3 ಈಡಿಯಟ್ಸ್‌ ರೀತಿಯಲ್ಲಿ ಪರೀಕ್ಷಾ ವಂಚನೆ ಮಾಡಿದ್ದೆ: ಲಲಿತ್‌ ಮೋದಿ ಬಹಿರಂಗ

| N/A | Published : Aug 22 2025, 12:01 AM IST

3 ಈಡಿಯಟ್ಸ್‌ ರೀತಿಯಲ್ಲಿ ಪರೀಕ್ಷಾ ವಂಚನೆ ಮಾಡಿದ್ದೆ: ಲಲಿತ್‌ ಮೋದಿ ಬಹಿರಂಗ
Share this Article
  • FB
  • TW
  • Linkdin
  • Email

ಸಾರಾಂಶ

‘ಅಮೆರಿಕದ ಕಾಲೇಜಿನಲ್ಲಿ ಪ್ರವೇಶಾತಿಗೆ ಬರೆಯುವ ಎಸ್‌ಎಟಿ ಪರೀಕ್ಷೆಯನ್ನು ನನ್ನ ಹೆಸರಲ್ಲಿ ಬೇರೊಬ್ಬರು ಬರೆದಿದ್ದರು. ಒಳ್ಳೆ ಅಂಕ ಬಂದಿತ್ತು’ ಎಂದು ಐಪಿಎಲ್‌ ಪಿತಾಮಹ, ದೇಶಭ್ರಷ್ಟ ಲಲಿತ್‌ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನವದೆಹಲಿ: ‘ಅಮೆರಿಕದ ಕಾಲೇಜಿನಲ್ಲಿ ಪ್ರವೇಶಾತಿಗೆ ಬರೆಯುವ ಎಸ್‌ಎಟಿ ಪರೀಕ್ಷೆಯನ್ನು ನನ್ನ ಹೆಸರಲ್ಲಿ ಬೇರೊಬ್ಬರು ಬರೆದಿದ್ದರು. ಒಳ್ಳೆ ಅಂಕ ಬಂದಿತ್ತು’ ಎಂದು ಐಪಿಎಲ್‌ ಪಿತಾಮಹ, ದೇಶಭ್ರಷ್ಟ ಲಲಿತ್‌ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ‘3 ಈಡಿಯಟ್ಸ್‌’ ಚಿತ್ರದ ರಾಂಚೋ ಕಥೆಯನ್ನು ಪಕ್ಕಾ ಹೋಲುವಂತಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಜತೆಗಿನ ಸಂವಾದದ ವೇಳೆ ತಮ್ಮ ಬಾಲ್ಯ, ವ್ಯಾಸಂಗದ ಬಗ್ಗೆ ಮೋದಿ ಮಾತನಾಡುತ್ತಿದ್ದರು. ‘ನಾನು ಯಾವಾಗಲೂ ನಿಯಮ ಉಲ್ಲಂಘಿಸುತ್ತಿದ್ದೆ. ಕಾರಣ, ಹೆಚ್ಚಿನದನ್ನು ಮಾಡುವುದು ನನ್ನ ಬಯಕೆಯಾಗಿತ್ತು. 12ನೇ ತರಗತಿಯಲ್ಲಿ ಫೇಲ್‌ದ್ಗಿದ್ದೆ. ಆದರೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಮಾಡುವ ಬಯಕೆಯಿತ್ತು. ಕಾರಣ ಅಲ್ಲಿ ಪಾರ್ಟಿ ಮಾಡಿಕೊಂಡಿರಲು ಬಯಸಿದ್ದೆ. ಆಗ ಯಾರೋ ಒಬ್ಬರು ನನ್ನ ಹೆಸರಲ್ಲಿ ಪರೀಕ್ಷೆ ಬರೆದು, 1600ಕ್ಕೆ 1560 ಅಂಕ ಪಡೆದರು. ಬಳಿಕ ಡ್ಯೂಕ್‌ ವಿವಿ ಸೇರಿಕೊಂಡೆ. ಈಗ ಹಾಗೆಲ್ಲಾ ಮಾಡಲಾಗದು’ ಎಂದು ಮೋದಿ ಹೇಳಿದ್ದಾರೆ.

ನಾಯಿ ಕಚ್ಚಿದ್ರೆ ಅದೇನು ಲವ್ ಬೈಟಾ?: ಶ್ವಾನ ಪ್ರಿಯರಿಗೆ ವರ್ಮಾ ಪ್ರಶ್ನೆ

ನವದೆಹಲಿ: ಬೀದಿ ನಾಯಿಗಳ ಕುರಿತು ಸುಪ್ರೀಂ ತೀರ್ಪಿಗೆ ಬಾಲಿವುಡ್‌ ನಟಿ ನಟಿಯರ ಆಕ್ಷೇಪದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಡಿಕಾರಿದ್ದಾರೆ. ‘ಮೂರ್ಖ ಶ್ವಾನ ಪ್ರಿಯರೇ, ನೀವು ಕುರುಡರಾಗಿದ್ದೀರಾ? ನೀವು ನಾಯಿ ಕಡಿತವನ್ನು ಲವ್‌ ಬೈಟ್ ಎಂದ ಪರಿಗಣಿಸುತ್ತಿದ್ದೀರಾ? ಬೀದಿ ನಾಯಿಗಳು ಮಕ್ಕಳನ್ನು ಕಚ್ಚುವುದು ನಿಮಗೆ ಕಾಣುತ್ತಿಲ್ಲವೇ? ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬೀದಿ ನಾಯಿಗಳ ಪರ ನಿಂತಿರುವ ತಾರೆಯರ ನಡೆಯನ್ನು ಬೂಟಾಟಿಕೆ ಎಂದು ಕರೆದಿರುವ ಅವರು, ‘ನಿಮ್ಮ ಮೆದುಳು ನಿಷ್ಕ್ರಿಯಗೊಂಡಿದೆಯಾ? ಬೀದಿಗಳು ಮಕ್ಕಳನ್ನು ಕಚ್ಚುವುದು, ಸಾವುಗಳನ್ನು ಎಲ್ಲೆಂದರಲ್ಲಿ ನೀವು ಸಿಸಿಟೀವಿಯಲ್ಲಿ ನೋಡುತ್ತಿಲ್ಲವೇ? ಹೆಚ್ಚುತ್ತಿರುವ ರೇಬಿಸ್‌ ವರದಿಯ ಬಗ್ಗೆಯೂ ಓದಿಲ್ಲವೇ? ’ ಎಂದು ಪ್ರಶ್ನಿಸಿದ್ದಾರೆ.

ದಾಳಿ ಬೆನ್ನಲ್ಲೇ ದೆಹಲಿ ಸಿಎಂ ರೇಖಾ ಗುಪ್ತಾಗೆ ಝಡ್ ಶ್ರೇಣಿಯ ಭದ್ರತೆ

ನವದೆಹಲಿ: ಬುಧವಾರ ದೆಹಲಿ ಸಿಎಂ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಿಎಂಗೆ ಝಡ್‌ ಶ್ರೇಣಿಯ ವಿಐಪಿ ಭದ್ರತೆ ನೀಡಿ ಆದೇಶಿಸಿದೆ, ರೇಖಾ ಗುಪ್ತಾ ಅವರ ಅಧಿಕೃತ ನಿವಾಸ ಮತ್ತು ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದ ರಾಜ್ ನಿವಾಸ್‌ ಮಾರ್ಗದಲ್ಲಿರುವ ಕ್ಯಾಂಪ್ ಆಫೀಸ್‌ಗೆ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್‌( ವಿಎಸ್‌ಜಿ) ನ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಒದಗಿಸಲಾಗಿದೆ. ಭದ್ರತೆಯ ಹೊಣೆಯನ್ನು ಕೇಂದ್ರ ಮೀಸಲು ಪಡೆ( ಸಿಆರ್‌ಪಿಎಫ್‌) ವಹಿಸಿಕೊಂಡಿದೆ.

ಕೆಜಿಎಫ್‌ಗೆ ಇಲ್ಲದ ‘ಎ’ ಸರ್ಟಿಫಿಕೇಟ್‌ ಕೂಲಿಗೆ: ಸನ್‌ಟೀವಿ ಕೋರ್ಟ್‌ಗೆ

ಚೆನ್ನೈ: ರಜನೀಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆಯೇ, ಹಿಂಸೆ ವಿಜೃಂಭಿಸಿದ ಕಾರಣ ನೀಡಿ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಸನ್‌ ಟಿವಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ. ಕನ್ನಡದ ಯಶ್ ನಟನೆಯ ಕೆಜಿಎಫ್ ಹಾಗೂ ತಮಿಳಿನ ಬೀಸ್ಟ್ ಚಿತ್ರಕ್ಕೆ ಹೋಲಿಸಿದರೆ ಕೂಲಿ ಚಿತ್ರದಲ್ಲಿ ಹಿಂಸೆಯ ದೃಶ್ಯಗಳು ಕಡಿಮೆಯಿವೆ. ಅವುಗಳಿಗೆ ನೀಡದ ‘ಎ’ ಸರ್ಟಿಫಿಕೇಟ್ ಅನ್ನು ಕೂಲಿಗೆ ನೀಡಲಾಗಿದೆ. ಇದರಿಂದಾಗಿ ವೀಕ್ಷಕರಿಲ್ಲದೆ ಚಿತ್ರದ ಕಲೆಕ್ಷನ್‌ಗೆ ಹೊಡೆತ ಬೀಳುತ್ತಿದೆ ಎಂದು ಸನ್‌ ಟಿವಿ ವಾದಿಸಿದೆ. ವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ಆ.25ಕ್ಕೆ ಮುಂದೂಡಿದೆ.

ರಿಲಯನ್ಸ್‌ನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಅ.4 ಕಡೇ ದಿನ

ಮುಂಬೈ: ನೀತಾ ಅಂಬಾನಿ ಸಾರಥ್ಯದ ರಿಲಯನ್ಸ್ ಫೌಂಡೇಶನ್ 2025- 26ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಅ.4 ಅಂತಿಮ ದಿನ.ರಿಲಯನ್ಸ್ ಫೌಂಡೇಶನ್ ಪ್ರಸ್ತಕ ಸಾಲಿನಲ್ಲಿ ಕಲಿಯುತ್ತಿರುವ 5000 ಪದವಿ ವಿದ್ಯಾರ್ಥಿಗಳು ಮತ್ತು 100 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ಇದರಡಿಯಲ್ಲಿ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಆರ್ಹ ಮತ್ತು ಆಸಕ್ತರು ಹೆಚ್ಚಿನ ಮಾಹಿತಿಗಾಗಿ scholarships.reliancefoundation.org ಸಂಪರ್ಕಿಸಬಹುದು. ಶೈಕ್ಷಣಿಕ ಅರ್ಹತೆಯ ಜೊತೆಗೆ ಆರ್ಥಿಕ ಸ್ಥಿತಿಗತಿಯನ್ನೂ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅರ್ಹ ಪದವಿ ವಿದ್ಯಾರ್ಥಿಗಳಿಗೆ 2 ಲಕ್ಷ ರು. ತನಕ ಮತ್ತು ಸ್ನಾತಕೋತ್ತರ ಪದವೀಧರರಿಗೆ 6 ಲಕ್ಷ ರು. ತನಕ ಫೌಂಡೇಶನ್ ಸಹಾಯಧನ ನೀಡಲಿದೆ.

Read more Articles on