ಸಾವಿರಾರು ಕೋಟಿ ವೆಚ್ಚದ ತಂತ್ರಜ್ಞಾನ ಸೋಲಿಸಿದ ಇರಾನ್‌

ಎಫ್‌ 35 ವಿಮಾನದ ಸಣ್ಣ ರಹಸ್ಯ ಪತ್ತೆ ಮಾಡಿ ಹೊಡೆದ ಸೇನೆ

ತನ್ನ ಅತ್ಯಾಧುನಿಕ ಸ್ಟೆಲ್ತ್‌ (ರಾಡಾರ್‌ ಕಣ್ಣಿಂದ ತಪ್ಪಿಸಿಕೊಳ್ಳುವ) ತಂತ್ರಜ್ಞಾನದಿಂದಲೇ ಖ್ಯಾತವಾಗಿರುವ ಅಮೆರಿಕ ಎಫ್‌-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್‌ ಹೇಳಿಕೊಂಡಿದೆ. ಎಫ್‌ 35 ಮೇಲೆ ಶತ್ರು ದಾಳಿ ಇದೇ ಮೊದಲು. 2019ರಲ್ಲಿ ಅಮೆರಿಕ ವಾಯುಪಡೆಗೆ ಸೇರಿದ 950 ಕೋಟಿ ರು. ಮೌಲ್ಯದ ಈ ವಿಮಾನವು, ರಷ್ಯಾದ ಅತಿ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಾದ ಎಸ್‌-400 ಕಣ್ಣಿಗೂ ಈ ವಿಮಾನವು ಕಾಣಿಸದು. ಹೀಗಿರುವಾಗ, ದುರ್ಬಲ ವಾಯುಪಡೆ ಹೊಂದಿರುವ ಇರಾನ್‌ನ ಪುಟ್ಟ ಕ್ಷಿಪಣಿ, ಎಫ್‌ 35 ಗುರುತಿಸಿ ದಾಳಿ ಮಾಡಿದ್ದು ಹೇಗೆ ಎಂಬ ಕುತೂಹಲಕ್ಕೆ ವಿಶ್ಲೇಷಣೆ ಇಲ್ಲಿದೆ.

==

- ಎಫ್‌-35 ವಿಮಾನವು ಸ್ಟೆಲ್ತ್‌ ತಂತ್ರಜ್ಞಾನ ಒಳಗೊಂಡಿದೆ. ಅಂದರೆ ವಿಮಾನದ ಇಡೀ ಮೈ ಭಾಗಕ್ಕೆ ಶತ್ರು ದೇಶದ ರಾಡಾರ್‌ ಸೂಸುವ ಎಲ್ಲಾ ಎಲೆಕ್ಟ್ರೋಮ್ಯಾಗ್ನೆಟಿಕ್‌ ಸಿಗ್ನಲ್‌ ಹೀರಿಕೊಳ್ಳುವ ರಾಸಾಯನಿಕವನ್ನು ಲೇಪನ ಮಾಡಲಾಗಿದೆ. ಇದು ವಿಮಾನದ ಇರುವಿಕೆ ರಹಸ್ಯ ಕಾಪಾಡುತ್ತೆ. ಈ ತಂತ್ರಜ್ಞಾನಕ್ಕಾಗಿ ಅಮೆರಿಕ ಸಾವಿರಾರು ಕೋಟಿ ರು. ವ್ಯಯಿಸಿದೆ.


- ಆದರೆ ಇಷ್ಟೆಲ್ಲಾ ಆದರೂ ಈ ವಿಮಾನದಲ್ಲಿ ಸಣ್ಣ ರಹಸ್ಯವೊಂದಿದೆ. ಅದೇನೆಂದರೆ ವಿಮಾನ ಹಾರುವಾಗ ಭಾರೀ ಪ್ರಮಾಣದಲ್ಲಿ ಹೊರಹೊಮ್ಮುವ ಬೆಂಕಿಯ ಜ್ವಾಲೆ ಉಗುಳುವ ವಿಮಾನದ ಹಿಂಭಾಗಕ್ಕೆ ಇಂಥ ಲೇಪನ ಮಾಡುವುದು ಸಾಧ್ಯವಿಲ್ಲ. ಇದನ್ನು ಇರಾನ್‌ ಪತ್ತೆ ಮಾಡಿತ್ತು.

- ಹೀಗಾಗಿಯೇ ಅಮೆರಿಕದ ವಿಮಾನ ಪತ್ತೆಗೆ ಇರುವ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಸಿಗ್ನಲ್‌ ಬಿಟ್ಟು ತನ್ನದೇ ಐಆರ್‌ಎಸ್‌ಟಿ (ಇನ್ಫ್ರಾರೆಡ್ ಹುಡುಕಾಟ ಮತ್ತು ಟ್ರ್ಯಾಕಿಂಗ್‌) ವ್ಯವಸ್ಥೆ ಬಳಸಿಕೊಂಡಿದೆ. ಇದು ಆಗಸದಲ್ಲಿನ ವಸ್ತುಗಳ ಉಷ್ಣಾಂಶ ಟ್ರ್ಯಾಕ್‌ ಮಾಡುತ್ತದೆ.

- ಇದೇ ತಂತ್ರಜ್ಞಾನ ಬಳಸಿಕೊಂಡು ತನ್ನ ದೇಶದೊಳಗೆ ಅಮೆರಿಕದ ಯುದ್ಧ ವಿಮಾನ ನುಸುಳಿದಾಗ ಅದನ್ನು ಇರಾನ್‌ ಪತ್ತೆ ಮಾಡಿದೆ. ಐಆರ್‌ಎಸ್‌ಟಿ ಯಾವುದೇ ಸಿಗ್ನಲ್‌ ರವಾನಿಸದ ಕಾರಣ, ತಾನು ಪತ್ತೆಯಾದ ಬಗ್ಗೆ ಎಫ್‌-35ನ ಪೈಲಟ್‌ಗೆ ಸುಳಿವೂ ಸಿಗುವುದಿಲ್ಲ. ಒಂದೊಮ್ಮೆ ತಿಳಿದರೂ ಅದನ್ನು ತಕ್ಷಣಕ್ಕೆ ಜ್ಯಾಮ್‌ ಮಾಡುವುದು ಸಾಧ್ಯವಿಲ್ಲ.

- ಯುದ್ಧದ ವಿಮಾನದ ಸುಳಿವು ಪತ್ತೆಯಾಗುತ್ತಲೇ, ಇರಾನ್‌ ತನ್ನ ಅರ್ಧ ಡ್ರೋನ್‌ ಹಾಗೂ ಅರ್ಧ ಕ್ಷಿಪಣಿಯಂತಹ ಎಸ್‌ಎ-67 ಕ್ಷಿಪಣಿಯನ್ನು ಆಗಸಕ್ಕೆ ಹಾರಿಬಿಟ್ಟಿದೆ. ಇತ್ತ ಅಮೆರಿಕದ ಯುದ್ಧವಿಮಾನ ಪತ್ತೆಯಾಗುತ್ತಿದ್ದಂತೆ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುನ್ನುಗ್ಗಿದೆ.

- ಹೀಗೆ ಸಿಕ್ಕಿಬಿದ್ದ ಎಫ್‌-35 ಅನ್ನು ಇರಾನ್‌ನ ಮಿಸೈಲ್‌ ಬೆನ್ನು ಹತ್ತಿರುವ ಬಗ್ಗೆ ಅದರ ಪೈಲಟ್‌ಗೆ ತಿಳಿದು ವಿಮಾನದ ದಿಕ್ಕನ್ನು ಬದಲಿಸುತ್ತಾನೆ. ಜತೆಗೆ ಹಿಂಬದಿಯಿಂದ ಬೆಂಕಿಯುಂಡೆ ಹಾರಿಬಿಡುವ ಮೂಲಕ ಆ ಕ್ಷಿಪಣಿಯನ್ನು ಗೊಂದಲಕ್ಕೀಡುಮಾಡಲು ಯತ್ನಿಸಿದ್ದಾನೆ.

- ಆದರೆ ತನ್ನ ಗುರಿಯನ್ನಷ್ಟೇ ನೋಡುತ್ತಾ ಮುನ್ನುಗ್ಗುತ್ತಿದ್ದ ಎಸ್‌ಎ-67, ಎಫ್‌-35ರ ಸನಿಹಕ್ಕೆ ಬರುತ್ತಿದ್ದಂತೆ ಸ್ಫೋಟಿಸಿದೆ. ಹೀಗೆ ಅಮೆರಿಕ ಸಾವಿರಾರು ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ್ದ ವಿಮಾನವನ್ನು ಇರಾನ್ ಸರಳ ತಂತ್ರಜ್ಞಾನ ಬಳಸಿ ಹೊಡೆದುಹಾಕಿದೆ.