ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶವು ‘ಜನಾದೇಶವಲ್ಲ, ಬದಲಾಗಿ ಪಿತೂರಿ’ ಎಂದು ಆರೋಪಿಸಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಆದರೆ ಬೀದಿಗಿಳಿದು ವಿರೋಧ ಪಕ್ಷವಾದ ಇಂಡಿಯಾ ಕೂಟವನ್ನು ಬಲಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ನಾವು ಸೋತಿಲ್ಲ, ಸಿಎಂ
ಸ್ಥಾನ ಬಿಡಲ್ಲ: ಮಮತಾ- ಬಿಜೆಪಿ ಗೆಲುವು ಜನಾದೇಶವಲ್ಲ, ದೊಡ್ಡ ಪಿತೂರಿ
- ರಾಜೀನಾಮೆ ನೀಡಲ್ಲ, ನನ್ನ ಹೋರಾಟ ನಿಲ್ಲಲ್ಲ- ಸಂವಿಧಾನ ಪ್ರಕ್ರಿಯೆಗೇ ಬಂಗಾಳ ಸಿಎಂ ಸವಾಲ್--
ಮುಂದೇನು?- 5 ವರ್ಷದ ಜನಾದೇಶ ಮುಗಿದ ಬಳಿಕ ಯಾವ ಸರ್ಕಾರಕ್ಕೂ ಮುಂದುವರಿಯುವ ಅಧಿಕಾರವಿಲ್ಲ
- ಇದೇ ನಿಯಮ ಆಧರಿಸಿ 5 ವರ್ಷದ ಅವಧಿ ಬಳಿಕ ಸಿಎಂ ರಾಜೀನಾಮೆ ನೀಡ್ಬೇಕು, ಇಲ್ದಿದ್ರೆ ವಜಾ- ಹೊಸ ಸಿಎಂ ಪ್ರಮಾಣ ವಚನ ಸ್ವೀಕಾರದವರೆಗೂ ರಾಜ್ಯಪಾಲರಿಗೆ ಕಾಯುವ ಅವಕಾಶ ಇದೆ
- ಅಲ್ಲಿಯವರೆಗೂ ಸಿಎಂ ರಾಜೀನಾಮೆ ನೀಡದಿದ್ರೆ ರಾಜ್ಯಪಾಲರಿಗೆ ವಜಾದ ಅಧಿಕಾರ ಇದೆ- ಆದರೆ ಚುನಾವಣೆ ಪ್ರಕ್ರಿಯೆಯನ್ನೇ ಪ್ರಶ್ನಿಸಿ ಮಮತಾಗೆ ಕೋರ್ಟಿಗೆ ಹೋಗುವ ಅಧಿಕಾರವಿದೆ
- ಆದಾಗ್ಯೂ ಅವರು ರಾಜೀನಾಮೆ ಕೊಡಲೇಬೇಕು. ರಾಜೀನಾಮೆ ಕೊಟ್ಟು ಕೋರ್ಟಿಗೆ ಹೋಗಬಹುದು==
ಪಿಟಿಐ ಕೋಲ್ಕತಾಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶವು ‘ಜನಾದೇಶವಲ್ಲ, ಬದಲಾಗಿ ಪಿತೂರಿ’ ಎಂದು ಆರೋಪಿಸಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಆದರೆ ಬೀದಿಗಿಳಿದು ವಿರೋಧ ಪಕ್ಷವಾದ ಇಂಡಿಯಾ ಕೂಟವನ್ನು ಬಲಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಮಮತಾ ಅವರ ಈ ಹೇಳಿಕೆ ಕಂಡು ಕೇಳರಿಯದ ಹೇಳಿಕೆಯಾಗಿದೆ. ಏಕೆಂದರೆ ಚುನಾವಣೆಯಲ್ಲಿ ಪಕ್ಷ ಸೋತ ಬಳಿಕ ಸಿಎಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ವಾಡಿಕೆ. ಆದರೆ ಈ ಸಂಪ್ರದಾಯಕ್ಕೆ ತಿಲಾಂಜಲಿ ನೀಡುವ ಬೆದರಿಕೆಯನ್ನು ಅವರು ಹಾಕಿದ್ದಾರೆ. ಮಮತಾ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಆದರೆ ಸಂವಿಧಾನ ತಜ್ಞರು ಪ್ರತಿಕ್ರಿಯಿಸಿ, ‘ಮಮತಾ ರಾಜೀನಾಮೆ ನೀಡದೇ ಹೋದರೆ ಹೊಸ ಸರ್ಕಾರ ರಚನೆಗೂ ಮುನ್ನ ಅವರನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಏಕೆಂದರೆ ಒಂದು ಚುನಾಯಿತ ಸರ್ಕಾರದ ಅವಧಿ 5 ವರ್ಷ ಮಾತ್ರ’ ಎಂದಿದ್ದಾರೆ.
ಮಮತಾ ಹೇಳಿದ್ದೇನು?:ಚುನಾವಣೆಯಲ್ಲಿ ಘೋರ ಪರಾಭವ ಅನುಭವಿಸಿದ ಬಳಿಕ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನನ್ನ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ನಾವು ಸೋತಿದ್ದು ಜನಾದೇಶದಿಂದಲ್ಲ, ಬದಲಾಗಿ ಪಿತೂರಿಯಿಂದ. ನಾನು ಸೋತಿಲ್ಲ, ನಾನು ಲೋಕಭವನಕ್ಕೆ ಹೋಗುವುದಿಲ್ಲ. ಅವರು ಸಾಂವಿಧಾನಿಕ ಮಾನದಂಡಗಳ ಪ್ರಕಾರ ಕ್ರಮ ಕೈಗೊಳ್ಳಬಹುದು’ ಎಂದು ಹೇಳಿದರು.
100 ಸ್ಥಾನ ಲೂಟಿ:‘ಮತ ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ. ಸುಮಾರು 100 ಸ್ಥಾನಗಳಲ್ಲಿ ಜನಾದೇಶವನ್ನು ಲೂಟಿ ಮಾಡಲಾಯಿತು. ನಮ್ಮ ಪಕ್ಷದ ಸ್ಥೈರ್ಯ ಕುಗ್ಗಿಸಲು ಮತ ಎಣಿಕೆಯನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಲಾಯಿತು. ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಯಾಗಿದೆ. ಚುನಾವಣಾ ಆಯುಕ್ತ ಓರ್ವ ಖಳನಾಯಕ’ ಎಂದು ಆರೋಪಿಸಿದರು.
‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಚುನಾವಣೆಯಲ್ಲಿ ಟಿಎಂಸಿಯ ಸ್ಪರ್ಧೆಯು ಬಿಜೆಪಿ ವಿರುದ್ಧವಾಗಿರಲಿಲ್ಲ, ಬದಲಾಗಿ ಬಿಜೆಪಿಗಾಗಿ ಕೆಲಸ ಮಾಡಿದ ಚುನಾವಣಾ ಆಯೋಗದ ವಿರುದ್ಧವಾಗಿತ್ತು’ ಎಂದು ಮಮತಾ ತಿಳಿಸಿದರು.‘ಇಂಡಿಯಾ ಬ್ಲಾಕ್ ನಾಯಕರು ಒಗ್ಗಟ್ಟನ್ನು ವ್ಯಕ್ತಪಡಿಸಲು ನನಗೆ ಕರೆ ಮಾಡಿದರು. ಸೋನಿಯಾ ಮತ್ತು ರಾಹುಲ್ ಗಾಂಧಿ ನನ್ನೊಂದಿಗೆ ಮಾತನಾಡಿದ್ದಾರೆ. ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್ ಮತ್ತು ಹೇಮಂತ್ ಸೊರೆನ್ ಅವರಂತಹ ನಾಯಕರಿಂದಲೂ ನನಗೆ ಕರೆಗಳು ಬಂದಿವೆ’ ಎಂದು ಹೇಳಿದರು.
‘ನಾನು ಕುರ್ಚಿಯಲ್ಲಿ ಇರುವವರೆಗೂ, ನಾನು ಅನೇಕ ವಿಷಯಗಳನ್ನು ಸಹಿಸಿಕೊಂಡಿದ್ದೆ. ಈಗ ನಾನು ಸ್ವತಂತ್ರ ಹಕ್ಕಿ, ಸಾಮಾನ್ಯ ವ್ಯಕ್ತಿ. ನಾನು ಬೀದಿ ಹೋರಾಟಗಾರ್ತಿ. ನಾನು ಬೀದಿಗಳಲ್ಲಿಯೇ ಇದ್ದು ಎಲ್ಲಾ ದೌರ್ಜನ್ಯಗಳ ವಿರುದ್ಧ ಹೋರಾಡುತ್ತೇನೆ. ಇಂಡಿಯಾ ಕೂಟ ಬಲಪಡಿಸಲಿದ್ದೇನೆ’ ಎಂದು ಅವರು ಹೇಳಿದರು.