ಪಹಲ್ಗಾಂ ಉಗ್ರರಿಗೆ ನೆರವು ನೀಡಿದ ಓರ್ವ ಬಂಧನ

| N/A | Published : Sep 25 2025, 01:03 AM IST

ಸಾರಾಂಶ

ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್‌ ಉಗ್ರರು ನಡೆಸಿದ ನರಮೇಧದ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್‌ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

 ಶ್ರೀನಗರ: ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್‌ ಉಗ್ರರು ನಡೆಸಿದ ನರಮೇಧದ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್‌ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. 

ಕುಲ್ಗಾಮ್‌ ನಿವಾಸಿ 26 ವರ್ಷದ ಮೊಹಮ್ಮದ್‌ ಯೂಸುಫ್‌ ಕಟಾರಿಯಾ ಎಂಬಾತ ಬಂಧಿತ. ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್‌ ಫ್ರಂಟ್‌ ( ಟಿಆರ್‌ಎಫ್‌) ಉಗ್ರರಿಗೆ ಸಹಾಯ ಮಾಡಿರುವ ಆರೋಪ ಈತನ ಮೇಲಿದೆ. ಪಹಲ್ಗಾಂ ನರಮೇಧದಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಸೇನೆಯು ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆ ನಡೆಸಿ ಹತ್ಯೆಗೈದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು. ಅವುಗಳ ವಿಧಿವಿಜ್ಞಾನ ತನಿಖೆಯ ಆಧಾರದಲ್ಲಿ ಈತನ ಬಂಧನವಾಗಿದೆ.ಗುತ್ತಿಗೆ ಕೆಲಸ ಮಾಡುತ್ತಿದ್ದ ಈತ, ಸ್ಥಳೀಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ.

 ಕೆಲವು ತಿಂಗಳ ಹಿಂದೆ ಭಯೋತ್ಪಾದಕ ಸಂಪರ್ಕಕ್ಕೆ ಬಂದು ಅವರಿಗೆ ನೆರವು ನೀಡಲು ಪ್ರಾರಂಭಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದರ ಜತೆಗೆ ಪಹಲ್ಗಾಂ ದಾಳಿಗೂ ಮುನ್ನ ಕುಲ್ಗಾಮ್‌ನ ಅರಣ್ಯಪ್ರದೇಶಗಳಲ್ಲಿ ಸಂಚರಿಸಲು ಲಷ್ಕರ್‌ ಉಗ್ರರಿಗೆ ನೆರವು ನೀಡಿದ್ದ ಎನ್ನುವುದು ತನಿಖೆಯಿಂದ ಬಯಲಾಗಿದೆ.ಕಳೆದ ಜೂನ್‌ ತಿಂಗಳಿನಲ್ಲಿ ಎನ್‌ಐಎ ಅಧಿಕಾರಿಗಳು ಪಹಲ್ಗಾಂ ಕೃತ್ಯಕ್ಕೆ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಾಟ್‌ಕೋಟ್‌ನ ಪರ್ವೇಜ್‌ ಅಹಮದ್‌ ಜೋಥರ್‌ ಮತ್ತು ಪಹಲ್ಗಾಂನ ಹಿಲ್‌ ಪಾರ್ಕ್‌ನ ಬಶೀರ್‌ ಅಹಮದ್‌ ಜೋಥರ್‌ ಎನ್ನುವ ಇಬ್ಬರನ್ನು ಬಂಧಿಸಿದ್ದರು.

Read more Articles on