ಸಾರಾಂಶ
ಮಂದಗತಿಯಲ್ಲಿ ಸಾಗುತ್ತಿರುವ ದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ)ವನ್ನು ಶೇ.6.50 ರಿಂದ ಶೇ.6.25ಕ್ಕೆ ಇಳಿಸುವ ಘೋಷಣೆ ಮಾಡಿದೆ.
ಮುಂಬೈ: ಮಂದಗತಿಯಲ್ಲಿ ಸಾಗುತ್ತಿರುವ ದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ)ವನ್ನು ಶೇ.6.50 ರಿಂದ ಶೇ.6.25ಕ್ಕೆ ಇಳಿಸುವ ಘೋಷಣೆ ಮಾಡಿದೆ. ಇದರಿಂದ ಗೃಹ, ವಾಹನ, ಇತರೆ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದ್ದರೆ, ಠೇವಣಿಗಳ ಮೇಲಿನ ಬಡ್ಡಿದರ ಏರಿಕೆಯಾಗಲಿದೆ.
ಆದರೆ ಈ ಏರಿಕೆ- ಇಳಿಕೆ ಆಯಾ ಬ್ಯಾಂಕ್‌ಗಳು ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿದೆ.
ಆರ್‌ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿ ಶುಕ್ರವಾರ ಪ್ರಕಟಿಸಿದ ದ್ವೈಮಾಸಿಕ ಸಾಲ ನೀತಿಯಲ್ಲಿ ರೆಪೋ ದರವನ್ನು ಶೇ.0.25ರಷ್ಟು ಇಳಿಸುವ ನಿರ್ಧಾರ ಪ್ರಕಟಿಸಿತು. 2020ರ ಮೇ ತಿಂಗಳ ಬಳಿಕ ಅಂದರೆ ಸುಮಾರು 5 ವರ್ಷ ನಂತರ ರೆಪೋ ದರ ಇಳಿಕೆ ಇದೇ ಮೊದಲು. ಜೊತೆಗೆ ಎರಡೂವರೆ ವರ್ಷಗಳಲ್ಲೇ ಮೊದಲ ಬಾರಿಗೆ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿದೆ.
ರೆಪೋ ದರ ಕಡಿತಕ್ಕೆ ಕಾರಣ ಏನು?:
ಆರ್ಥಿಕತೆಗೆ ಹೊಡೆತ ನೀಡಿದ್ದ ಹಣದುಬ್ಬರ ಇದೀಗ ಹಿಂದಿನ ಹಣಕಾಸು ನೀತಿಗಳ ಬೆಂಬಲ ಮತ್ತು ಆಹಾರಧಾನ್ಯಗಳ ಉತ್ಪಾದನೆಯಲ್ಲಿನ ಸುಧಾರಣೆಯಿಂದಾಗಿ ನಿಧಾನವಾಗಿ ಇಳಿಮುಖವಾಗುತ್ತಿದೆ. ಆದರೆ ಆರ್ಥಿಕತೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದೇ ಮಂದಗತಿಯಲ್ಲಿ ಸಾಗಿದೆ. ಹೀಗಾಗಿಯೇ ಜನರ ಕೈಗೆ ದುಡ್ಡು ನೀಡುವ ಹಲವು ಕ್ರಮಗಳನ್ನು ಬಜೆಟ್‌ನಲ್ಲಿ ಸರ್ಕಾರ ಪ್ರಕಟಿಸಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಬಡ್ಡಿ ದರ ಮತ್ತಷ್ಟು ಇಳಿಸಿ ಜನರಿಗೆ ನೆರವಾಗಲು ಆರ್‌ಬಿಐ ಮುಂದಾಗಿದೆ.
ಜಿಡಿಪಿ ದರಶೇ.6.7:ಇದೇ ವೇಳೆ ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ದರ ಶೇ.6.7ರಷ್ಟು ಇರಲಿದೆ ಎಂದು ಆರ್‌ಬಿಐ ಹೇಳಿದೆ. ಉತ್ತಮ ರಬಿ ಬೆಳೆ ಮತ್ತು ಕೈಗಾರಿಕಾ ಚಟುವಟಿಕೆಗಳಲ್ಲಿನ ಚೇತರಿಕೆ ಹಿನ್ನೆಲೆಯಲ್ಲಿ 2025-26ನೇ ಸಾಲಿನ ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಲಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು.