- ಒಂದು ವರ್ಗ ಹೊರಗಿಟ್ಟರೆ ಹಿಂದು ಸಮಾಜ ಒಡೆಯುತ್ತೆ


- ಶೃಂಗೇರಿ ಭಕ್ತರು ಕಂಚಿಗೆ ಹೋಗಬಾರದೆಂದರೆ ಹೇಗೆ?

ಪಿಟಿಐ ನವದೆಹಲಿ‘ಪ್ರತಿಯೊಬ್ಬರಿಗೂ ಎಲ್ಲಾ ದೇವಾಲಯ ಮತ್ತು ಮಠಗಳಿಗೆ ಪ್ರವೇಶವಿರಬೇಕು. ಯಾವುದೇ ಒಂದು ಪಂಗಡವನ್ನು ಹೊರಗಿಡುವುದು ಹಿಂದೂ ಧರ್ಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಮತ್ತು ಸಮಾಜವನ್ನು ಒಡೆಯುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.ಶಬರಿಮಲೆ ದೇಗುಲ ಸೇರಿದಂತೆ ಹಲವು ದೇಗುಲಗಳಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ 9 ಜಡ್ಜ್‌ಗಳ ಸಾಂವಿಧಾನಿಕ ಪೀಠ ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿತ್ತು.ನಾಯರ್‌ ಸರ್ವಿಸ್ ಸೊಸೈಟಿ ಮತ್ತು ಶಬರಿಮಲೆ ಅಯ್ಯಪ್ಪ ಭಕ್ತರ ಸಂಘಟನೆಗಳ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್, ‘ನಾವು ಪ್ರತ್ಯೇಕ ಧಾರ್ಮಿಕ ಪಂಗಡವಾಗಿದ್ದು, ಬೆಟ್ಟದ ಮೇಲಿನ ದೇವಸ್ಥಾನವನ್ನು ನಿರ್ವಹಿಸುವ ಹಕ್ಕು ನಮಗೆ ಮಾತ್ರವಿದೆ. ಅಲ್ಲಿ ನಮ್ಮ ಹೊರತು ಇತರ ಸಂಪ್ರದಾಯದವರಿಗೆ ಪ್ರವೇಶವಿಲ್ಲ. ಸಂವಿಧಾನದ ಅನುಚ್ಛೇದ 26(ಬಿ) ಧಾರ್ಮಿಕ ಪಂಗಡಗಳಿಗೆ ತಮ್ಮ ಪ್ರತ್ಯೇಕ ಸಂಪ್ರದಾಯಗಳನ್ನು ಪಾಲಿಸುವ ಹಕ್ಕು ನೀಡುತ್ತದೆ. ಇದು ಅನುಚ್ಛೇದ 25(2)(ಬಿ)ಗಿಂತ ಹೆಚ್ಚು ಪ್ರಾಧಾನ್ಯ ಹೊಂದಿದೆ’ ಎಂದು ವಾದಿಸಿದರು.ಅನುಚ್ಛೇದ 25(2)(ಬಿ) ಆಡಳಿತಕ್ಕೆ ಎಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಸಾರ್ವಜನಿಕರಿಗೆ ತೆರೆಯುವ ಅಧಿಕಾರ ನೀಡುತ್ತದೆ.ಈ ವೇಳೆ ಪ್ರತಿಕ್ರಿಯಿಸಿದ ನ್ಯಾ. ಬಿ.ವಿ. ನಾಗರತ್ನ, ‘ಒಂದು ಆತಂಕವಿದೆ. ವೆಂಕಟರಮಣ ದೇವರ ತೀರ್ಪಿನ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರನ್ನು ಹೊರತುಪಡಿಸಿ ಇತರರು ಪ್ರವೇಶಿಸಬಾರದು ಎಂದು ಹೇಳಲಾಗಿದೆ. ಆದರೆ ಅದು ಹಿಂದೂ ಧರ್ಮಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ಎಲ್ಲರಿಗೂ ಪ್ರತಿಯೊಂದು ದೇವಸ್ಥಾನ ಮತ್ತು ಮಠಕ್ಕೂ ಪ್ರವೇಶವಿರಬೇಕು. ಶಬರಿಮಲೆ ತೀರ್ಪಿನ ವಿವಾದವನ್ನು ಬದಿಗಿಡಿ. ಆದರೆ ನೀವು ‘ಅದು ಒಂದು ಪದ್ಧತಿ ಮತ್ತು ಧರ್ಮದ ವಿಷಯ’ ಎಂದು ಹೇಳಿದರೆ, ನಾನು ನನ್ನ ಪಂಗಡ ಮಾತ್ರ ದೇವಸ್ಥಾನಕ್ಕೆ ಹೋಗಬೇಕು, ಇತರರು ಹೋಗಬಾರದು ಎನ್ನುತ್ತೇನೆ. ಇಂಥದ್ದು ಹಿಂದೂ ಧರ್ಮಕ್ಕೆ ಒಳ್ಳೆಯದಲ್ಲ. ಇದು ಧರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಬಿಡಬಾರದು’ ಎಂದು ಅಭಿಪ್ರಾಯಪಟ್ಟರು.ನಂತರ ವೈದ್ಯನಾಥನ್ ಅವರು, ‘ಕೇರಳದಲ್ಲಿ ಕೆಲವು ಖಾಸಗಿ ಕುಟುಂಬಗಳ ದೇವಾಲಯಗಳಿವೆ. ಅಲ್ಲಿ ಕೇವಲ ಆ ಕುಟುಂಬದ ಸದಸ್ಯರು ಮಾತ್ರ ಹೋಗುತ್ತಾರೆ. ಅವರು ರಾಜ್ಯ ಅಥವಾ ಸಾರ್ವಜನಿಕರಿಂದ ನಿಧಿ ಪಡೆಯುವುದಿಲ್ಲ. ಅದನ್ನೂ ಎಲ್ಲರಿಗೂ ಮುಕ್ತಗೊಳಿಸಬೇಕೆಂಬುದು ಸರಿಯೇ?’ ಎಂಬ ವಾದ ಮುಂದಿಟ್ಟರು.ಇದಕ್ಕೆ ಉತ್ತರಿಸಿದ ನ್ಯಾ. ನಾಗರತ್ನ, ‘ನಾವು ಖಾಸಗಿ ದೇವಾಲಯಗಳ ಬಗ್ಗೆ ಮಾತಾಡುತ್ತಿಲ್ಲ. ನಿರ್ದಿಷ್ಟ ದೇಗುಲವೊಂದಕ್ಕೆ ಗೌಡ ಸಾರಸ್ವತ ಬ್ರಾಹ್ಮಣರು ಮಾತ್ರ ಹೋಗಬೇಕು ಎನ್ನುವುದು ಹಾಗೂ ಕಂಚಿ ಮಠದವರು ಕಂಚಿಗೆ ಮಾತ್ರ ಹೋಗಬೇಕು, ಶೃಂಗೇರಿಗೆ ಹೋಗಬಾರದು; ಶೃಂಗೇರಿಯವರು ಶೃಂಗೇರಿಗೆ ಮಾತ್ರ ಹೋಗಬೇಕು, ಕಂಚಿಗೆ ಹೋಗಬಾರದು ಎಂದರೆ ಅದು ಧರ್ಮಕ್ಕೆ ಹಾನಿಯಾಗುತ್ತದೆ’ ಎಂದು ಎಚ್ಚರಿಸಿದರು.