ಐಸ್‌ಕ್ರೀಂ ಮ್ಯಾನ್‌ ರಘುನಂದನ್‌ ಕಾಮತ್‌ ನಿಧನ

| Published : May 18 2024, 01:30 AM IST / Updated: May 18 2024, 04:57 AM IST

ಸಾರಾಂಶ

14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ನ್ಯಾಚುರಲ್ಸ್‌ ಐಸ್‌ಕ್ರೀಂ ತೆರೆದು ಖ್ಯಾತಿ ಗಳಿಸಿದ್ದ ರಘುನಂದನ್‌ ಕಾಮತ್‌ ನಿಧನರಾಗಿದ್ದಾರೆ.

ಮುಂಬೈ: ನ್ಯಾಚುರಲ್ಸ್‌ ಐಸ್‌ಕ್ರೀಂ ಸಂಸ್ಥೆ ಮೂಲಕ ಖ್ಯಾತಿ ಗಳಿಸಿ ದೇಶದ ಐಸ್‌ಕ್ರೀಂ ಮ್ಯಾನ್‌ ಎಂಬ ಖ್ಯಾತ ಪಡೆದಿದ್ದ ಮಂಗಳೂರು ಮೂಲದ ರಘುನಂದನ್‌ ಕಾಮತ್‌ (75) ಅವರು ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. 

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಇವರು ಪತ್ನಿ, ಪುತ್ರರನ್ನು ಅಗಲಿದ್ದಾರೆ. ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್‌ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ಹಣ್ಣಿನ ವೈಶಿಷ್ಟ್ಯತೆಗಳನ್ನು ಸರಿಯಾಗಿ ಅರಿತುಕೊಂಡಿದ್ದರು. ಇವರು ತಮ್ಮ 14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ಅಲ್ಲಿ ಸೋದರರ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ 1984ರಲ್ಲಿ ನ್ಯಾಚುರಲ್‌ ಐಸ್‌ಕ್ರೀಂ ಎಂಬ ಸಂಸ್ಥೆಯನ್ನು ಕೇವಲ 4 ಸಿಬ್ಬಂದಿಯಿಂದ ಆರಂಭಿಸಿದರು.

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪಾವ್‌ ಬಜ್ಜಿ ಜೊತೆ ಐಸ್‌ಕ್ರೀಂ ಕೊಡಲು ಆರಂಭಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಇವರ ಐಸ್‌ಕ್ರೀಂ ಜನಪ್ರಿಯತೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಐಸ್‌ಕ್ರೀಂ ರಾರಾಜಿಸಲು ಆರಂಭಿಸಿತು. ಇದಾದ ಮೊದಲ ವಾರದಲ್ಲಿಯೇ ಮುಂಬೈನ ಜುಹೂ ಮಳಿಗೆ ಒಂದೇ ವರ್ಷದಲ್ಲಿ 5 ಲಕ್ಷ ರು. ವಹಿವಾಟು ದಾಖಲಿಸಿತ್ತು. ರಘುನಂದನ್‌ ಅವರ ನ್ಯಾಚುರಲ್‌ ಐಸ್‌ಕ್ರೀಂ ಪ್ರಸ್ತುತ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ 400 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಇವರ ಕಂಪನಿ ದೇಶದ ಟಾಪ್‌ 10 ಕಂಪನಿಗಳಲ್ಲಿ ಒಂದಾಗಿದೆ.