ಸಾರಾಂಶ
ತಮ್ಮ ದಿಲ್ಲಿ ಮನೆ ಶೋಧಿಸಿದ್ದಕ್ಕೆ ಜಾರ್ಖಂಡ್ ಸಿಎಂ ಗರಂ ಆಗಿದ್ದು, ಜಾರಿ ನಿರ್ದೇಶನಾಲಯದ ವಿರುದ್ಧವೇ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ರಾಂಚಿ: ಜಾರ್ಖಂಡ್ ನಿರ್ಗಮಿತ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ತಮ್ಮ ದೆಹಲಿ ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ನಡೆಸಿದ ಶೋಧಕಾರ್ಯದ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ದಿಲ್ಲಿ ಮನೆಯಲ್ಲಿ 1 ಬಿಎಂಡಬ್ಲು ಕಾರು ಹಾಗೂ 36 ಲಕ್ಷ ರು. ಜಪ್ತಿ ಮಾಡಲಾಗಿದೆ. ಇದು ತಮಗೆ ಸೇರಿದ ಕಾರು ಹಾಗೂ ಹಣವಲ್ಲ ಎಂದು ಸೊರೇನ್ ರಾಂಚಿಯ ಎಸ್‌ಸಿ/ಎಸ್‌ಟಿ ಪೊಲೀಸ್ ಠಾಣೆಯಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಕೆಲವು ಇ.ಡಿ. ಹಿರಿಯ ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ರಾಂಚಿಯ ಹಿರಿಯ ಪೊಲೀಸ್ ಅಧೀಕ್ಷಕ ಚಂದನ್ ಕುಮಾರ್ ಸಿನ್ಹಾ ಹೇಳಿದ್ದಾರೆ. ಜಾರ್ಖಂಡ್‌ನಲ್ಲಿ ನಡೆದ ಭೂ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಸೊರೇನ್ ಅವರ ಮನೆಯ ಮೇಲೆ ಸೋಮವಾರ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಈ ನಿವಾಸದಲ್ಲಿ ಸುಮಾರು 13 ಗಂಟೆಗಳ ಕಾಲ ಬೀಡು ಬಿಟ್ಟಿದ್ದ ಅಧಿಕಾರಿಗಳು ಸೊರೇನ್ ಅವರನ್ನು ವಿಚಾರಣೆ ನಡೆಸಲು ಕಾದಿದ್ದರು. ಅಗ 36 ಲಕ್ಷ ರು. ನಗದು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದರು.