ಸಾರಾಂಶ
ಗಾಜಾ ಪಟ್ಟಿ ಪ್ರದೇಶದಲ್ಲಿನ ಇಸ್ರೇಲ್ ದಾಳಿ ಬಳಿಕ ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರ ಪರ ಮತ್ತೊಮ್ಮೆ ಧ್ವನಿ ಎತ್ತಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ, ಪ್ಯಾಲೆಸ್ತೀನ್ ಹೆಸರು, ಲಾಂಛನ ಒಳಗೊಂಡ ಬ್ಯಾಗ್ ಅನ್ನು ಸೋಮವಾರ ಸಂಸತ್ತಿಗೆ ತಂದು ವಿವಾದ ಸೃಷ್ಟಿಸಿದ್ದಾರೆ.
ನವದೆಹಲಿ: ಗಾಜಾ ಪಟ್ಟಿ ಪ್ರದೇಶದಲ್ಲಿನ ಇಸ್ರೇಲ್ ದಾಳಿ ಬಳಿಕ ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರ ಪರ ಮತ್ತೊಮ್ಮೆ ಧ್ವನಿ ಎತ್ತಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ, ಪ್ಯಾಲೆಸ್ತೀನ್ ಹೆಸರು, ಲಾಂಛನ ಒಳಗೊಂಡ ಬ್ಯಾಗ್ ಅನ್ನು ಸೋಮವಾರ ಸಂಸತ್ತಿಗೆ ತಂದು ವಿವಾದ ಸೃಷ್ಟಿಸಿದ್ದಾರೆ. ಪ್ರಿಯಾಂಕಾ ನಡೆಗೆ ಬಿಜೆಪಿ ಕಿಡಿಕಾರಿದೆ.
ಈ ಹಿಂದೆ ಕೂಡಾ ಪ್ರಿಯಾಂಕಾ, ಗಾಜಾ ಸಂತ್ರಸ್ತರ ಪರ ಧ್ವನಿ ಎತ್ತಿದ್ದರು. ಈ ನಡುವೆ ಇತ್ತೀಚೆಗೆ ಪ್ರಿಯಾಂಕಾ ವಯನಾಡು ಲೋಕಸಭಾ ಉಪಚುನಾವಣೆ ಗೆದ್ದ ಬಳಿಕ ಭಾರತದಲ್ಲಿನ ಪ್ಯಾಲೆಸ್ತೀನ್ ರಾಯಭಾರ ಕಚೇರಿ, ಪ್ರಿಯಾಂಕಾಗೆ ಅಭಿನಂದನೆ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಸೋಮವಾರ ಸಂಸತ್ತಿಗೆ ಆಗಮಿಸುವ ವೇಳೆ ಪ್ಯಾಲೆಸ್ತೀನ್ ಎಂದು ಹೆಸರು ಬರೆದಿರುವ, ಪ್ಯಾಲೆಸ್ತೀನ್ ಲಾಂಛನ ಮತ್ತು ಪ್ಯಾಲೆಸ್ತೀನ್ ಪರ ಬೆಂಬಲ ವ್ಯಕ್ತಪಡಿಸುವ ಸಂಕೇತವಾದ ಕಲ್ಲಂಗಡಿ ಹಣ್ಣಿನ ಚಿತ್ರವಿರುವ ಬ್ಯಾಗ್ ಅನ್ನು ಹೆಗಲ ಮೇಲೆ ಹಾಕಿಕೊಂಡು ಬಂದು ಗಮನ ಸೆಳೆದರು.ಬಿಜೆಪಿ ಕಿಡಿ:‘
ಗಾಂಧಿ ಕುಟುಂಬ ಯಾವಾಗಲೂ ತುಷ್ಟೀಕರಣ ಮಾಡುತ್ತದೆ. ಚುನಾವಣೆಯಲ್ಲಿ ಅವರ ಸೋಲಿಗೆ ಇಂಥ ತುಷ್ಟೀಕರಣದ ಚೀಲವೇ ಕಾರಣ. ಪ್ರಿಯಾಂಕಾ ಅವರು ರಾಹುಲ್‌ಗಿಂತ ದೊಡ್ಡ ದುರಂತ ವ್ಯಕ್ತಿ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಿಡಿಕಾರಿದ್ದಾರೆ.