ದಕ್ಷಿಣದಲ್ಲಿ ಏಪ್ರಿಲ್‌ ಬಿಸಿಲು 123 ವರ್ಷಗಳಲ್ಲೇ 2ನೇ ಗರಿಷ್ಠ

| Published : May 02 2024, 01:36 AM IST / Updated: May 02 2024, 05:10 AM IST

ದಕ್ಷಿಣದಲ್ಲಿ ಏಪ್ರಿಲ್‌ ಬಿಸಿಲು 123 ವರ್ಷಗಳಲ್ಲೇ 2ನೇ ಗರಿಷ್ಠ
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲು ಭಾರೀ ಪ್ರಮಾಣದಲ್ಲಿ ಮೇನಲ್ಲೂ ಕಾಣಿಸಿಕೊಳ್ಳಲಿದ್ದು, ಭಾರತದಾದ್ಯಂತ ಉಷ್ಣಹವೆ ಕಾಣಿಸಿಕೊಳ್ಳುವ ಸಂಭವವಿದೆ. ಅದರಲ್ಲೂ ಮುಂದಿನ 5-7 ದಿನ ಉತ್ತರ ಭಾರತದಲ್ಲಿ ಭಾರೀ ತಾಪಮಾನವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ನವದೆಹಲಿ :  ಕಳೆದ ತಿಂಗಳಿಡೀ ದೇಶವನ್ನು ಬಹುವಾಗಿ ಕಾಡಿದ ಉಷ್ಣ ಅಲೆ ಇತಿಹಾಸದಲ್ಲೇ ಎರಡನೇ ಗರಿಷ್ಠ ಪ್ರಮಾಣದ್ದು ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಈ ಉಷ್ಣ ಅಲೆ ಏಪ್ರಿಲ್‌ಗೆ ಮುಕ್ತಾಯವಾಗದು, ಮೇ ತಿಂಗಳಲ್ಲೂ ದೇಶದ ವಿವಿಧ ರಾಜ್ಯಗಳನ್ನು ಕಾಡಲಿದೆ ಎಂದು ಎಚ್ಚರಿಕೆ ನೀಡಿದೆ.

ದಕ್ಷಿಣ ಭಾರತದಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 1901ರ ಬಳಿಕ ಎರಡನೇ ಗರಿಷ್ಠ ತಾಪಮಾನವಾಗಿದೆ. ಅದೇ ರೀತಿ ದೇಶದ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಕನಿಷ್ಠ ತಾಪಮಾನ (22 ಡಿಗ್ರಿ ಸೆಲ್ಸಿಯಸ್) 1901ರ ಬಳಿಕ ಅತ್ಯಧಿಕವಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ, ಏಪ್ರಿಲ್‌ನಂತೆ ಮೇ ತಿಂಗಳಿನಲ್ಲೂ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸಾಧ್ಯತೆಯಿದೆ. 

ಅಲ್ಲದೆ ಉತ್ತರ ಬಯಲು ಪ್ರದೇಶಗಳು, ಮಧ್ಯ ಭಾರತದ ಪ್ರದೇಶಗಳು ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚು ಬಿಸಿ ಗಾಳಿಯ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.ಮೇ ತಿಂಗಳಲ್ಲಿ ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್ ಪ್ರದೇಶದಲ್ಲಿ ಸುಮಾರು 8-11 ಬಿಸಿ ಗಾಳಿಯ ದಿನಗಳು ಸಂಭವಿಸಬಹುದು. 

ರಾಜಸ್ಥಾನದ ಉಳಿದ ಭಾಗಗಳು, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಕರ್ನಾಟಕದ ಉತ್ತರ ಒಳನಾಡು ಮತ್ತು ತೆಲಂಗಾಣಗಳು 5-7 ಉಷ್ಣ ಅಲೆಯ ದಿನಗಳನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ 

ಸಾಮಾನ್ಯವಾಗಿ, ಉತ್ತರ ಬಯಲು ಪ್ರದೇಶಗಳು, ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಪ್ರದೇಶಗಳು ಮೇ ತಿಂಗಳಲ್ಲಿ ಸುಮಾರು 3 ದಿನಗಳ ಶಾಖದ ಅಲೆಯನ್ನು ಅನುಭವಿಸುತ್ತವೆ. ಆದರೆ ಅದು ಪ್ರತಿ ಸಲಕ್ಕಿಂತ ಈ ಸಲ ದ್ವಿಗುಣವಾಗಿದೆ.

ಇದಕ್ಕೆ ಕಾರಣ ಏನು?:

ಗುಡುಗು ಸಹಿತ ಬಿರುಗಾಳಿಗಳ ಅನುಪಸ್ಥಿತಿ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿ ಮತ್ತು ಭಾರತದ ಪಕ್ಕದ ಪೂರ್ವ ಕರಾವಳಿಯಲ್ಲಿ ಕಡಿಮೆ ಮಟ್ಟದಲ್ಲಿ ನಿರಂತರ ಆಂಟಿಸೈಕ್ಲೋನ್ ಇರುವುದು ದಕ್ಷಿಣ ಭಾರತ ಹಾಗೂ ಪೂರ್ವ ಭಾರತದಲ್ಲಿ ಬಿರು ಬೇಸಿಗೆಗೆ ಕಾರಣ ಎಂದು ಮಹಾಪಾತ್ರ ಹೇಳಿದ್ದಾರೆ.