ಸಾರಾಂಶ
ಸಂತ ಕಬೀರ ನಗರ(ಉ.ಪ್ರ.): ಪ್ರಿಯತಮನೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗಬಹುದೆಂದು ಭಾವಿಸಿ ಪತ್ನಿಯರು ತಮ್ಮ ಪತಿಯನ್ನು ಕೊಂದ ಅಥವಾ ಕೊಲ್ಲಿಸಲು ಯತ್ನಿಸಿದ ಕೆಲ ಘಟನೆಗಳು ಉತ್ತರಪ್ರದೇಶದಲ್ಲಿ ಒಂದರ ಹಿಂದೊಂದರಂತೆ ನಡೆಯುತ್ತಿವೆ. ಇದರಿಂದ ಬೆದರಿದ ವ್ಯಕ್ತಿಯೊಬ್ಬ ಖುದ್ದಾಗಿ ಪತ್ನಿಯ ಮದುವೆಯನ್ನು ಆಕೆಯ ಪ್ರೇಮಿಯೊಂದಿಗೆ ಮಾಡಿಸಿದ್ದಾರೆ.
ಆಗಿದ್ದೇನು?: ಇಲ್ಲಿನ ಕಟಾರ್ ಜೋತ್ ಎಂಬಲ್ಲಿ ಬಬ್ಲು ಎಂಬ ಕಾರ್ಮಿಕ, 2017ರಲ್ಲಿ ರಾಧಿಕಾ ಎಂಬಾಕೆಯನ್ನು ವಿವಾಹವಾಗಿದ್ದರು. ಇವರಿಗೆ 2 ಮಕ್ಕಳಿದ್ದಾರೆ. ಕೆಲಸದ ನಿಮಿತ್ತ ಬೇರೆ ರಾಜ್ಯಕ್ಕೆ ತೆರಳುತ್ತಿದ್ದ ಬಬ್ಲುಗೆ ತನ್ನ ಪತ್ನಿ ವಿಕಾಸ್ ಎಂಬುವವನೊಂದಿಗೆ ಪ್ರೇಮ ಸಂಬಂಧ ಹೊಂದಿರುವುದು ತಿಳಿಯಿತು. ಇದನ್ನು ಧೃಡಪಡಿಸಿಕೊಂಡ ಬಬ್ಲು, ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಬದಲು, ರಾಧಿಕಾ ಮತ್ತು ವಿಕಾಸ್ ವಿವಾಹವಾಗಬೇಕು ಎಂದು ಗ್ರಾಮದ ಹಿರಿಯರನ್ನು ಒಪ್ಪಿಸಿದರು. ಅಂತೆಯೇ ಸ್ವತಃ ಮುಂದೆ ನಿಂತು ಅವರಿಬ್ಬರ ಮದುವೆ ಮಾಡಿಸಿದ್ದಲ್ಲದೆ, ಮಕ್ಕಳನ್ನು ಒಬ್ಬಂಟಿಯಾಗಿ ಸಾಕುವ ನಿರ್ಧಾರ ಕೈಗೊಂಡಿದ್ದಾರೆ.
ಬಬ್ಲುರ ಈ ನಿರ್ಧಾರಕ್ಕೆ ಕಾರಣ ಕೇಳಿದಾಗ, ‘ಇತ್ತೀಚೆಗೆ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಂದ ಸುದ್ದಿ ನೋಡಿದ ಬಳಿಕ, ನನ್ನ ಜೀವವನ್ನು ಉಳಿಸಿಕೊಳ್ಳಲು ಹೀಗೆ ಮಾಡಿದೆ’ ಎಂದಿದ್ದಾರೆ.
ಇತ್ತೀಚೆಗೆ ಮೇರಠ್‌ನಲ್ಲಿ, ತಮ್ಮ ಪ್ರೇಮ ಸಂಬಂಧಕ್ಕೆ ಪತಿ ಸೌರಭ್ ಅಡ್ಡಬರುವುದನ್ನು ತಡೆಯಲು ಅವರ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಸೇರಿ ಅವರನ್ನು ಹತ್ಯೆಗೈದು, ದೇಹವನ್ನು ಡ್ರಂನೊಳಗೆ ತುಂಬಿದ್ದರು.