ಸಾರಾಂಶ
ಮುಂಬೈ: ಎಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್, 2024ನೇ ಸಾಲಿನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ದಾನ ಮಾಡಿದ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಎಡೆಲ್‌ಗೀವ್- ಹುರೂನ್ ಇಂಡಿಯಾ ಗುರುವಾರ ಬಿಡುಗಡೆ ಮಾಡಿರುವ ವರದಿ ಅನ್ವಯ ಪ್ರಸಕ್ತ ಸಾಲಿನಲ್ಲಿ ಶಿವ ನಾಡಾರ್ (3.14 ಲಕ್ಷ ಕೋಟಿ ರು.ಆಸ್ತಿ) 2153 ಕೋಟಿ ರು.ಗಳನ್ನು ಪರೋಪಕಾರಗಳಿಗೆ ದಾನವಾಗಿ ನೀಡಿದ್ದಾರೆ.
ಇನ್ನು ದೇಶದ ನಂ.2 ಶ್ರೀಮಂತ ಮುಕೇಶ್ ಅಂಬಾನಿ (10.14 ಲಕ್ಷ ಕೋಟಿ ರು.ಆಸ್ತಿ) 407 ಕೋಟಿ ರು. ದಾನದ ಮೂಲಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದರೆ, ಬಜಾಜ್ ಕುಟುಂಬ 352 ಕೋಟಿ ರು.ನೊಂದಿಗೆ 3ನೇ ಸ್ಥಾನ, ಬಿರ್ಲಾ ಸಮೂಹದ ಕುಮಾರ ಮಂಗಳಂ ಬಿರ್ಲಾ 334 ಕೋಟಿ ರು.ನೊಂದಿಗೆ 4ನೇ ಸ್ಥಾನ ಮತ್ತು ದೇಶದ ನಂ.1 ಉದ್ಯಮಿ ಗೌತಮ್ ಅದಾನಿ (11.16 ಲಕ್ಷ ಕೋಟಿ ರು.ಆಸ್ತಿ) 330 ಕೋಟಿ ರು.,ದಾನದೊಂದಿಗೆ 5ನೇ ಸ್ಥಾನ ಪಡೆದಿದ್ದಾರೆ.
ರೋಹಿಣಿ ನಂ.1:
ಮತ್ತೊಂದೆಡೆ ಮಹಿಳೆಯರ ಪೈಕಿ ಇನ್ಫೋಸಿಸ್ ಸಂಸ್ಥಾಪಕರ ಪೈಕಿ ಒಬ್ಬರಾದ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ 154 ಕೋಟಿ ರು.ದಾನದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ 90 ಕೋಟಿ ರು. ದಾನ ಮಾಡಿರುವ ಸುಶ್ಮಿತಾ ಬಗ್ಚಿ ಇದ್ದಾರೆ.
ದಾನಿಗಳು ಏರಿಕೆ, ಪ್ರಮಾಣ ಇಳಿಕೆ:
ಪ್ರಸಕ್ತ ವರ್ಷ 203 ವ್ಯಕ್ತಿಗಳು 5 ಕೋಟಿ ರು.ಗಿಂತ ಹೆಚ್ಚಿನ ದಾನ ಮಾಡಿದ್ದಾರೆ. 2023ರ ಪಟ್ಟಿಯಲ್ಲಿ 199 ದಾನಿಗಳ ಸರಾಸರಿ ದಾನದ ಪ್ರಮಾಣ 71 ಕೋಟಿ ರು.ನಷ್ಟು ಇದ್ದರೆ, ಪ್ರಸಕ್ತ ಸಾಲಿನಲ್ಲಿ 203 ದಾನಿಗಳನ್ನು ಪರಿಶೀಲಿಸಿದಾಗ ಸರಾಸರಿ ದಾನದ ಪ್ರಮಾಣ 43 ಕೋಟಿ ರು.ಗೆ ಇಳಿದಿದೆ.
ಯಾವ ವಲಯಕ್ಕೆ ದಾನ?:
ವಿವಿಧ ವ್ಯಕ್ತಿಗಳಿಂದ ದಾನ ಪಡೆಯುವಲ್ಲಿ ಶಿಕ್ಷಣ ಮೊದಲ ಸ್ಥಾನದಲ್ಲಿದೆ. ಶಿಕ್ಷಣಕ್ಕೆ ಪ್ರಸಕ್ತ ವರ್ಷ 3680 ಕೋಟಿ ರು. ದಾನ ನೀಡಲಾಗಿದೆ. ನಂತರದ ಸ್ಥಾನದಲ್ಲಿರುವ ಆರೋಗ್ಯ ಕ್ಷೇತ್ರಕ್ಕೆ 626 ಕೋಟಿ ರು.ಮತ್ತು ಗ್ರಾಮೀಣ ಅಭಿವೃದ್ಧಿಗೆ 331 ಕೋಟಿ ರು. ಹಣವನ್ನು ದಾನವಾಗಿ ನೀಡಲಾಗಿದೆ.