ತಿರುಪತಿ ಲಡ್ಡುವಿನ ರಹಸ್ಯ: 500 ವರ್ಷಗಳ ಪರಂಪರೆ -ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಮಾರಾಟ

| Published : Sep 21 2024, 01:55 AM IST / Updated: Sep 21 2024, 06:53 AM IST

ಸಾರಾಂಶ

ತಿರುಪತಿ ತಿಮ್ಮಪ್ಪನ ದೇಗುಲದಷ್ಟೇ ಪ್ರಸಿದ್ಧವಾಗಿರುವ ಲಡ್ಡುವಿನ ಹಿಂದೆ 500 ವರ್ಷಗಳ ಇತಿಹಾಸವಿದೆ. ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತದೆ, ಇದರಿಂದ ದೇಗುಲಕ್ಕೆ ₹500 ಕೋಟಿ ಆದಾಯ ಬರುತ್ತದೆ. ಕಲ್ಯಾಣಂ ಅಯ್ಯಂಗಾರ್ ಎಂಬುವವರು ಈ ಲಡ್ಡುವಿನ ರೂವಾರಿ ಎಂದು ಪರಿಗಣಿಸಲಾಗಿದೆ.

ತಿರುಪತಿ: ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದೇಗುಲದಷ್ಟೇ ಅಲ್ಲಿಯ ಲಡ್ಡು ಕೂಡಾ ಪ್ರಸಾದ ಪ್ರಸಿದ್ಧ. ಈ ಶ್ರೀವಾರಿ ಲಡ್ಡುಗೆ 500 ವರ್ಷಗಳ ಇತಿಹಾಸವಿದೆ. ದೇಗುಲದಲ್ಲಿ ನಿತ್ಯ 3 ಲಕ್ಷ, ವಾರ್ಷಿಕ 1 ಕೋಟಿ ಲಡ್ಡುಗಳನ್ನು ಭಕ್ತರಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಮಾರಾಟದಿಂದಲೇ ದೇಗುಲಕ್ಕೆ ವಾರ್ಷಿಕ 500 ಕೋಟಿ ರು. ಆಸ್ಥಾನಂ ಲಡ್ಡೂ (750 ಗ್ರಾಂ.), ಕಲ್ಯಾಣೋಸ್ತವಂ ಲಡ್ಡೂ ಮತ್ತು ಪ್ರೋಕ್ತಂ ಲಡ್ಡೂ (175 ಗ್ರಾಂ.) ಎಂಬ 3 ವಿಧಗಳಲ್ಲಿ ಇದು ಲಭ್ಯ.

ರೂವಾರಿ: ಕಲ್ಯಾಣಂ ಅಯ್ಯಂಗಾರ್ ಎಂಬವರು ತಿರುಪತಿ ಲಡ್ಡುವಿನ ರೂವಾರಿ ಎನ್ನಲಾಗುತ್ತದೆ. ಅವರು ತಮ್ಮ ಕುಟುಂಬ ಸದಸ್ಯರಿಗೆ ಇದರ ತಯಾರಿಯ ರಹಸ್ಯ ಹೇಳಿಕೊಟ್ಟಿದ್ದು ಅದು ಇಂದೂ ಮುಂದುವರೆದಿದೆ.

ಏನೇನು ಬಳಕೆ: ನಿತ್ಯ ಲಡ್ಡು ತಯಾರಿಗೆ 1 ಟನ್‌ ಕಡಲೆ ಹಿಟ್ಟು, 10 ಟನ್‌ ಸಕ್ಕರೆ, 700 ಕೆ.ಜಿ. ಗೋಡಂಬಿ, 150 ಕೆ.ಜಿ. ಏಲಕ್ಕಿ, 300-500 ಲೀಟರ್‌ ತುಪ್ಪ, 500 ಕೆ.ಜಿ. ಕಲ್ಲುಸಕ್ಕರೆ, 540 ಕೆ.ಜಿ. ದ್ರಾಕ್ಷಿ ಬಳಸಲಾಗುತ್ತದೆ. ವಿಶಿಷ್ಟ ಪ್ಯಾಕಿಂಗ್‌ನಿಂದಾಗಿ ಇವು 15 ದಿನ ತಾಜಾ ಉಳಿಯುತ್ತವೆ.

ವಿಶಿಷ್ಠ ಗುರುತು: 2009ರಲ್ಲಿ ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಮೂಲವನ್ನು ಗುರುತಿಸುವ ಜಿಐ ಟ್ಯಾಗ್‌ ಮತ್ತು ಬೌದ್ಧಿಕ ಆಸ್ತಿ ಹಕ್ಕು ಶ್ರೀವಾರಿ ಲಡ್ಡುಗೆ ಒಲಿದಿದೆ.