ಸಾರಾಂಶ
ಲಿಂಗರಾಜು ಕೋರಾಕನ್ನಡಪ್ರಭ ವಾರ್ತೆ ಬೆಂಗಳೂರು
ಎಸ್ಸೆಸ್ಸೆಲ್ಸಿಯ ವಾರ್ಷಿಕ ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಜಾರಿಗೊಳಿಸಿ ಅಕ್ರಮಗಳಿಗೆ ಬ್ರೇಕ್ ಹಾಕಿರುವ ಸರ್ಕಾರ ಈಗ ಶಾಲಾ ಹಂತದಲ್ಲಿ ನಡೆಯುವ ಆಂತರಿಕ ಮೌಲ್ಯಮಾಪನದಲ್ಲಿ ಶಿಕ್ಷಕರು ಮನಸೋ ಇಚ್ಛೆ ಅಂಕಗಳನ್ನು ನೀಡುವುದನ್ನು ನಿಯಂತ್ರಿಸಲು ಮುಂದಾಗಿದೆ.ಈ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ಶಾಲೆಗಳ ಸಂಖ್ಯೆಗೆ ಅನುಗುಣವಾಗಿ ವಿಷಯ ಪರಿಣತಿ ಹೊಂದಿರುವ ಶಿಕ್ಷಕರ ತ್ರಿ-ಸದಸ್ಯ ಸಮಿತಿಗಳನ್ನು ರಚಿಸಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡಿರುವ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಶಾಲೆಗಳ ಭೇಟಿ ವೇಳೆ ಅಂಕಗಳನ್ನು ನಿಯಮಾನುಸಾರ ನೀಡಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಿ ಫೆ.20 ರೊಳಗೆ ವರದಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಮತ್ತು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಶೇ.80ರಷ್ಟು ಅಂಕಗಳಿಗೆ ಲಿಖಿತ/ಬಾಹ್ಯ ಪರೀಕ್ಷೆ, ಉಳಿದ ಶೇ.20ರಷ್ಟು ಅಂಕಗಳಿಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ (ಸಿಸಿಇ) ಪದ್ಧತಿ ಆಧಾರದಲ್ಲಿ ಶಾಲೆಯಲ್ಲಿ ನಡೆಯುವ ಕಿರುಪರೀಕ್ಷೆ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿನ ಸಾಧನೆ ಆಧರಿಸಿ ಶಿಕ್ಷಕರು ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನೀಡಬೇಕು.ಆ ಪ್ರಕಾರ, ಪ್ರಥಮ ಭಾಷೆ ಕನ್ನಡ ಪರೀಕ್ಷೆ ಒಟ್ಟು 125 ಅಂಕಗಳಿಗೆ ಇರುವುದರಿಂದ 100 ಅಂಕಗಳಿಗೆ ಲಿಖಿತ ಪರೀಕ್ಷೆ, 25 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಇರಲಿದೆ. ಉಳಿದೆಲ್ಲ ವಿಷಯಗಳ ಪರೀಕ್ಷೆ 100 ಅಂಕಗಳಿಗೆ ನಡೆಯುವುದರಿಂದ 80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಯಲಿದೆ.
ಆಂತರಿಕ ಮೌಲ್ಯಮಾಪನದಲ್ಲಿ ತೇರ್ಗಡೆ ಆಗಲು ನಿರ್ದಿಷ್ಟ ಅಂಕ ಪಡೆಯಬೇಕೆಂದಿಲ್ಲ. ಅಲ್ಲದೆ, ಈ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲೂ ಅವಕಾಶವಿರುವುದಿಲ್ಲ. ಇಷ್ಟೆಲ್ಲ ಸ್ಟಷ್ಟ ಮಾರ್ಗಸೂಚಿಗಳ ನಡುವೆಯೂ ಆಂತರಿಕ ಮೌಲ್ಯಮಾಪನದಲ್ಲಿ ಶಿಕ್ಷಕರು ಲೋಪಗಳನ್ನು ಎಸಗುತ್ತಿರುವ ಬಗ್ಗೆ ಮಂಡಳಿಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತ್ರಿಸದಸ್ಯ ಸಮಿತಿ ರಚಿಸಿ ಪರಿಶೀಲಿಸಲು ಮಂಡಳಿ ಸೂಚಿಸಿದೆ.ಶಾಲಾ ಮಟ್ಟದ ಆಂತರಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದಿದ್ದರೂ ಸಾಕಷ್ಟು ವಿದ್ಯಾರ್ಥಿಗಳು ಮಂಡಳಿ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಅತೀ ಕಡಿಮೆ ಅಂಕಗಳನ್ನು ಪಡೆದು ಫೇಲಾಗುತ್ತಿರುವುದು ಹಿಂದಿನ ಪರೀಕ್ಷೆಗಳಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಯ್ದ ಪ್ರೌಢಶಾಲೆಗಳ ದಾಖಲೆಗಳನ್ನು ಮಂಡಳಿ ಹಂತದಲ್ಲಿ ಪರಿಶೀಲಿಸಿದಾಗ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಕಿರುಪರೀಕ್ಷೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿರುವ ವಾಸ್ತವಿಕ ಅಂಕಗಳಿಗೂ ಹಾಗೂ ಮಂಡಳಿಗೆ ಶಿಕ್ಷಕರು ನೀಡಿರುವ ಅಂಕಗಳಿಗೂ ಅಜಗಜಾಂತರ ವ್ಯತ್ಯಾಸಗಳು ಕಂಡುಬಂದಿವೆ.
ಇದು ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಕರ್ತವ್ಯಲೋಪ ಎಸಗುತ್ತಿರುವುದನ್ನು ತೋರಿಸುತ್ತದೆ. ಹಾಗಾಗಿ ಇದನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ತಾಲೂಕು ಮಟ್ಟದ ತ್ರಿಸದಸ್ಯ ಸಮಿತಿ ಮೂಲಕ ರಾಜ್ಯದ ಎಲ್ಲಾ ಪ್ರೌಢ ಶಾಲೆಗಳಲ್ಲೂ ಆಂತರಿಕ ಮೌಲ್ಯಮಾಪನದ ಅಂಕಗಳ ನೈಜತೆ ಪರಿಶೀಲಿಸಲು ಕ್ರಮ ವಹಿಸುವಂತೆ ಕೆಎಸ್‌ಇಎಬಿ ನಿರ್ದೇಶಕ (ಪರೀಕ್ಷೆಗಳು) ಎಚ್.ಎನ್.ಗೋಪಾಲಕೃಷ್ಣ ಅವರು ಸುತ್ತೋಲೆ ನೀಡಿದ್ದಾರೆ.-ಬಾಕ್ಸ್-
ತ್ರಿಸದಸ್ಯ ಸಮಿತಿಯಲ್ಲಿ ಯಾರಿರಬೇಕು?ತಾಲೂಕುವಾರು ತ್ರಿಸದಸ್ಯ ಸಮಿತಿಯಲ್ಲಿ ವಿಷಯ ಪರಿಣತಿ ಹೊಂದಿರುವ ಒಬ್ಬ ಪ್ರೌಢ ಶಾಲಾ ಮುಖ್ಯ ಶಿಕ್ಷಕ, ಒಬ್ಬ ವಿಜ್ಞಾನ ವಿಷಯ ಶಿಕ್ಷಕ ಹಾಗೂ ಮತ್ತೊಬ್ಬ ಕಲಾ/ಭಾಷಾ ಶಿಕ್ಷಕರು ಇರಬೇಕು. ಈ ಸಮಿತಿ ಸರ್ಕಾರದ ಆದೇಶಾನುಸಾರ ಪ್ರತಿ ಶಾಲೆಯಲ್ಲೂ ನಿಯಮಾನುಸಾರ ಕಿರು ಪರೀಕ್ಷೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗಿದೆಯೇ? ಅವುಗಳಲ್ಲಿ ಮಕ್ಕಳು ಪಡೆದಿರುವ ಅಂಕಗಳಿಗೂ ಶಿಕ್ಷಕರು ಮಂಡಳಿಗೆ ಸ್ಯಾಟ್ಸ್ ತಂತ್ರಾಂಶದ ಮೂಲಕ ದಾಖಲಿಸಿರುವ ಅಂಕಗಳಿಗೂ ತಾಳೆ ಆಗುತ್ತದೆಯೇ ಎಂದು ಪರಿಶೀಲಿಸಿ ದೃಢೀಕರಿಸಬೇಕು. ಈ ವೇಳೆ ಶಿಕ್ಷಕರು ಲೋಪವೆಸಗಿರುವುದು ಕಂಡುಬಂದರೆ ಸರಿಪಡಿಸಲು ಸೂಚನೆ ನೀಡಬೇಕು. ಸಮಿತಿಯ ಸಲಹೆಗಳನ್ನು ಪಾಲಿಸದ ಶಿಕ್ಷಕರ ಬಗ್ಗೆ ಅಗತ್ಯ ಕ್ರಮ ವಹಿಸಲು ಜಿಲ್ಲಾ ಡಿಡಿಪಿಐ ಅವರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.