ವಯನಾಡು : ವಿರೋಚಿತ ಸಾಹಸ ಮೂಲಕ ದಟ್ಟ ಅರಣ್ಯದ ಗುಹೆಯಲ್ಲಿ ಆಶ್ರಯ ಪಡೆದಿದ್ದ 4 ಮಕ್ಕಳ ರಕ್ಷಣೆ!

| Published : Aug 04 2024, 01:24 AM IST / Updated: Aug 04 2024, 04:50 AM IST

ಸಾರಾಂಶ

ಭಾರೀ ಮಳೆ, ಪ್ರವಾಹದಿಂದಾಗಿ ದಟ್ಟ ಅರಣ್ಯದ ಎತ್ತರದ ಪ್ರದೇಶದ ಗುಹೆಯಲ್ಲಿ 5 ದಿನಗಳಿಂದ ರಕ್ಷಣೆ ಪಡೆದು ಅನ್ನ-ಆಹಾರ ಇಲ್ಲದೇ ಬಳಲಿದ್ದ ನಾಲ್ವರು ಮಕ್ಕಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿರೋಚಿತ ಸಾಹಸದ ಮೂಲಕ ರಕ್ಷಿಸಿದ ಮಾನವೀಯ ಪ್ರಸಂಗ ವಯನಾಡಿನಲ್ಲಿ ನಡೆದಿದೆ.

ವಯನಾಡು: ಭಾರೀ ಮಳೆ, ಪ್ರವಾಹದಿಂದಾಗಿ ದಟ್ಟ ಅರಣ್ಯದ ಎತ್ತರದ ಪ್ರದೇಶದ ಗುಹೆಯಲ್ಲಿ 5 ದಿನಗಳಿಂದ ರಕ್ಷಣೆ ಪಡೆದು ಅನ್ನ-ಆಹಾರ ಇಲ್ಲದೇ ಬಳಲಿದ್ದ ನಾಲ್ವರು ಮಕ್ಕಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿರೋಚಿತ ಸಾಹಸದ ಮೂಲಕ ರಕ್ಷಿಸಿದ ಮಾನವೀಯ ಪ್ರಸಂಗ ವಯನಾಡಿನಲ್ಲಿ ನಡೆದಿದೆ.ಇಂಥ ಪ್ರಸಂಗವನ್ನು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆಗಿದ್ದೇನು?:

ಭಾರೀ ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಆದಿವಾಸಿ ಪನಿಯಾ ಸಮುದಾಯದಕ್ಕೆ ಸೇರಿದ 4 ಮಕ್ಕಳು ಹಾಗೂ ಇತರೆ ಇಬ್ಬರನ್ನು ಒಳಗೊಂಡ ಕುಟುಂಬವೊಂದು 4 ದಿನಗಳಿಂದ ದುರ್ಗಮ ಅರಣ್ಯದ ಗುಹೆಯೊಂದರಲ್ಲಿ ಆಶ್ರಯ ಪಡೆದಿತ್ತು. ಈ ನಡುವೆ ಮಕ್ಕಳ ಹಸಿವಿನಿಂದ ಕಂಗೆಟ್ಟ ತಾಯಿ ಆಹಾರ ಹುಡುಕಿ ಅರಣ್ಯದಲ್ಲಿ ಸುರಿವ ಮಳೆಯಲ್ಲೇ ಸುತ್ತಾಡಿದ್ದಳು.ಈ ನಡುವೆ ಪ್ರವಾಹದಲ್ಲಿ ಸಿಕ್ಕಿಬಿದ್ದಿರಬಹುದಾಗಿದ್ದ ಜನರಿಗಾಗಿ ಹುಡುಕಾಡುತ್ತಿದ್ದ ಅರಣ್ಯ ಸಿಬ್ಬಂದಿ ಕಣ್ಣಿಗೆ ಮಹಿಳೆ ಕಂಡಿದ್ದಳು. ಆಕೆಯನ್ನು ವಿಚಾರಿಸಿದಾಗ ಬೆಟ್ಟದ ಮೇಲೆ ಗುಹೆಯಲ್ಲಿ ಮಕ್ಕಳು ಮತ್ತು ಇತರೆ ಸದಸ್ಯರು ಇರುವ ಮಾಹಿತಿ ನೀಡಿದ್ದಳು.ತಕ್ಷಣವೇ ಕಲ್ಪೆಟ್ಟಾ ವಲಯ ಅರಣ್ಯಾಧಿಕಾರಿ ಕೆ.ಹಾಶಿಸ್‌ ನೇತೃತ್ವದ ನಾಲ್ವರು ಅರಣ್ಯ ಸಿಬ್ಬಂದಿ, ಸುರಿವ ಜಡಿ ಮಳೆಯಲ್ಲೇ ಕಲ್ಲುಬಂಡೆಗಳಿಂದ ತುಂಬಿದ್ದ ಹಾದಿಯ ದುರ್ಗಮ ಅರಣ್ಯಪ್ರದೇಶದಲ್ಲಿ ಸತತ 4 ತಾಸು ಸಂಚರಿಸಿ ನಾಲ್ವರೂ ಮಕ್ಕಳು ಇದ್ದ ಗುಹೆ ತಲುಪಿದ್ದಾರೆ. ಬಳಿಕ ಮತ್ತೆ 4 ತಾಸು ಕಾಲ ಹರಸಾಹಸ ಮಾಡಿ ಕೆಳಗೆ ಅವರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಮಕ್ಕಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿ ಕರೆತರುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್‌ ಆಗಿದೆ.