ನೀಟ್‌ ಪಾವಿತ್ರ್ಯವೇ ಹಾಳಾಗಿದ್ದರೆ ಮರುಪರೀಕ್ಷೆಗೆ ಆದೇಶ: ಸುಪ್ರೀಂ

| Published : Jul 09 2024, 12:49 AM IST / Updated: Jul 09 2024, 04:50 AM IST

NEET UG 2024 Row Supreme Court Hearing
ನೀಟ್‌ ಪಾವಿತ್ರ್ಯವೇ ಹಾಳಾಗಿದ್ದರೆ ಮರುಪರೀಕ್ಷೆಗೆ ಆದೇಶ: ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

 ವೈದ್ಯಕೀಯ ಪ್ರವೇಶ ಪರೀಕ್ಷೆಯ ಪಾವಿತ್ರ್ಯವೇ ಹಾಳಾಗಿದ್ದರೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೆ, ಮರುಪರೀಕ್ಷೆಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

 ನವದೆಹಲಿ :  ವೈದ್ಯ, ದಂತ ವೈದ್ಯ ಹಾಗೂ ಆಯುಷ್‌ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ‘ನೀಟ್‌’ನಲ್ಲಿ ಈ ಬಾರಿ ವ್ಯಾಪಕ ಗೋಲ್‌ಮಾಲ್‌ ಆಗಿದೆ ಎಂಬ ಆರೋಪಗಳ ನಡುವೆಯೇ, ವೈದ್ಯಕೀಯ ಪ್ರವೇಶ ಪರೀಕ್ಷೆಯ ಪಾವಿತ್ರ್ಯವೇ ಹಾಳಾಗಿದ್ದರೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೆ, ಮರುಪರೀಕ್ಷೆಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

ಒಂದಂತೂ ಸ್ಪಷ್ಟ. ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಟೆಲಿಗ್ರಾಂ, ವಾಟ್ಸ್‌ಆ್ಯಪ್‌ ಹಾಗೂ ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ ಅದು ಸೋರಿಕೆಯಾಗಿದ್ದರೆ, ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ಯಾವುದೇ ಪ್ರಶ್ನೆಯೇ ಇಲ್ಲ. ಯಾವ ಪ್ರಮಾಣದಲ್ಲಿ ಆಗಿದೆ ಎಂಬುದು ಗೊತ್ತಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಈ ಪರೀಕ್ಷಾ ಅವ್ಯವಹಾರದಲ್ಲಿ ಯಾರು ತಪ್ಪಿತಸ್ಥರು ಎಂಬುದನ್ನು ಪತ್ತೆ ಹಚ್ಚಲು ಆಗದಿದ್ದರೆ, ಮರು ಪರೀಕ್ಷೆಗೆ ಆದೇಶಿಸಬೇಕಾಗುತ್ತದೆ. ಏನು ನಡೆದಿದೆಯೋ ಅದನ್ನು ನಿರಾಕರಿಸುವುದು ಬೇಡ. ಒಂದು ವೇಳೆ, ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ ಎಂದುಕೊಳ್ಳೋಣ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಾಭ ಪಡೆದವರ ಪತ್ತೆಗೆ ಸರ್ಕಾರ ಏನು ಮಾಡುತ್ತದೆ? ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಷ್ಟು ಮಂದಿ ಲಾಭ ಪಡೆದುಕೊಂಡಿದ್ದಾರೆ ಹಾಗೂ ಅವರ ವಿರುದ್ಧ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ನಮಗೆ ಗೊತ್ತಾಗಬೇಕು ಎಂದು ನ್ಯಾಯಾಲಯ ಪ್ರಶ್ನಿಸಿತು.

ಈ ಬಾರಿಯ ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ಪ್ರಮಾಣ ಕಡಿಮೆ ಇತ್ತು. ಅಕ್ರಮ ಎಸಗಿದವರ ಪೈಕಿ ಎಷ್ಟು ಮಂದಿಯ ಫಲಿತಾಂಶವನ್ನು ತಡೆಹಿಡಿಯಲಾಗಿದೆ? ಅವರು ದೇಶದ ಯಾವ್ಯಾವ ಭಾಗಗಳಿಗೆ ಸೇರಿದವರೂ ಎಂಬುದು ನಮಗೆ ತಿಳಿಯಬೇಕು ಎಂದು ಹೇಳಿತು.

ನೀಟ್‌ ಪರೀಕ್ಷೆಯಲ್ಲಿ ಈ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳು ಆಗಿವೆ, ಈ ಕಾರಣ ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿರುವ 38 ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿರುವುದಕ್ಕೆ ಪುರಾವೆಯೇ ಇಲ್ಲ. ಹೀಗಾಗಿ ಪರೀಕ್ಷೆಯನ್ನೇ ರದ್ದುಗೊಳಿಸಿದರೆ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಪರೀಕ್ಷಾ ಸಂಸ್ಥೆ ಮರುಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿವೆ.