ಇಡ್ಲಿಯಿಂದ ಜೀವವೈವಿಧ್ಯಕ್ಕೆ ಹಾನಿ!

| Published : Feb 25 2024, 01:49 AM IST / Updated: Feb 25 2024, 08:12 AM IST

Idly

ಸಾರಾಂಶ

ಜೀವ ವೈವಿಧ್ಯವನ್ನು ಹಾನಿ ಮಾಡುವ ಪಟ್ಟಿಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ತಿಂಡಿ ಇಡ್ಲಿಗೆ ವಿಶ್ವದಲ್ಲೇ 6ನೇ ಸ್ಥಾನ ದೊರೆತಿದೆ.

ನವದೆಹಲಿ: ದಕ್ಷಿಣ ಭಾರತೀಯರು ಬಹಳ ಇಷ್ಟಪಟ್ಟು ತಿನ್ನುವ ಇಡ್ಲಿಯಿಂದ ಜೀವವೈವಿಧ್ಯಕ್ಕೆ ಹಾನಿಯಾಗುತ್ತಿದೆ ಎಂಬ ಅಚ್ಚರಿಯ ವರದಿಯೊಂದು ಸಂಚಲನಕ್ಕೆ ಕಾರಣವಾಗಿದೆ.

ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತಿರುವ ವಿಶ್ವದ 151 ತಿನಿಸುಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಇಡ್ಲಿ 6ನೇ ಸ್ಥಾನ ಪಡೆದಿದೆ. 

ಉತ್ತರ ಭಾರತದಲ್ಲಿ ಬಹುವಾಗಿ ಬಳಕೆಯಾಗಿರುವ ರಾಜ್ಮಾ 7ನೇ ಸ್ಥಾನ ಪಡೆದುಕೊಂಡಿದೆ.ಪ್ರಥಮ ಸ್ಥಾನದಲ್ಲಿ ಸ್ಪೇನ್‌ನ ಲೆಕ್ಯಾಜೋ ಎಂಬ ಎಳೆಯ ಕುರಿಯ ಮಾಂಸ ಇದೆ. 

ಬ್ರೆಜಿಲ್‌ನಲ್ಲಿ ಬಳಕೆಯಾಗುವ ಮಾಂಸದ ತಿನಿಸು 2ನೇ ಸ್ಥಾನದಲ್ಲಿದೆ. ಸಸ್ಯಾಹಾರಕ್ಕಿಂತ ಮಾಂಸಾಹಾರಗಳೇ ಜೀವವೈವಿಧ್ಯಕ್ಕೆ ಹೆಚ್ಚು ಹಾನಿ ಮಾಡುತ್ತಿವೆ ಎಂದು ವರದಿ ತಿಳಿಸಿದೆ.

ಬಳಸಲಾಗುವ ಪದಾರ್ಥಗಳ ಆಧಾರದಲ್ಲಿ ಪ್ರತಿಯೊಂದು ತಿನಿಸು ಕೂಡ ಪ್ರಭೇದಗಳು ಹಾಗೂ ವನ್ಯಜೀವಿಗಳು, ಪಕ್ಷಿ ಹಾಗೂ ಉಭಯವಾಸಿಗಳ ಮೇಲೆ ಪರಿಣಾಮವನ್ನು ಹೊಂದಿವೆ. 

ಒಂದು ತಿನಿಸಿಗೆ ಬೇಕಾದ ಆಹಾರ ತಯಾರಿಸುವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರಭೇದಗಳು ಪರಿಣಾಮಕ್ಕೆ ಒಳಗಾಗುತ್ತವೆ ಎಂಬುದನ್ನು ಜೀವವೈವಿಧ್ಯ ಹೆಜ್ಜೆಗುರುತು ಎಂದು ಕರೆಯಲಾಗುತ್ತದೆ ಎಂದು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಜೈವಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಲೂಯಿಸ್‌ ರೋಮನ್‌ ಕ್ಯಾರಸ್ಕೋ ತಿಳಿಸಿದ್ದಾರೆ.

ಮಾಂಸಾಹಾರ ತಿನಿಸುಗಳು ಜೀವಿಗಳ ಸಾಕಣೆ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ. 

ಈ ಹಿಂದೆ ಜೀವವೈವಿಧ್ಯ ತಾಣಗಳಾಗಿದ್ದ ಸ್ಥಳಗಳಲ್ಲಿ ಅಕ್ಕಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿರುವುದರಿಂದ ಜೀವ ವೈವಿಧ್ಯಕ್ಕೆ ಹಾನಿಯಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.