ಸಾರಾಂಶ
ಪಟನಾ: ಮತದಾನಕ್ಕೆ ಬುರ್ಖಾ ಧರಿಸಿ ಬರುವ ಮಹಿಳೆಯರ ಮುಖವನ್ನು ಮತದಾನ ಗುರುತಿನ ಚೀಟಿಯಲ್ಲಿ ಪರಿಶೀಲಿಸಿ ಬಳಿಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ವಿಧಾನಸಭೆ ಚುನಾವಣೆ ಪರಿಶೀಲನೆಗಾಗಿ ಶನಿವಾರ ಪಟನಾಗೆ ಆಗಮಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಈ ಬೇಡಿಕೆ ಇರಿಸಿದ್ದಾರೆ.‘ಮತದಾನವನ್ನು 1 ಅಥವಾ 2 ಹಂತಗಳಲ್ಲಿ ಮಾಡಬೇಕು. ಅದಕ್ಕೂ ಮೊದಲು ಮತಪಟ್ಟಿಗೆ ಮುತ್ತಿಗೆ ಹಾಕಿರುವ ಇತಿಹಾಸ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಬೇಕು. ಭದ್ರತಾ ಪಡೆಗಳ ಪರೇಡ್ ಮಾಡಬೇಕು. ಬುರ್ಖಾ ಧರಿಸಿದ ಮಹಿಳೆಯರ ಮುಖವನ್ನು ಸರಿಯಾಗಿ ಪರಿಶೀಲಿಸಿ ನಂತರ ಮತದಾನಕ್ಕೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಛಠ್ ಆದ ತಕ್ಷಣವೇ ಚುನಾವಣೆಗೆ ಮನವಿ:ಮಾಸಾಂತ್ಯಕ್ಕೆ ಛಠ್ ಪೂಜೆ ಇದೆ. ಈ ವೇಳೆ ಬೇರೆ ರಾಜ್ಯಗಳ ಬಿಹಾರಿಗಳೂ ರಾಜ್ಯಕ್ಕೆ ಬಂದಿರುತ್ತಾರೆ. ಹಬ್ಬ ಆದ ತಕ್ಷಣವೇ ಮತದಾನ ನಡೆದರೆ ಹೆಚ್ಚಿನ ಸಂಖ್ಯೆಯ ಮತದಾನ ಸಾಧ್ಯ. ಹೀಗಾಗಿ ಛಠ್ ಮುಗಿದ ತಕ್ಷಣವೇ ಚುನಾವಣೆ ನಡೆಸಿ ಎಂದು ಕೆಲವು ಪಕ್ಷಗಳು ಕುಮಾರ್‌ರನ್ನು ಕೋರಿದವು.
ನ.22ಕ್ಕೆ ಬಿಹಾರ ವಿಧಾನಸಭೆ ಅವಧಿ ಅಂತ್ಯವಾಗುತ್ತದೆ.==
ಪಾಕ್ ದೂತಾವಾಸದಲ್ಲಿ ಭಾರತದ ವಿರುದ್ಧ ಗೂಢಚಾರಿಗಳ ನೇಮಕ?- ಪಾಕ್ ವೀಸಾ ಪಡೆಯಲು ಬಂದವರು ಬಲೆಗೆ
- ಇತ್ತೀಚೆಗೆ ಯೂಟ್ಯೂಬರ್ ವಾಸಿಂ ಅಕ್ರಂ ಸೆರೆ
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿರುವ ಪಾಕಿಸ್ತಾನದ ದೂತಾವಾಸ, ಭಾರತದ ವಿರುದ್ಧವೇ ಪಿತೂರಿ ನಡೆಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ರಾಯಭಾರ ಕಚೇರಿಯ ವೀಸಾ ವಿಭಾಗದಲ್ಲಿ, ವೀಸಾ ಪಡೆಯಲು ಬರುವ ಭಾರತೀಯರನ್ನು ಪಾಕ್ ಪರ ಬೇಹುಗಾರಿಕೆಗೆ ನೇಮಿಸಿಕೊಳ್ಳಲಾಗುತ್ತಿತ್ತು ಎಂದು ಉನ್ನತ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ಟೀವಿ ಚಾನೆಲ್ ಒಂದು ವರದಿ ಮಾಡಿದೆ.
ಇತ್ತೀಚೆಗಷ್ಟೇ, ಹರ್ಯಾಣದ ಪಲ್ವಾಲ್‌ನಲ್ಲಿ ವಾಸಿಂ ಅಕ್ರಂ ಎಂಬ ಯೂಟ್ಯೂಬರ್‌ನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು ಹಾಗೂ ಆತನಿಗೆ ಪಾಕ್ ನಂಟಿರುವುದು ಪತ್ತೆಯಾಗಿತ್ತು. ಇದೀಗ ಆತ ಕೊರಿಯರ್ ಕೊಡುವ ನೆಪದಲ್ಲಿ ದೂತಾವಾಸಕ್ಕೆ ಹೋಗಿ, ಗುಪ್ತ ಮಾಹಿತಿಗಳನ್ನು ನೀಡುತ್ತಿದ್ದುದು ತಿಳಿದುಬಂದಿದೆ. ಇದರೊಂದಿಗೆ, ವೀಸಾ ನೀಡುವ ಹೆಸರಲ್ಲಿ ನಡೆಯುತ್ತಿರುವ ಗುಪ್ತದಂಧೆ ಬೆಳಕಿಗೆ ಬಂದಿದೆ.ಈ ಮೊದಲು ಹರ್ಯಾಣದವಳೇ ಆದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕೂಡ ಪಾಕ್ ರಾಯಭಾರಿಗಳ ಜತೆ ಸಂಪರ್ಕದಲ್ಲಿದ್ದು ಸಿಕ್ಕಿಬಿದ್ದಿದ್ದಳು.ಪ್ರಕ್ರಿಯೆ ಹೇಗೆ?:ಸಿವಿಲ್ ಎಂಜಿನಿಯರ್ ಆಗಿದ್ದ ಅಕ್ರಂ ಹೇಗೆ ಗುಪ್ತಚರನಾಗಿ ನೇಮಕವಾದ ಎಂದು ನೋಡುವುದಾದರೆ, 2022ರಲ್ಲಿ ಪಾಕ್ ವೀಸಾಗಾಗಿ ಆತ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ 20,000 ರು. ಲಂಚ ನೀಡಿದಾಗ ಅದು ಲಭಿಸಿತ್ತು. ಕೊಂಚ ಸಮಯದ ಬಳಿಕ ಹ್ಯಾಂಡ್ಲರ್ ಒಬ್ಬನಿಂದ ಅಕ್ರಂಗೆ 4-5 ಲಕ್ಷ ರು. ನೀಡಿ, ಸಿಮ್ ಕಾರ್ಡ್ ಕೂಡ ಒದಗಿಸಲಾಯಿತು.
ಆತ ಪಾಕಿಸ್ತಾನಕ್ಕೆ ಹೋಗಿಬಂದ ನಂತರವೂ ದೂತಾವಾಸದೊಂದಿಗೆ ಸಂಪರ್ಕದಲ್ಲಿದ್ದ. ಹಣಕಾಸು ಮತ್ತು ಲಾಜಿಸ್ಟಿಕ್ಸ್ ಒದಗಿಸುವ ಕೆಲಸ ಮಾಡುವ ಸೋಗಿನಲ್ಲಿ ಭಾರತೀಯ ಸೈನಿಕರಿಗೆ ಸೇರಿದ ಸಿಮ್ ಕಾರ್ಡ್, ಒಟಿಪಿ ಹಾಗೂ ಇತರೆ ಮಾಹಿತಿಯನ್ನು ಒದಗಿಸುತ್ತಿದ್ದ.ಅಕ್ರಂನಂತೆ ವೀಸಾಗಾಗಿ ಬರುವವರನ್ನು ಬೇಹುಗಾರರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕೆಲವನ್ನು ಮುಖ್ಯವಾಗಿ, ಪಾಕಿಸ್ತಾನದಲ್ಲಿ ಸಂಬಂಧಿಕರನ್ನು ಹೊಂದಿರುವ ಗಡಿಪ್ರದೇಶದವರಿಗೆ ವಹಿಸಲಾಗುತ್ತದೆ. ಅವರೊಂದಿಗೆ ವಾಟ್ಸ್‌ಅಪ್‌ನಲ್ಲಿ ಸಂಪರ್ಕದಲ್ಲಿದ್ದು, ಯುಪಿಐ ಮೂಲಕ ಹಣ ಕೊಡಲಾಗುತ್ತದೆ.==
ಬಿಹಾರಿ ಯುವಕರ ವಲಸೆಗೆ ಆರ್‌ಜೆಡಿ ಕಾರಣ: ಮೋದಿ- ರಾಹುಲ್ ಜನನಾಯಕ ಅಲ್ಲ, ಕರ್ಪೂರಿ ಜನನಾಯಕ
ನವದೆಹಲಿ: ‘ಬಿಹಾರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಲು ಆರ್‌ಜೆಡಿ ಅವಧಿಯಲ್ಲಿದ್ದ ಕಳಪೆ ಶಿಕ್ಷಣವೇ ಕಾರಣ. ಆದರೆ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಪರಿಸ್ಥಿತಿಯನ್ನು ಸುಧಾರಿಸಿ ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಅವರು, ‘ಕಾಂಗ್ರೆಸ್ ನಾಯಕರೊಬ್ಬರು ತಮ್ಮನ್ನು ತಾವು ಜನನಾಯಕ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದರೆ ಭಾರತರತ್ನ ಪುರಸ್ಕೃತ ಕರ್ಪೂರಿ ಠಾಕೂರ್ ನಿಜವಾದ ಜನನಾಯಕ’ ಎಂದಿದ್ದಾರೆ.
ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಿತೀಶ್ ನೇತೃತ್ವದ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ಹೊಸ ಸಂಕಲ್ಪಗಳನ್ನು ತೆಗೆದುಕೊಂಡಿದ್ದು, ಕಳೆದ 20 ವರ್ಷಗಳಿಗೆ ಹೋಲಿಸಿದರೆ ಮುಂದಿನ 5 ವರ್ಷಗಳಲ್ಲಿ ಉದ್ಯೋಗ ಪಡೆಯುವ ಜನರ ಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ. ಈ ಮೂಲಕ, ಯುವಕರಿಗೆ ರಾಜ್ಯದಲ್ಲೇ ಉದ್ಯೋಗ ಕೊಡಿಸುವ ಗುರಿ ಹೊಂದಿದೆ’ ಎಂದರು.==
ಗಡೀಪಾರಾದರೆ ನೀರವ್ ತನಿಖೆ ಇಲ್ಲ: ಭಾರತ- ಬರೀ ಕೋರ್ಟ್‌ನಲ್ಲಿ ದೇಶಭ್ರಷ್ಟನ ವಿಚಾರಣೆ
- ಬ್ರಿಟನ್ ಕೋರ್ಟ್‌ಗೆ ಹೇಳಲಿರುವ ಭಾರತ
- ನ.23ರಂದು ಗಡೀಪಾರು ಬಗ್ಗೆ ವಿಚಾರಣೆ--
- ಗಡೀಪಾರು ವಿರುದ್ಧ ಮತ್ತೆ ಬ್ರಿಟನ್ ಕೋರ್ಟ್‌ಗೆ ನೀರವ್
- ಗಡೀಪಾರು ಬಳಿಕ ನನ್ನ ವಿರುದ್ಧ ತನಿಖೆ ನಡೆಸಬಹುದು
- ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉದ್ಯಮಿ ಆತಂಕ
- ನೀರವ್ ಕೋರ್ಟ್ ವಿಚಾರಣೆ ಎದುರಿಸಿದರಷ್ಟೇ ಸಾಕು- ಲಂಡನ್ ಕೋರ್ಟ್‌ಗೆ ತಿಳಿಸಲು ಮುಂದಾದ ಭಾರ
---
ನವದೆಹಲಿ: 6498 ಕೋಟಿ ರು. ಬ್ಯಾಂಕ್ ವಂಚನೆ ಕೇಸಲ್ಲಿ ಭಾರತಕ್ಕೇನಾದರೂ ಗಡೀಪಾರಾದರೆ ಅಲ್ಲಿನ ತನಿಖಾ ಸಂಸ್ಥೆಗಳು ತನ್ನನ್ನು ತೀವ್ರ ವಿಚಾರಣೆಗೊಳಪಡಿಸಬಹುದು ಎಂದು ಹೇಳಿ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಮತ್ತೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಕದಬಡಿದಿದ್ದಾನೆ. ಈ ಮೂಲಕ ನ ಬ್ರಿಟನ್ ಕೋರ್ಟ್‌ನಲ್ಲಿ ಗಡೀಪಾರಿಗೆ ಸಂಬಂಧಿಸಿದ ಪ್ರಕರಣದ ಮರು ವಿಚಾರಣೆಗೆ ಮನವಿ ಮಾಡಿದ್ದಾನೆ. ಅದರಂತೆ ನ.23ರಂದು ಈ ಕುರಿತು ವಿಚಾರಣೆ ಆರಂಭವಾಗಲಿದೆ.
ಇದಕ್ಕೆ ಪ್ರತಿಯಾಗಿ ಭಾರತೀಯ ಅಧಿಕಾರಿಗಳು, ‘ನೀರವ್ ಮೋದಿ ಕೇವಲ ಕೋರ್ಟ್ ವಿಚಾರಣೆಯನ್ನಷ್ಟೇ ಎದುರಿಸಬೇಕಿದೆ, ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ ಏಜೆನ್ಸಿಗಳು ಅವರ ವಿಚಾರಣೆ ನಡೆಸುವ ಅಗತ್ಯವಿಲ್ಲ. ಒಂದು ವೇಳೆ ವೆಸ್ಟ್‌ಮಿನಿಸ್ಟರ್ ಕೋರ್ಟ್ ಕೇಳಿದರೆ, ಭಾರತದ ನ್ಯಾಯಾಲಯದಲ್ಲಿ ಅವರ ವಿಚಾರಣೆ ಮಾತ್ರ ನಡೆಯಲಿದೆ ಎಂದು ಭರವಸೆ ನೀಡಲು ಸಿದ್ಧರಿದ್ದೇವೆ’ ಎಂದಿದ್ದಾರೆ.ಮುಂಬೈ ಜೈಲಲ್ಲಿ ಸುರಕ್ಷತೆ:‘ಇದರ ಜತೆ ನೀರವ್ ಮೋದಿ ಅವರನ್ನು ಮುಂಬೈನ ಆರ್ಥರ್ ರಸ್ತೆ ಜೈಲಿನ 12ನೇ ಬರಾಕ್‌ನಲ್ಲಿಡಲಾಗುವುದು. ಅಲ್ಲಿ ಅವರ ಮೇಲೆ ಯಾವುದೇ ಹಿಂಸೆ ಅಥವಾ ದುರ್ನಡತೆಗೆ ಅವಕಾಶ ಇರುವುದಿಲ್ಲ. ಅಗತ್ಯ ಆರೋಗ್ಯ ಸೌಲಭ್ಯ ಸಿಗುವಂತೆಯೂ ನೋಡಿಕೊಳ್ಳಲಾಗುವುದು’ ಎಂದೂ ತಿಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 6498 ಕೋಟಿ ರು. ವಂಚನೆ ಪ್ರಕರಣದಲ್ಲಿ ಆಭರಣ ಉದ್ಯಮಿಯಾಗಿರುವ ನೀರವ್ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ನೀರವ್ ಗಡೀಪಾರಿಗೆ 2019ರಿಂದ ಭಾರತ ಪ್ರಯತ್ನ ನಡೆಸುತ್ತಲೇ ಇದೆ.
==ದೇವಸ್ವಂ ದಾಖಲೆಯಲ್ಲಿ ತಾಮ್ರ ಮಾತ್ರ ಉಲ್ಲೇಖ, ಚಿನ್ನವಿಲ್ಲ: ಆರೋಪಿ ಸ್ಫೋಟಕ ಹೇಳಿಕೆ
-ಶಬರಿಮಲೆ ವಿಗ್ರಹಗಳ 4 ಕೆಜಿ ಚಿನ್ನ ಕಣ್ಮರೆ ಪ್ರಕರಣ
-ಟಿಡಿಬಿ ವಿರುದ್ಧ ಬೆಂಗಳೂರಿಗ ಉನ್ನಿಕೃಷ್ಣನ್ ಆರೋಪ
ತಿರುವನಂತಪುರಂ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತನಗೆ ನೀಡಿದ ದಾಖಲೆಗಳಲ್ಲಿ ಕವಚದಲ್ಲಿ ತಾಮ್ರ ಮಾತ್ರ ಇರುವುದಾಗಿ ತಿಳಿಸಿದೆ, ಅದರಲ್ಲಿ ಚಿನ್ನದ ಉಲ್ಲೇಖವೇ ಇಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ.2019ರಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ಕವಚಗಳನ್ನು ಉನ್ನಿಕೃಷ್ಣನ್ ಪೊಟ್ಟಿ ಮರುಲೇಪನಕ್ಕಾಗಿ ಚೆನ್ನೈಗೆ ಕೊಂಡೊಯ್ದಿದ್ದ. ಅದನ್ನು ಹಿಂದಿರುಗಿಸುವಾಗ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪೊಟ್ಟಿ, ‘ನನಗೆ ನೀಡಲಾದ ದಾಖಲೆಯಲ್ಲಿ ಆ ಕವಚಗಳು ತಾಮ್ರದ್ದಾಗಿದ್ದವು ಎಂದು ನಮೂದಿಸಲಾಗಿದೆ. ಮಹಜರ್ ದಾಖಲೆಗಳಲ್ಲಿಯೂ ಇದನ್ನೇ ಉಲ್ಲೇಖಿಸಲಾಗಿದೆ. ನಾನು ದಾಖಲೆಗಳ ಮೂಲಕ ಮಾತ್ರ ಹೋಗಬಲ್ಲೆ. ಬಹುಶಃ ಸವಕಳಿಯಿಂದಾಗಿ, ಚಿನ್ನ ಕಳೆದುಹೋಗಿರಬಹುದು. ಹೀಗಾಗಿಯೇ ಟಿಡಿಬಿ ಮರುಲೇಪನ ಮಾಡಲು ನಿರ್ಧರಿಸಿರಬಹುದು’ ಎಂದಿದ್ದಾನೆ.
ಚಿನ್ನದಲ್ಲಿ ಕೊರತೆ ಕಂಡುಬಂದ ಸಂಗತಿ ಈಗಾಗಲೇ ಕೇರಳದಲ್ಲಿ ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ. ದೇಗುಲದ ಸಮಗ್ರ ಆಸ್ತಿಯ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ನಡುವೆ ಪೊಟ್ಟಿಯಿಂದ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ.