ವಯನಾಡು ಕ್ಷೇತ್ರಕ್ಕೆ ರಾಹುಲ್‌ ರಾಜೀನಾಮೆ?

| Published : Jun 13 2024, 12:48 AM IST / Updated: Jun 13 2024, 05:32 AM IST

ಸಾರಾಂಶ

18ನೇ ಲೋಕಸಭಾ ಚುನಾವಣೆಯಲ್ಲಿ ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಗೆದ್ದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇರಳದ ವಯನಾಡು ಕ್ಷೇತ್ರ ತೊರೆಯುವ ಸಾಧ್ಯತೆ ದಟ್ಟವಾಗಿದೆ.

ಮಲಪ್ಪುರಂ: 18ನೇ ಲೋಕಸಭಾ ಚುನಾವಣೆಯಲ್ಲಿ ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಗೆದ್ದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇರಳದ ವಯನಾಡು ಕ್ಷೇತ್ರ ತೊರೆಯುವ ಸಾಧ್ಯತೆ ದಟ್ಟವಾಗಿದೆ.

ತಮ್ಮನ್ನು ಗೆಲ್ಲಿಸಿದ ವಯನಾಡು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ರಾಹುಲ್‌ ಬುಧವಾರ ಇಲ್ಲಿ ರೋಡ್‌ಶೋ ನಡೆಸಿದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ವಯನಾಡು ಜನತೆ ಮತ್ತೆ ನನ್ನ ಕೈ ಹಿಡಿದಿದ್ದು, ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ನಾನು ಈಗ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ವಯನಾಡು, ರಾಯ್‌ಬರೇಲಿ ಯಾವುದಾದರೂ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳಲು ನಾನು ನಿರ್ಧಾರ ತೆಗೆದುಕೊಂಡರೆ ಎರಡೂ ಕ್ಷೇತ್ರದ ಜನತೆ ನನ್ನ ನಿರ್ಧಾರವನ್ನು ಸಂತೋಷವಾಗಿ ಸ್ವೀಕರಿಸುತ್ತಾರೆ ಎಂದು ನಾನು ಭಾವುಸುತ್ತೇನೆ ಎಂದರು.

ಆದರೆ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸುಧಾಕರನ್‌, ‘ದೇಶ ಮುನ್ನಡೆಸಬೇಕಾದ ರಾಹುಲ್‌ ಗಾಂಧಿ ವಯನಾಡಲ್ಲೇ ಇರಬೇಕೆಂದು ನಾವು ಬಯಸುವುದು ಸರಿಯಲ್ಲ. ಈ ವಿಷಯದಲ್ಲಿ ನಾವು ದುಃಖ ಪಡಬಾರದು’ ಎನ್ನುವ ಮೂಲಕ ರಾಹುಲ್‌ ವಯನಾಡು ತೊರೆದು ಉತ್ತರಪ್ರದೇಶ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ

==

ರಾಯ್‌ಬರೇಲಿಯೇ ಏಕೆ?

ಗಾಂಧೀ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ, ತೊರೆದರೆ ಗಾಂಧೀ ಕುಟುಂಬ ನಂಟು ತಪ್ಪುತ್ತದೆ

ಯುಪಿಯಲ್ಲಿ ಇಂಡಿ ಕೂಟ ಉತ್ತಮ ಸಾಧನೆ ಮಾಡಿದ್ದು, ಅದನ್ನು ಕಾಪಾಡಿಕೊಳ್ಳೂವ ಹೊಣೆ ಇದೆ

ವಯನಾಡಿಗೆ ಹೋಲಿಸಿದರೆ ದೆಹಲಿಗೆ ಸಮೀಪದ ರಾಯ್‌ಬರೇಲಿಗೆ ಹೋಗಿಬರುವುದು ಸುಲಭ

 ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌, ಮೋದಿ ಅವರು ‘ನಾನು ದೇವರ ಆಜ್ಞೆಯಂತೆ ನಾನು ಭೂಮಿಯಲ್ಲಿ ಕೆಲಸ ಮಾಡಲು ಬಂದಿದ್ದೇನೆ’ ಎಂದು ಚುನಾವಣಾ ರ್‍ಯಾಲಿ ಸಂದರ್ಭದಲ್ಲಿ ತಿಳಿಸಿದ್ದರು. ಆದರೆ ಅವರು ಅಂಬಾನಿ ಮತ್ತು ಅದಾನಿ ಅವರಿಗೆ ಪೂರಕವಾಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ರಕ್ಷಣಾ ವಲಯದಲ್ಲಿ ಕೈಗಾರಿಕೋದ್ಯಮಿಗೆ ಸಹಾಯ ಮಾಡಲು ಅಗ್ನಿವೀರ್‌ ಎಂಬ ಅಸ್ತ್ರವನ್ನು ಬಳಸಲು ದೇವರೇ ಪ್ರಧಾನಿ ಅವರಿಗೆ ನಿರ್ದೇಶನ ನೀಡುತ್ತಾರೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡದೇ ದೇಶದ ಜನತೆ ಸಂದೇಶವನ್ನು ರವಾನಿಸಿದ್ದಾರೆ. ಆದರೂ ಮೋದಿ ಅವರಿಗೆ ಮನೋಭಾವ ಕಡಿಮೆಯಾಗಿಲ್ಲ ಎಂದರು.