ಸಾರಾಂಶ
ನವದೆಹಲಿ : ಕಳೆದ ವರ್ಷ ಭೀಕರ ಬರದಿಂದ ಕಂಗೆಟ್ಟಿದ್ದ ಭಾರತವು ಈ ವರ್ಷ ವಾಡಿಕೆಗಿಂತ ಅಧಿಕ ಮಾನ್ಸೂನ್ ಮಳೆ ಪಡೆಯುವ ಸಾಧ್ಯತೆಯಿದೆ. ಕರ್ನಾಟಕ ಒಳಗೊಂಡ ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಮುಂಗಾರು ಇನ್ನು 5 ದಿನದಲ್ಲಿ ಕೇರಳಕ್ಕೆ ಕಾಲಿಡಲು ಪೂರಕ ವಾತಾವರಣವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
‘ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ವಾಯುವ್ಯದಲ್ಲಿ ಸಾಮಾನ್ಯ ಮತ್ತು ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಸೋಮವಾರ ಹೇಳಿದ್ದಾರೆ.
ದೇಶವು 4 ತಿಂಗಳ ಮಾನ್ಸೂನ್ ಋತುವಿನಲ್ಲಿ (ಜೂನ್ ನಿಂದ ಸೆಪ್ಟೆಂಬರ್) ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನೋಡಬಹುದು. ದೀರ್ಘಾವಧಿಯಲ್ಲಿ ಸರಾಸರಿ 87 ಸೆಂ.ಮೀ. ಅಥವಾ 106% ನಷ್ಟು ಮಳೆ ಬೀಳಲಿದೆ ಎಂದು ಕಳೆದ ತಿಂಗಳು ಐಎಂಡಿ ಅಂದಾಜಿಸಿತ್ತು.
ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿದ ಮೊಹಾಪಾತ್ರ, ‘ಜೂನ್‌ನಲ್ಲಿ 166.9 ಮಿ.ಮೀ. ಅಥವಾ ಶೇ.92ರಿಂದ 108ರಷ್ಟು ಮಳೆ ಆಗಲಿದೆ. ದಕ್ಷಿಣ ಭಾರತದ ಕೆಲವು ಪ್ರದೇಶ ಹೊರತುಪಡಿಸಿ ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಲಿದೆ. ಕೇರಳಕ್ಕೆ 5 ದಿನದಲ್ಲಿ ಮುಂಗಾರು ಆಗಮಿಸಲು ಪೂರಕ ವಾತಾವರಣ ಇದೆ’ ಎಂದಿದ್ದಾರೆ.
ಮುಂಗಾರು ಭಾರತದ ಪಾಲಿಗೆ ನಿರ್ಣಾಯಕವಾಗಿದೆ. ಏಕೆಂದರೆ ದೇಶದ ಶೇ.52ರಷ್ಟು ಬೆಳೆ ಮುಂಗಾರು ಮೇಲೇ ಅವಲಂಬಿತವಾಗಿದೆ.