುಲ್‌ಗೆಕೇಳಿದಾಗ ‘ಕಳೆದ 20-30 ವರ್ಷಗಳಿಂದ ನನ್ನ ಮೇಲೆ ಮದುವೆಯಾಗಲು ಒತ್ತಡ ಹೇರಲಾಗುತ್ತಿದೆ. ನಾನು ಆ ಬಗ್ಗೆ ಯೋಚಿಸುತ್ತಿಲ್ಲವಾದರೂ, ಮದುವೆಯಾದರೆ...’ ಎಂದು ಮಾತನ್ನು ಅರ್ಧಕ್ಕೇ ತುಂಡರಿಸಿದರು.

‘ನಿಮ್ಮ ಮದುವೆಗೆ ನಮಗೂ ಆಹ್ವಾನಿಸಿ’ ಎಂಬ ಹುಡುಗಿಯರ ಮನವಿಗೆ ರಾಹುಲ್ ನಗುತ್ತ, ‘ಖಂಡಿತ’ ಎಂದರು. ಈ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫುಟ್‌ಪಾತ್‌ ಮೇಲೆ ಮಲಗಿದ್ದ ಐವರ ಮೇಲೆ ಹರಿದ ಟ್ರಕ್‌: 3 ಸಾವು

ನವದೆಹಲಿ: ಕನ್ನಡದ ಆ್ಯಕ್ಸಿಡೆಂಟ್‌ ಚಲನಚಿತ್ರದ ರೀತಿಯ ಘಟನೆ ದಿಲ್ಲಿಯಲ್ಲಿ ಸೋಮವಾರ ನಡೆದಿದೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ ಪ್ರದೇಶದ ಬಳಿ ಫುಟ್‌ಪಾತ್‌ ಮೇಲೆ ಮಲಗಿದ್ದ ಐವರ ಮೇಲೆ ಟ್ರಕ್‌ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಜಗ ಪ್ರವೇಶ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಮುಸ್ತಾಕ್‌ ಮತ್ತು ಕಮಲೇಶ್‌ ಎಂದು ಗುರುತಿಸಲಾಗಿದೆ. ಮೃತಪಟ್ಟ ಮೂವರು ಯಾರೆಂದು ಗುರುತು ಪತ್ತೆಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸೀಲಂಪುರದಿಂದ ಬರುತ್ತಿದ್ದ ಟ್ರಕ್‌ ಶಾಸ್ತ್ರಿ ಪಾರ್ಕ್‌ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ 5 ಮಂದಿಯ ಮೇಲೆ ಹರಿದಿದೆ. ಘಟನೆ ಬಳಿಕ ಟ್ರಕ್‌ ಚಾಲಕ ಟ್ರಕ್‌ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಚಾಲಕನ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸ ಪಿಂಚಣಿ ಯೋಜನೆಗೂ ಕಾರ್ಮಿಕ ಸಂಘಟನೆಗಳ ವಿರೋಧ

ನವದೆಹಲಿ: ನ್ಯಾಷನಲ್‌ ಪೆನ್ಷನ್‌ ಸ್ಕೀಂ (ಎನ್‌ಪಿಎಸ್‌)ಗೆ ಪರ್ಯಾವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸದಾಗಿ ಪರಿಚಯಿಸಿದ ಏಕೀಕೃತ ಪಿಂಚಣಿ ಯೋಜನೆ ಬಗ್ಗೆಯೂ ಕಾರ್ಮಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿಶೇಷವೆಂದರೆ ಆರ್‌ಎಸ್‌ಎಸ್‌ ಬೆಂಬಲಿತ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ಕೂಡಾ ಯುಪಿಎಸ್‌ನಲ್ಲೂ ಕೆಲವೊಂದು ಕೊರತೆಗಳು ಹಾಗೆಯೇ ಉಳಿದುಕೊಂಡಿದೆ ಎಂದು ಹೇಳಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಎಂಎಸ್‌, ಯುಪಿಎಸ್‌ ಯೋಜನೆಯನ್ನು ಪೂರ್ಣವಾಗಿ ಅಧ್ಯಯನ ಮಾಡಿದ ಬಳಿಕ ನಮ್ಮ ಮುಂದಿನ ನಿರ್ಧಾರ ಏನು ಎಂದು ತಿಳಿಸಲಾಗುವುದು ಎಂದು ಹೇಳಿದೆ.

ಇನ್ನೊಂದೆಡೆ ಬೃಹತ್‌ ಕಾರ್ಮಿಕ ಸಂಘಟನೆಯಾದ ಎಐಟಿಯುಸಿ, ಯುಪಿಎಸ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೂಡಾ ಎನ್‌ಪಿಎಸ್‌ನ ಮುಂದುವರೆದ ಭಾಗವಾಗಿದೆ. ಒಮ್ಮೆ ಇದು ಜಾರಿಯಾದರೆ ಅದರಲ್ಲಿನ ಇನ್ನಷ್ಟು ಕೊರತೆಗಳು ಹೊರಬೀಳಬಹುದು. ಹೀಗಾಗಿ ಹಳೆಯ ಪಿಂಚಣಿ ಯೋಜನೆ ಮುಂದುವರೆಸಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಕೈಬಿಡುವುದಿಲ್ಲ. ಅದಕ್ಕೆ ಹೋರಾಟ ಮುಂದುವರೆಯಲಿದೆ ಎಂದು ಹೇಳಿದೆ.

ಪಾಕ್‌: 23 ಬಸ್‌ ಪ್ರಯಾಣಿಕರ ಗುಂಡಿಕ್ಕಿ ಹತ್ಯೆ 

ಕರಾಚಿ: ಅಪರಿಚಿತ ಬಂದೂಕುಧಾರಿ ಉಗ್ರರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 23 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ಹಿಂಸಾಪೀಡಿಯ ಬಲೂಚಿಸ್ತಾನದ ಮುಸಖೆಲ್‌ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

‘ರಸ್ತೆಗೆ ಅಡ್ಡಲಾಗಿ ಕಲ್ಲು ಇರಿಸಿ ಬಸ್ಸನ್ನು ಉಗ್ರರು ನಿಲ್ಲಿಸಿದರು. ಅವರನ್ನೆಲ್ಲಾ ಬಸ್ಸಿನಿಂದ ಇಳಿಸಿ, ಗುರುತಿನ ಚೀಟಿ ಪರಿಶೀಲಿಸಿ ಗುಂಡಿಕ್ಕಿ ಕೊಂದರು. ಜೊತೆಗೆ 10 ವಾಹನಗಳಿಗೂ ಬೆಂಕಿ ಇಟ್ಟರು. ಇದು ನಿಷೇಧಿತ ಸಂಘಟನೆಯೊಂದರ ಕೃತ್ಯ’ ಎಂದು ಎಂದು ಮುಸಖೆಲ್‌ನ ಸಹಾಯಕ ಆಯುಕ್ತ ನಜೀಬ್‌ ಕಕರ್ ತಿಳಿಸಿದ್ದಾರೆ. ಆದರೆ ಅವರು ಸಂಘಟನೆಯ ಹೆಸರು ಹೇಳಿಲ್ಲ ಹಾಗೂ ಇದುವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.ಕೂಡಲೇ ಸ್ಥಳಕ್ಕೆ ಆಗಮಿಸಿ ಪೊಲೀಸರು ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಯಾಣಿಕರೆಲ್ಲರೂ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದವರಾಗಿದ್ದಾರೆ.ಇನ್ನೊಂದು ಕಡೆ 10 ಮಂದಿ ಹತ್ಯೆ:

ಬಲೂಚಿಸ್ತಾನದ ಖಲಾತ್ ಜಿಲ್ಲೆಯಲ್ಲಿಯೂ ಇಂತಹ ಘಟನೆ ನಡೆದಿದ್ದು, ಬಂದೂಕುಧಾರಿಗಳು 10 ಜನರನ್ನು ಹತ್ಯೆಗೈದಿದ್ದಾರೆ. ಈ ಮೂಲಕ ಆ.24 ಮತ್ತು 25ರ ನಡುವೆ 33 ಜನ ಅಮಾಯಕರು ಗುಂಡಿಗೆ ಬಲಿಯಾಗಿದ್ದಾರೆ.ಘಟನೆಗೆ ಸಂತಾಪ ಸೂಚಿಸಿರುವ ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫರಾಜ್‌ ಬುಗ್ಟಿ ಉಗ್ರವಾದವನ್ನು ಖಂಡಿಸಿದ್ದು, ಹತ್ಯೆ ನಡೆಸಿದವರು ಕೂಡ ಇದೇ ರೀತಿ ಅಂತ್ಯ ಕಾಣಲಿದ್ದಾರೆ ಎಂದು ಗುಡುಗಿದ್ದಾರೆ.

ಏಪ್ರಿಲ್‌ನಲ್ಲಿ ಕೂಡ ಇಂತಹ ಘಟನೆ ವರದಿಯಾಗಿದ್ದು, ನೋಶ್ಕಿಯ ಬಳಿ 9 ಮಂದಿ ಪ್ರಯಾಣಿಕರನ್ನು ಹತ್ಯೆ ಮಾಡಲಾಗಿತ್ತು.

ನಾನು, ರಜನಿ ಸದಾಕಾಲದ ಗೆಳೆಯರು: ಸಚಿವ ದುರೈ ತೇಪೆ

ಚೆನ್ನೈ: ‘ಕೆಲ ಹಳೆಯ ನಟರಿಂದಾಗಿ ಯುವ ನಟರಿಗೆ ಅವಕಾಶಗಳೇ ಸಿಗುತ್ತಿಲ್ಲ’ ಎಂದು ನಟ ರಜನಿಕಾಂತ್‌ರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದ ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌, ಸೋಮವಾರ ಮೆತ್ತಗಾಗಿದ್ದಾರೆ ಹಾಗೂ ರಜನಿ ಅವರನ್ನು ತಮ್ಮ ಸದಾಕಾಲದ ಸ್ನೇಹಿತನೆಂದು ಕರೆದಿದ್ದಾರೆ.

‘ಹ​ಳೆಯ, ಗಡ್ಡ ಬಿಟ್ಟ ಹಾಗೂ ಹಲ್ಲು ಬಿದ್ದಿ​ರುವ ನಟ​ರಿಂದ ಯುವ ನಟ​ರಿಗೆ ಅವಕಾ​ಶವೇ ಸಿಗ​ದಂತಾ​ಗಿ​ದೆ’ ಎಂಬ ಮುರುಗನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಜನಿಕಾಂತ್‌, ‘ಅವನು ನನ್ನ ಬಹುಕಾಲದ ಮಿತ್ರ. ದುರೈ​ಮು​ರು​ಗನ್‌ ಹೇಳಿಕೆಯಿಂದ ನನಗೇನೂ ಬೇಸರವಿಲ್ಲ. ನಮ್ಮ ಸ್ನೇಹ ಹೀಗೆಯೇ ಮುಂದುವರೆಯಲಿದೆ’ ಎಂದಿದ್ದರು. ಇದರ ಬೆನ್ನಲ್ಲೇ ಸ್ನೇಹಿತನ ಮಾತಿಗೆ ಕರಗಿರುವ ಮುರುಗನ್, ‘ನಮ್ಮ ಗೆಳೆತನ ಎಂದೆಂದಿಗೂ ಹೀಗೆಯೇ ಇರಲಿದೆ’ ಎಂದಿದ್ದಾರೆ.