ಗೂಗಲ್‌ ಮ್ಯಾಪ್‌ ನಂಬಿ ತೊರೆಗೆ ಬಿದ್ದ ಕಾರು!

| Published : May 26 2024, 01:37 AM IST / Updated: May 26 2024, 04:55 AM IST

ಸಾರಾಂಶ

ಅಪರಿಚಿತ ಊರಿಗೆ ಹೋದಾಗ ದಾರಿ ಗೊತ್ತಿಲ್ಲ ಅಂದ್ರೆ ಗೂಗಲ್ ಮ್ಯಾಪ್ ಬಳಸುವವರೇ ಜಾಸ್ತಿ. ಆದರೆ ಹೈದರಾಬಾದ್ ಮೂಲದ ಪ್ರವಾಸಿಗರ ತಂಡ ಗೂಗಲ್‌ ಮ್ಯಾಪ್ ಬಳಸಿಕೊಂಡು, ತೊರೆಪಾಲಾದ ಘಟನೆ ಶನಿವಾರ ನಡೆದಿದೆ.

ಕೊಟ್ಟಾಯಂ: ಅಪರಿಚಿತ ಊರಿಗೆ ಹೋದಾಗ ದಾರಿ ಗೊತ್ತಿಲ್ಲ ಅಂದ್ರೆ ಗೂಗಲ್ ಮ್ಯಾಪ್ ಬಳಸುವವರೇ ಜಾಸ್ತಿ. ಆದರೆ ಹೈದರಾಬಾದ್ ಮೂಲದ ಪ್ರವಾಸಿಗರ ತಂಡ ಗೂಗಲ್‌ ಮ್ಯಾಪ್ ಬಳಸಿಕೊಂಡು, ತೊರೆಪಾಲಾದ ಘಟನೆ ಶನಿವಾರ ನಡೆದಿದೆ.

ಪ್ರವಾಸಿಗರು ಮುನ್ನಾರ್‌ನಿಂದ ಕೇರಳದ ಅಲಪ್ಪುಳಕ್ಕೆ ಹೊರಟಿದ್ದರು. ಆದರೆ ಮ್ಯಾಪ್ ದಾರಿ ತಪ್ಪಿಸಿದ ಕಾರಣ ದಕ್ಷಿಣ ಕೇರಳದ ಕುರುಪ್ಪಂಥಾರ ಬಳಿಯ ತೊರೆಗೆ ವಾಹನ ಬಿದ್ದಿದೆ. ಅದೃಷ್ಟವಶಾತ್ ಪ್ರವಾಸಿಗರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಆಗಿದ್ದೇನು?:ಕೇರಳ ಪ್ರವಾಸಕ್ಕೆ ಬಂದಿದ್ದ ತಂಡ ಮುನ್ನಾರ್‌ನಿಂದ ಅಲಪ್ಪುಳಕ್ಕೆ ಹೊರಟಿದ್ದರು. ಅಪರಿಚಿತ ಊರಾಗಿದ್ದ ಕಾರಣ ಗೂಗಲ್ ಮ್ಯಾಪ್ ಸಹಾಯದಿಂದ ಪ್ರಯಾಣಿಸುತ್ತಿದ್ದರು. ಆದರೆ ಈ ವೇಳೆ ಕೇರಳದಲ್ಲಿ ಏಕಾಏಕಿ ಮಳೆ ಆರಂಭವಾಗಿದ್ದು, ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾದವು. ಆಗ ರಸ್ತೆ ಕಾಣದಂತಾಯಿತು. ಆಗ ರಸ್ತೆ ಎಲ್ಲಿದೆ ಎಂದು ಮತ್ತೆ ಮ್ಯಾಪ್‌ ನೋಡಿದಾಗ ಮ್ಯಾಪ್‌, ಕುರುಪ್ಪಂಥಾರ ತೊರೆಯ ದಾರಿ ತೋರಿಸಿದೆ. ಆದರೆ ತೊರೆ ಉಕ್ಕೇರಿದ್ದ ಅರಿವಿಲ್ಲದೆ ಆ ಕಡೆ ಕಾರು ಚಲಯಿಸಿದಾಗ ತೊರೆಯಲ್ಲಿ ಕಾರು ಮುಳುಗಿದೆ.

ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಲು ಕಿಟಕಿಯಿಂದ ಹಾರಿ, ಹೇಗೋ ದಡ ತಲುಪಿದ್ದಾರೆ. ಪೊಲೀಸರೂ ಇವರ ರಕ್ಷಣೆಗೆ ಸಹಕರಿಸಿದ್ದಾರೆ. ವಾಹನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿತ್ತು. ಕ್ರೇನ್ ಸಹಾಯದಿಂದ ಮೇಲಕ್ಕೆತ್ತುವ ಪ್ರಯತ್ನಗಳು ನಡೆದವು.

‘ಅಸಲಿಗೆ ಗೂಗಲ್ ತೋರಿಸಿದ್ದು ತೊರೆ ಹಾದಿಯನ್ನು. ಮಳೆಯಿದ್ದ ಕಾರಣ ವಾಹನ ಚಾಲಕನಿಗೂ ಕೂಡ ತೊರೆ ಇರುವುದು ಗೊತ್ತಾಗದೇ ವಾಹನ ಚಲಾಯಿಸಿ, ಅನಾಹುತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಕೇರಳದಲ್ಲಿ ಗೂಗಲ್‌ ಪ್ರಮಾದ ಇದು ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮ್ಯಾಪ್‌ ಹಾಕಿಕೊಂಡು ಹೋಗಿದ್ದ ಕಾರೊಂದು ನದಿಗೆ ಉರುಳಿಬಿದ್ದಿತ್ತು.