ಸುರಕ್ಷಿತ ಯಾನಕ್ಕಾಗಿ ಇಸ್ರೋ ನಾರಾಯಣನ್‌ಗೆ ಶುಭಾಂಶು ಧನ್ಯವಾದ

| N/A | Published : Jul 07 2025, 11:48 PM IST / Updated: Jul 08 2025, 04:58 AM IST

Shubhanshu Shukla

ಸಾರಾಂಶ

ಆಕ್ಸಿಯಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಇಸ್ರೋ ಮುಖ್ಯಸ್ಥ ವಿ.ನಾರಾಯಣ್ ಅವರೊಂದಿಗೆ ಭಾನುವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು: ಆಕ್ಸಿಯಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಇಸ್ರೋ ಮುಖ್ಯಸ್ಥ ವಿ.ನಾರಾಯಣ್ ಅವರೊಂದಿಗೆ ಭಾನುವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ನಾರಾಯಣ್, ಅಂತರಿಕ್ಷದಲ್ಲಿ ನಡೆಯುತ್ತಿರುವ ವಿವಿಧ ಸಂಶೋಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಮತ್ತೊಂದೆಡೆ ಅಂತರಿಕ್ಷಕ್ಕೆ ಸುರಕ್ಷಿತ ಪ್ರಯಾಣವನ್ನು ಖಾತರಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಇಸ್ರೋ ತಂಡದ ಪ್ರಯತ್ನಗಳಿಗೆ ಶುಕ್ಲಾ ಕೃತಜ್ಞತೆ ವ್ಯಕ್ತಪಡಿಸಿದರು.

ಮಹಾರಾಷ್ಟ್ರ 8 ಜಿಲ್ಲೇಲಿ 6 ತಿಂಗಳಲ್ಲಿ 520 ರೈತರ ಆತ್ಮಹತ್ಯೆ

ಛತ್ರಪತಿ ಸಂಭಾಜಿನಗರ: ಸದಾ ಭಾರೀ ಬರಗಾಲಕ್ಕೆ ತುತ್ತಾಗುವ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಬರುವ 8 ಜಿಲ್ಲೆಗಳಲ್ಲಿ, ಕಳೆದ 6 ತಿಂಗಳಲ್ಲಿ 520 ರೈತರು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಮಾಹಿತಿ ಬಯಲಾಗಿದೆ.2025ರ ಜನವರಿಯಿಂದ ಜೂ.26ರ ವರೆಗೆ 520 ಅನ್ನದಾತರು ತಮ್ಮ ಜೀವವನ್ನು ಕೊನೆಗಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಂತಹ 430 ಪ್ರಕರಣಗಳು ದಾಖಲಾಗಿತ್ತು. ಈ ಬಾರಿ ಇದು ಶೇ.20ರಷ್ಟು ಹೆಚ್ಚಾಗಿದೆ ಎಂದು ರಾಜ್ಯ ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಬೀಡ್‌ಡ್‌ ಜಿಲ್ಲೆಯಲ್ಲೇ 126 ಜೀವಾಘಾತಗಳು ವರದಿಯಾಗಿದ್ದು, ಮಧ್ಯ ಮಹಾರಾಷ್ಟ್ರ ಭಾಗದಲ್ಲಿ ಇದೇ ಅತ್ಯಧಿಕವಾಗಿದೆ. ಕಳೆದ ವರ್ಷವೂ ಈ ಪ್ರದೇಶದಲ್ಲಿ ಅತಿ ಹೆಚ್ಚು, 101 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ಮಸ್ಕ್‌ ಎಲ್ಲೆ ಮೀರುತ್ತಿದ್ದಾರೆ: ಹೊಸ ಪಕ್ಷ ಸ್ಥಾಪನೆ ಬಗ್ಗೆ ಅಧ್ಯಕ್ಷ ಟ್ರಂಪ್ ಟೀಕೆ

ನ್ಯೂಯಾರ್ಕ್‌: ಅಮೆರಿಕದಲ್ಲಿ ಹೊಸ ಪಕ್ಷ ಸ್ಥಾಪಿಸಿರುವ ತಮ್ಮ ರಾಜಕೀಯ ವೈರಿ ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್‌ ನಡೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಿಡಿಕಾರಿದ್ದು, ‘ಇದೊಂದು ಹಾಸ್ಯಾಸ್ಪದ ಯೋಜನೆ. ಮಸ್ಕ್‌ ಎಲ್ಲಾ ಎಲ್ಲೆ ಮೀರುತ್ತಿದ್ದಾರೆ’ ಎಂದಿದ್ದಾರೆ. ಟ್ರೂತ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್,‘ ನನ್ನ ಪ್ರಕಾರ ಹೊಸ ಪಕ್ಷದ ಸ್ಥಾಪನೆ ಎನ್ನುವುದು ಹಾಸ್ಯಾಸ್ಪದ. ಈಗಾಗಲೇ ದ್ವಿಪಕ್ಷ ಪದ್ಧತಿಯಿದೆ. ಈಗ ಮೂರನೇ ಪಕ್ಷದ ಸ್ಥಾಪನೆ ಕೇವಲ ಗೊಂದಲಗಳನ್ನು ಸೇರಿಸಿದಂತೆ. ಕಳೆದ ಐದು ವಾರಗಳಲ್ಲಿ ಮಸ್ಕ್‌ ಸಂಪೂರ್ಣವಾಗಿ ಎಲ್ಲೆ ಮೀರಿದ್ದು ನೋಡಿ ನನಗೆ ಬೇಸರವಾಗಿದೆ’ ಎಂದು ಟೀಕಿಸಿದ್ದಾರೆ.

ಉಗ್ರ ನಂಟಿನ ಸರ್ಕಾರಿ ಉದ್ಯೋಗಿಗಳ ಪತ್ತೆಗೆ ಕಾಶ್ಮೀರದಲ್ಲಿ ಹೊಸ ಪಡೆ

ಶ್ರೀನಗರ: ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಭಯೋತ್ಪಾದನೆ ವಿರುದ್ಧ ಮತ್ತೊಂದು ಸಮರ ಸಾರಿದ್ದು, ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಭಯೋತ್ಪಾದಕರ ಜೊತೆ ನಂಟಿರುವುದು ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಆದೇಶಿಸಿದ್ದಾರೆ. ಅಲ್ಲದೇ ತನಿಖೆಗೆ ವಿಶೇಷ ಕಾರ್ಯಪಡೆ ರಚಿಸಿದ್ದಾರೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ( ಸಿಐಡಿ) ನೇತೃತ್ವದ ಐವರು ಸದಸ್ಯರನ್ನೊಳಗೊಂಡ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ 80 ಸರ್ಕಾರಿ ಉದ್ಯೋಗಿಗಳನ್ನು ಭಯೋತ್ಪಾದಕರ ಜೊತೆಗಿನ ನಂಟಿನ ಕಾರಣಕ್ಕೆ ಕೆಲಸದಿಂದ ವಜಾಗೊಂಡಿದ್ದಾರೆ.

ಷೇರುಪೇಟೆ ಅಕ್ರಮದ ಬಗ್ಗೆ ಮೋದಿ ಸರ್ಕಾರ ಮೌನ: ರಾಗಾ ದೂರು

ನವದೆಹಲಿ: ಷೇರುಮಾರುಕಟ್ಟೆಯಲ್ಲಿ ಕೃತಕ ಏರಿಳಿತ ಸೃಷ್ಟಿಸಿ ಲಾಭಮಾಡಿಕೊಂಡ ಜೇನ್‌ ಸ್ಟ್ರೀಟ್‌ ಸಮೂಹ ಸಂಸ್ಥೆಗಳ ಮೇಲೆ ಭಾರತೀಯ ಷೇರುಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ನಿರ್ಬಂಧ ವಿಧಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಷ್ಯೂಚರ್‌ ಆ್ಯಂಡ್‌ ಆಪ್ಷನ್‌ ಮಾರುಕಟ್ಟೆಯಲ್ಲಿ ದೊಡ್ಡವರ ಅಕ್ರಮದ ಕುರಿತು ಮೌನವಹಿಸುವ ಮೂಲಕ ಮೋದಿ ಸರ್ಕಾರವು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರು ಹಾಗೂ ಸಾಮಾನ್ಯ ಹೂಡಿಕೆದಾರರನ್ನು ನಷ್ಟದ ಅಂಚಿಗೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನಾವು ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿತ್ತು ಎಂದು ರಾಹುಲ್‌ ದೂರಿದ್ದಾರೆ.

Read more Articles on