ಅದಾನಿಗೆ ಮುಳುವಾಗಿದ್ದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಹಿಂಡನ್‌ಬರ್ಗ್‌ ಬಂದ್‌!

| Published : Jan 17 2025, 12:49 AM IST / Updated: Jan 17 2025, 04:36 AM IST

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಭಾರತದ ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ವರದಿ ಮೂಲಕ ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದ ವಿವಾದಾತ್ಮಕ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಇದೀಗ ಬಾಗಿಲು ಹಾಕಲು ನಿರ್ಧರಿಸಿದೆ.

ವಾಷಿಂಗ್ಟನ್‌/ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಭಾರತದ ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ವರದಿ ಮೂಲಕ ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದ ವಿವಾದಾತ್ಮಕ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಇದೀಗ ಬಾಗಿಲು ಹಾಕಲು ನಿರ್ಧರಿಸಿದೆ.

2017ರಲ್ಲಿ ಆರಂಭಿಸಿದ್ದ ಈ ಹೂಡಿಕೆ ಸಂಶೋಧನಾ ಸಂಸ್ಥೆಯನ್ನು ವಿಸರ್ಜಿಸುತ್ತಿರುವುದಾಗಿ ಸಂಸ್ಥಾಪಕ ಆ್ಯಂಡರ್ಸನ್‌ ಘೋಷಿಸಿದ್ದಾರೆ. ಯೋಜಿತ ಕೆಲಸಗಳೆಲ್ಲಾ ಮುಗಿದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲು ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗ ಈ ಬೆಳವಣಿಗೆ ನಡೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಭಾರತ ವಿರೋಧಿ ಉದ್ಯಮಿ ಸೊರೋಸ್‌ ಬೆಂಬಲಿತ ಈ ಕಂಪನಿ ವಿರುದ್ಧ ಭಾರತ ಮತ್ತು ಅಮೆರಿಕವು ಜಂಟಿ ತನಿಖೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬ ಅನುಮಾನ ಇದೀಗ ಮೂಡಿದೆ.

150 ಶತಕೋಟಿ ಡಾಲರ್‌ ನಷ್ಟ: 2023ರ ಜನವರಿಯಲ್ಲಿ ಹಿಡನ್‌ಬರ್ಗ್‌ ಅದಾನಿ ಗ್ರೂಪ್‌ ಮೇಲೆ ಭ್ರಷ್ಚಾಚಾರದ ಆರೋಪ ಮಾಡಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್‌ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ 150 ಶತಕೋಟಿ ಡಾಲರ್‌ನಷ್ಟು ಕುಸಿದಿತ್ತು. ಕೀನ್ಯಾದ ಏರ್ಪೋರ್ಟ್‌ ನಿರ್ವಹಣಾ ಟೆಂಡರ್‌ ಕೂಡ ಕೈತಪ್ಪಿಹೋಗಿತ್ತು.

ಹಿಡನ್‌ಬರ್ಗ್‌ ಸಂಸ್ಥೆಯು ಭ್ರಷ್ಟಾಚಾರದ ಆರೋಪ ಹೊರಿಸಿ ಅಮೆರಿಕ ಸೇರಿ ವಿಶ್ವದ ಪ್ರಮುಖ ಕಂಪನಿಗಳ ವಿರುದ್ಧ ವರದಿ ಪ್ರಕಟಿಸುತ್ತಿತ್ತು. ಇದಕ್ಕೂ ಮುನ್ನ ಆ ಕಂಪನಿಯ ಷೇರುಗಳನ್ನು ಮಾರುಕಟ್ಟೆಯಲ್ಲಿ ತಾನೇ ಶಾರ್ಟ್‌ ಸೆಲ್‌(ಷೇರು ಖರೀದಿಸದೆ ಮಾರಾಟ) ಮಾಡಿ ಲಾಭಗಳಿಸುತ್ತಿತ್ತು.

ಹಿಂಡನ್‌ಬರ್ಗ್‌ ಕೆಲಸವೇನು?

ಹಣಕಾಸು ಫಾರೆನ್ಸಿಕ್‌ ಸಂಶೋಧನೆ ಹಿಂಡನ್‌ಬರ್ಗ್‌ ಕೆಲಸ. ಇದುವರೆಗೂ ಈ ಸಂಸ್ಥೆ ಬಿಡುಗಡೆ ಮಾಡಿದ ವರದಿಗಳು ಜಾಗತಿಕ ಮಟ್ಟದಲ್ಲಿ 100ಕ್ಕೂ ಹೆಚ್ಚು ಖ್ಯಾತನಾಮರ ವಿರುದ್ಧ ಪ್ರಕರಣ ದಾಖಲು ಕಾರಣವಾಗಿದೆ.

ಅದಾನಿ ಷೇರು ಜಿಗಿತ ಹಿಂಡನ್‌ಬರ್ಗ್‌ ಮುಚ್ಚುತ್ತಿರುವ ಸುದ್ದಿ ಬೆನ್ನಲ್ಲೇ ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳು ಗುರುವಾರ ಮಾರುಕಟ್ಟೆಯಲ್ಲಿ ಸುಮಾರು ಶೇ.9ರವರೆಗೆ ಜಿಗಿದಿವೆ.