ಕಳೆದೊಂದು ವರ್ಷದಲ್ಲಿ ಭಾರೀ ರಾಜಕೀಯ ಸ್ಥಿತ್ಯಂತರ, ಸಿಎಂ ಹೇಮಂತ್‌ ಸೊರೇನ್‌ ಬಂಧನದಂಥ ಘಟನೆಗಳಿಂದ ಸುದ್ದಿಯಲ್ಲಿದ್ದ ಜಾರ್ಖಂಡ್‌ನಲ್ಲಿ ರಾಜ್ಯದ ಮತದಾರರು ಮತ್ತೊಮ್ಮೆ ಹಾಲಿ ಆಡಳಿತಾರೂಢ ಜಾರ್ಖಂಡ್‌ ಮುಕ್ತಿ ಮೋರ್ಚಾ, ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿಕೂಟದ ಕೈಹಿಡಿದ್ದಾರೆ.

 ರಾಂಚಿ : ಕಳೆದೊಂದು ವರ್ಷದಲ್ಲಿ ಭಾರೀ ರಾಜಕೀಯ ಸ್ಥಿತ್ಯಂತರ, ಸಿಎಂ ಹೇಮಂತ್‌ ಸೊರೇನ್‌ ಬಂಧನದಂಥ ಘಟನೆಗಳಿಂದ ಸುದ್ದಿಯಲ್ಲಿದ್ದ ಜಾರ್ಖಂಡ್‌ನಲ್ಲಿ ರಾಜ್ಯದ ಮತದಾರರು ಮತ್ತೊಮ್ಮೆ ಹಾಲಿ ಆಡಳಿತಾರೂಢ ಜಾರ್ಖಂಡ್‌ ಮುಕ್ತಿ ಮೋರ್ಚಾ, ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿಕೂಟದ ಕೈಹಿಡಿದ್ದಾರೆ. ರಾಜ್ಯ ವಿಧಾನಸಭೆಯ 81 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಜೆಎಎಂ ನೇತೃತ್ವದ ಮೈತ್ರಿಕೂಟ 50ಕ್ಕಿಂತ ಹೆಚ್ಚು ಸ್ಥಾನ ಗೆದ್ದು ಮರಳಿ ಅಧಿಕಾರದ ಗದ್ದುಗೆಗೆ ಏರಿದೆ.

ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಾಲಿಗೆ ಇದು ಕಳೆದ ಸಲದ ಪ್ರದರ್ಶನಕ್ಕಿಂತ ಉತ್ತಮವಾಗಿದೆ.

ಇದರೊಂದಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಚುನಾವಣಾ ಪ್ರಚಾರದ ನೇತೃತ್ವದ ವಹಿಸಿದ್ದ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ಗೆ ಭಾರೀ ದೊಡ್ಡ ಗೆಲುವು ಸಿಕ್ಕಂತಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಅಧಿಕಾರ ಹಿಡಿವ ಬಿಜೆಪಿ ಕನಸು ಭಗ್ನವಾದಂತಾಗಿದೆ.

ರಾಜ್ಯದಲ್ಲಿ ಬಿಜೆಪಿಗೆ ಸಿಎಂ ಮುಖ ಆಗಬಲ್ಲ ಸ್ಥಳೀಯ ನಾಯಕತ್ವ ಕೊರತೆ, ಅಭಿವೃದ್ಧಿ ವಿಚಾರಕ್ಕೆ 2ನೇ ಆದ್ಯತೆ ನೀಡಿ ಬರೀ ಬಾಂಗ್ಲಾ ನುಸುಳುಕೋರರ ವಿಷಯವನ್ನೇ ಪ್ರಧಾನವಾಗಿ ಪ್ರಚಾರ ಮಾಡಿದ್ದು ಮುಳುವಾಗಿದೆ.ನುಸುಳುಕೋರರು ವರ್ಸಸ್‌ ಆದಿವಾಸಿ ಕಾರ್ಡ್‌:

ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿ ನಾಯಕರು ನೆರೆಯ ಬಾಂಗ್ಲಾದೇಶದಿಂದ ಜಾರ್ಖಂಡ್‌ಗೆ ಅಕ್ರಮ ವಲಸೆ ಹೆಚ್ಚಾಗುತ್ತಿರುವ ಬಗ್ಗೆ, ವಲಸೆಗೆ ಜೆಎಂಎಂ ಸರ್ಕಾರ ನೆರವು ನೀಡುತ್ತಿರುವುದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದರು.

ಅಕ್ರಮ ವಲಸಿಗರು ರಾಜ್ಯದ ಭೂಮಿ, ಹೆಣ್ಣು ಮಕ್ಕಳು ಮತ್ತು ಆಹಾರವನ್ನು ಕಸಿಯುತ್ತಿದ್ದಾರೆ ಎಂದು ಬಿಜೆಪಿ ಸತತವಾಗಿ ವಾಗ್ದಾಳಿ ನಡೆಸಿತ್ತು. ಜೊತೆಗೆ ತಾನು ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರು ಆದಿವಾಸಿಗಳ ಭೂಮಿ ವಶ ತಡೆಯಲು ಕಾಯ್ದೆ, ಆದಿವಾಸಿಗಳ ಹೆಣ್ಣು ಮಕ್ಕಳ ಮದುವೆಯಾದರೂ ಜಮೀನು ಕೈತಪ್ಪದಂತೆ ಕಾನೂನು ರೂಪಿಸುವ ಭರವಸೆ ನೀಡಿತ್ತು. ಜೊತೆಗೆ ಅಕ್ರಮ ವಲಸೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.ಮತ್ತೊಂದೆಡೆ ಜೆಎಂಎಂ ಆದಿವಾಸಿ ಕಾರ್ಡ್‌ ಅನ್ನೇ ಪ್ರಮುಖವಾಗಿ ಬಳಸಿತ್ತು. ಆದಿವಾಸಿ ನಾಯಕ ಹೇಮಂತ್‌ ಸೊರೇನ್‌ರನ್ನು ಬಿಜೆಪಿ ಬಂಧಿಸಿದೆ ಎಂದು ಆರೋಪಿಸಿತ್ತು. ಜೊತೆಗೆ ಆದಿವಾಸಿ ಅಸ್ಮಿತೆಯನ್ನು ಪ್ರಚಾರಕ್ಕೆ ಬಳಸಿತ್ತು. ಜೊತೆಗೆ ಮಹಿಳೆಯರಿಗೆ ಮಾಸಿಕ 1000 ರು. ಆರ್ಥಿಕ ನೆರವು ನೀಡುವ ಮುಖ್ಯಮಂತ್ರಿ ಮೈಯ್ಯಾ ಸಮ್ಮಾನ್‌ ಯೋಜನೆಯನ್ನು ಭರ್ಜರಿ ಪ್ರಚಾರಕ್ಕೆ ಬಳಸಿತ್ತು. ಅಂತಿಮವಾಗಿ ರಾಜ್ಯದ ಜನತೆ ಅಕ್ರಮ ವಲಸಿಗರ ಬದಲಾಗಿ ಆದಿವಾಸಿಗಳ ಅಸ್ಮಿತೆ ಮತ್ತು ಉಚಿತ ಕೊಡುಗೆ ಪರ ಬ್ಯಾಟಿಂಗ್‌ ಮಾಡಿದಂತೆ ಕಂಡುಬರುತ್ತಿದೆ.ಮಹಿಳಾ ಶಕ್ತಿ:

ರಾಜ್ಯದ 81 ವಿಧಾನಸಭಾ ಕ್ಷೇತ್ರಗಳ ಪೈಕಿ 68ರಲ್ಲಿ ಈ ಬಾರಿ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿದ್ದರು. ಮಾಸಿಕ ಆರ್ಥಿಕ ನೆರವಿನ ಯೋಜನೆಯ ಲಾಭ ಪಡೆದ ಮಹಿಳೆಯರು ದೊಡ್ಡಸಂಖ್ಯೆಯಲ್ಲಿ ಮತ್ತೆ ಜೆಎಂಎಂ ಮೈತ್ರಿಕೂಟಕ್ಕೆ ಮತ ಹಾಕಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದೆ ಎಂದು ಹೇಳಲಾಗಿದೆ.

ಫೀನಿಕ್ಸ್‌ನಂತೆ ಎದ್ದು ಬಂದ ಹೇಮಂತ ಸೊರೇನ್‌

ರಾಂಚಿ: ಜಾರ್ಖಂಡ್‌ ಹಾಲಿ ಸಿಎಂ ಹೇಮಂತ ಸೊರೇನ್‌ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದರೂ, ಈಗ ಗೆಲುವಿನ ಮೂಲಕ ರಾಜಕೀಯ ಮರುಜನ್ಮ ಪಡೆದಿದ್ದಾರೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಖಚಿತವಾಗುತ್ತಿದ್ದಂತೆ 2023ರಲ್ಲಿ ಹೇಮಂತ್‌ ಸೊರೇನ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಪಕ್ಷದ ಹಿರಿಯ ನಾಯಕ ಚಂಪೈ ಸೊರೆನ್ ಅವರನ್ನು ಸಿಎಂ ಮಾಡಲಾಗಿತ್ತು. ಮತ್ತೊಂದೆಡೆ ಸೊರೇನ್‌ನ ಸೋದರನ ಪತ್ನಿ ಸೀತಾ ಸೊರೇನ್‌ ಬಿಜೆಪಿ ಸೇರಿದ್ದು, ರಾಜ್ಯದಲ್ಲಿ ಪಕ್ಷಕ್ಕೆ ಆದ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಗಿತ್ತು.

ಆದರೆ ಕಳೆದ ಜುಲೈನಲ್ಲಿ ಜಾಮೀನು ಸಿಕ್ಕ ಬಳಿಕ ಜೈಲಿಂದ ಹೊರಬಂದು ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದ ಹೇಮಂತ್‌ ಸೊರೇನ್‌, ಪಕ್ಷದ ಜನಪ್ರಿಯ ಯೋಜನೆಗಳು, ಆದಿವಾಸಿ ಅಸ್ಮಿತೆಯನ್ನು ಪ್ರಮುಖವಾಗಿ ಪ್ರಚಾರ ಮಾಡಿ ಜೆಎಂಎಂ ಮೈತ್ರಿಕೂಟವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೇಮಂತ್‌ ಪರ ಅನುಕಂಪವೂ ಗೆಲುವಿನಲ್ಲಿ ಕೆಲಸ ಮಾಡಿದೆ.

ಜಾರ್ಖಂಡ್‌ ಅಸೆಂಬ್ಲಿಗೆ ಸೊರೇನ್‌ ದಂಪತಿ ಪ್ರವೇಶ!

ರಾಂಚಿ: ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರು ವರ್ಷದ ಆರಂಭದಲ್ಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾಗ ತನ್ನ ಪಕ್ಷವನ್ನು ಮುನ್ನಡೆಸುವಲ್ಲಿ ಪತ್ನಿ ಕಲ್ಪನಾ ಸೊರೇನ್‌ ಮಹತ್ತರ ಪಾತ್ರವಹಿಸಿದ್ದರು. ಈಗ ಕಲ್ಪನಾ ಕೂಡ ಗಂಡೇ ಕ್ಷೇತ್ರದಲ್ಲಿ ಜಯಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.ಹೇಮಂತ್‌ ಅವರನ್ನು ಕಳೆದ ಜ.31 ರಂದು ಜಾರಿ ನಿರ್ದೇಶನಾಲಯ ಅಬಕಾರಿ ಹಗರಣ ಪ್ರಕರಣದಡಿ ಬಂಧಿಸಿ, ಜೈಲಿಗಟ್ಟಿದ್ದರು. ಆ ಸಂದರ್ಭದಲ್ಲಿ ಪಕ್ಷದಲ್ಲಿ ಒಡಕು ಉಂಟಾಗದಂತೆ ಎಲ್ಲಾ ನಾಯಕರಲ್ಲಿ ಸಮನ್ವಯ ಸಾಧಿಸಿಕೊಂಡು ತನ್ನ ಚಾಣಕ್ಷತನದಿಂದ ಕಲ್ಪನಾ ಪಕ್ಷವನ್ನು ಮುನ್ನಡೆಸಿದ್ದರು.

ಈ ರೀತಿ ಪಕ್ಷ ಕಟ್ಟಿದ್ದರಿಂದಲೇ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ ಪಕ್ಷ ಜಯಗಳಿಸಲು ಒಂದು ರೀತಿಯಲ್ಲಿ ಕಾರಣವಾಗಿದೆ.