ಸಾರಾಂಶ
ಢಾಕಾ: ಮೀಸಲು ವಿರೋಧದ ಹೆಸರಲ್ಲಿ ಆರಂಭವಾಗಿ ಇದೀಗ ಹಿಂದೂ ವಿರೋಧಿ, ಭಾರತ ವಿರೋಧಿ ರೂಪ ಪಡೆದುಕೊಂಡಿರುವ ಬಾಂಗ್ಲಾದೇಶದ ವಿದ್ಯಾರ್ಥಿ ಪ್ರತಿಭಟನೆ, ಇದೀಗ 1971ರ ಯುದ್ಧದಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಐತಿಹಾಸಿಕ ಘಟನೆಯ ನೆನಪಾಗಿ ರೂಪುಗೊಂಡಿದ್ದ ಐತಿಹಾಸಿಕ ಸ್ಮಾರಕವನ್ನೇ ಬಲಿ ಪಡೆದಿದೆ.
1971ರ ಯುದ್ಧದಲ್ಲಿ ಪಾಕಿಸ್ತಾನ ಸೇನೆ ತನ್ನ 93000 ಯೋಧರೊಂದಿಗೆ ಭಾರತೀಯ ಸೇನೆ ಮತ್ತು ಬಾಂಗ್ಲಾದೇಶದ ಮುಕ್ತಿವಾಹಿನಿಗೆ ಶರಣಾಗಿತ್ತು. ಆಗ ಶರಣಾಗತಿಯ ಸಂಬಂಧ ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, ಭಾರತೀಯ ಸೇನಾಧಿಕಾರಿ ಲೆ.ಜ.ಜಗಜೀತ್ ಸಿಂಗ್ ಅರೋರಾ ಮುಂದೆ ದಾಖಲೆಗೆ ಸಹಿಹಾಕುತ್ತಿರುವ ಪ್ರಸಂಗವನ್ನು ನೆನಪಿಸುವ ಸ್ಮಾಕರವೊಂದನ್ನು ಮುಜೀಬ್‌ನಗರದಲ್ಲಿ ನಿರ್ಮಿಸಲಾಗಿತ್ತು. ಅದಕ್ಕೆ 1971 ಶಹೀದ್ ಮೆಮೋರಿಯಲ್ ಕಾಂಪ್ಲೆಕ್ಸ್ ಎಂದು ಹೆಸರಿಡಲಾಗಿತ್ತು.
ಆದರೆ ಭಾರತ ವಿರೋಧಿ ಗುಂಪೊಂದು ಇದೀಗ ಈ ಸ್ಮಾರಕವನ್ನೇ ಧ್ವಂಸಗೊಳಿಸುವ ಮೂಲಕ ತನ್ನ ಸ್ವಾತಂತ್ರ್ಯ ನೆನಪಿನ ಇತಿಹಾಸವನ್ನೇ ಅಳಿಸಿಹಾಕುವ ಹೇಯ ಕೆಲಸ ಮಾಡಿದೆ. ಈ ಕುರಿತ ಫೋಟೋವೊಂದನ್ನು ತಿರುವನಂತಪುರ ಕ್ಷೇತ್ತದ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿದ ಬಳಿಕ ಹಿಂದೂ ದೇಗುಲಗಳು, ಹಿಂದೂಗಳ ಮನೆ, ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ನಡೆಸುವ, ಅವುಗಳನ್ನು ಲೂಟಿ ಮಾಡುವ, ಬೆಂಕಿ ಹಚ್ಚಿ ನಾಶಗೊಳಿಸುವ ಹಲವು ಪ್ರಕರಣಗಳು ದೇಶಾದ್ಯಂತ ನಡೆದಿದೆ.