ಜಾಗತಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರುತ್ತಿರುವಂತೆ ಚಿತ್ರಿಸಲಾದ ಎಐ ರಚಿತ ವಿಡಿಯೋವೊಂದನ್ನು ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ: ಜಾಗತಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರುತ್ತಿರುವಂತೆ ಚಿತ್ರಿಸಲಾದ ಎಐ ರಚಿತ ವಿಡಿಯೋವೊಂದನ್ನು ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ‘ಇದು 140 ಕೋಟಿ ಶ್ರಮಜೀವಿ ಭಾರತೀಯರಿಗೆ ಅವಮಾನ’ ಎಂದು ಬಿಜೆಪಿ ಕಿಡಿಕಾರಿದೆ.
ಈ ಹಿಂದೆ 2014ರಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಸಹ ಪ್ರಧಾನಿ ಮೋದಿ, ಚಿಕ್ಕಂದಿನಲ್ಲಿ ಚಹಾ ಮಾರುತ್ತಿದ್ದ ಬಗ್ಗೆ ವ್ಯಂಗ್ಯವಾಡಿದ್ದರು. ಆ ಬಳಿಕ ಮೋದಿ ಅವರು ಇದನ್ನೇ ಬಳಸಿಕೊಂಡು ‘ಚಾಯ್ ಪೇ ಚರ್ಚಾ’ ಆಂದೋಲನ ಹುಟ್ಟು ಹಾಕಿ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು.
ವಿಡಿಯೋದಲ್ಲೇನಿದೆ?:
ಸೂಟು, ಬೂಟು ಧರಿಸಿರುವ ಮೋದಿಯವರು ಒಂದು ಕೈಯಲ್ಲಿ ಕೆಟಲ್, ಮತ್ತೊಂದರಲ್ಲಿ ಚಹಾ ಲೋಟಗಳನ್ನು ಹಿಡಿದು ‘ಬನ್ನಿ ಬನ್ನಿ ಚಹಾ ತೊಗೊಳಿ..’ ಎಂದು ಕೂಗುತ್ತಾ ಹೋಗುವಂತೆ ವಿಡಿಯೋ ರಚಿಸಲಾಗಿದೆ. ಇದನ್ನು ಮಂಗಳವಾರ ರಾತ್ರಿ ಎಕ್ಸ್‌ನಲ್ಲಿ ಹಂಚಿಕೊಂಡಿರುವ ರಾಗಿಣಿ, ‘ಇದನ್ನು ಯಾರು ಮಾಡಿದ್ದಾರೆ?’ ಎಂದು ಹಾಸ್ಯದ ಅಡಿಬರಹ ಕೊಟ್ಟಿದ್ದಾರೆ.
ಬಿಜೆಪಿ ಆಕ್ರೋಶ:
ರಾಗಿಣಿ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ‘ಕಾಂಗ್ರೆಸ್‌ನ ಈ ಅಸಹ್ಯಕರ ಟ್ವೀಟ್ 140 ಕೋಟಿ ಶ್ರಮಜೀವಿ ಭಾರತೀಯರಿಗೆ ಮಾಡಿದ ಘೋರ ಅವಮಾನ’ ಎಂದು ಬಿಜೆಪಿ ನಾಯಕ ಸಿ. ಆರ್. ಕೇಶವನ್ ಕಿಡಿ ಕಾರಿದ್ದಾರೆ. ‘ಬಡ ಹಿನ್ನೆಲೆಯಿಂದ ಬಂದಿರುವ ಒಬಿಸಿ ಸಮುದಾಯದ ಕಾಮದಾರ್ (ಶ್ರಮಜೀವಿ) ಪ್ರಧಾನಿಯನ್ನು ನಾಮ್ದಾರ್ (ಸಿರಿವಂತ) ಕಾಂಗ್ರೆಸ್ ಸಹಿಸುವುದಿಲ್ಲ’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.