ಭೂ ವಿವಾದದ ಸಂಬಂಧ ರೈತರಿಗೆ ಗನ್ನಿಂದ ಬೆದರಿಸಿದ ಪ್ರಕರಣ: ವಿವಾದಿತ ಐಎಎಸ್‌ ಪೂಜಾ ತಾಯಿ ಬಂಧನ

| Published : Jul 19 2024, 12:45 AM IST / Updated: Jul 19 2024, 05:27 AM IST

ಸಾರಾಂಶ

ಭೂ ವಿವಾದದ ಸಂಬಂಧ ರೈತರಿಗೆ ಗನ್‌ ತೋರಿಸಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಐಎಎಸ್‌ ಪೂಜಾ ಖೇಡ್ಕರ್ ತಾಯಿ ಮನೋರಮಾರನ್ನು ಪುಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

 ಪುಣೆ :  ಭೂ ವಿವಾದದ ಸಂಬಂಧ ರೈತರಿಗೆ ಗನ್‌ ತೋರಿಸಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಐಎಎಸ್‌ ಪೂಜಾ ಖೇಡ್ಕರ್ ತಾಯಿ ಮನೋರಮಾರನ್ನು ಪುಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧನದ ಭೀತಿಯಿಂದ ಆಕೆ ರಾಯ್‌ಗಡ ಜಿಲ್ಲೆಯ ಮಹಾಡ್‌ ಬಳಿಯ ಹಿರ್ಕಾನಿವಾಡಿಯ ಲಾಡ್ಜ್‌ ಒಂದರಲ್ಲಿ ಇಂದೂಬಾಯಿ ಎಂಬ ಹೆಸರಲ್ಲಿ ಅಡಗಿದ್ದರು. ಸುಳಿವು ಅರಿತ ಪೊಲೀಸರು ಆಕೆಯನ್ನು ಬಂಧಿಸಿ, ಜು.20ರವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ಆಕೆಯ ಮೇಲೆ ಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ಮುಲ್ಶಿ ಎಂಬ ಹಳ್ಳಿಯಲ್ಲಿ ರೈತರು ಮನೋರಮಾ ಮೇಲೆ ಭೂ ಅತಿಕ್ರಮಣ ಆರೋಪ ಮಾಡಿದ್ದರು. ಆಗ ಆಕೆ ಕೈಯ್ಯಲ್ಲಿ ಗನ್ ಹಿಡಿದು ರೈತರನ್ನು ಬೆದರಿಸಿದ್ದರು. ಮನೋರಮಾರ ವಿಡಿಯೋ ವೈರಲ್‌ ಆದ ಬಳಿಕ ಪೊಲೀಸರು ಆಕೆ ಹಾಗೂ ಪತಿ ದಿಲೀಪ್ ಖೇಡ್ಕರ್‌ಗಾಗಿ ಹುಡುಕಾಟ ಆರಂಭಿಸಿದ್ದರು.

ಇತ್ತ ಕೇಂದ್ರ ಲೋಕ ಸೇವಾ ಆಯೋಗಕ್ಕೆ ಅಂಗವೈಕಲ್ಯ ಮತ್ತು ಜಾತಿಯ ನಕಲಿ ಪ್ರಮಾಣ ಪತ್ರ ತೋರಿಸಿದ ಹಾಗೂ ಅಧಿಕಾರಕ್ಕೂ ಮೀರಿದ ಸವಲತ್ತು ಪಡೆದ ಆರೊಪಗಳನ್ನು ಎದುರಿಸುತ್ತಿರುವ ಪೂಜಾಳ ತರಬೇತಿ ರದ್ದುಗೊಳಿಸಿ ಮಸ್ಸೂರಿಯಲ್ಲಿರುವ ತರಬೇತಿ ಕೇಂದ್ರಕ್ಕೆ ಕರೆಸಿಕೊಳ್ಳಲಾಗಿದೆ.