ಫಲಿತಾಂಶಕ್ಕೂ ಮುನ್ನ ರಣತಂತ್ರ ಸೃಷ್ಟಿಗೆ ಜೂ.1ಕ್ಕೆ ಇಂಡಿಯಾ ಸಭೆ

| Published : May 28 2024, 01:02 AM IST / Updated: May 28 2024, 05:14 AM IST

ಫಲಿತಾಂಶಕ್ಕೂ ಮುನ್ನ ರಣತಂತ್ರ ಸೃಷ್ಟಿಗೆ ಜೂ.1ಕ್ಕೆ ಇಂಡಿಯಾ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಏಳೂ ಹಂತದ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಸಿದ್ಧತೆಯಾಗಿದ್ದು, ಸಂಭಾವ್ಯ ಫಲಿತಾಂಶ ಆಧರಿಸಿ ತಂತ್ರಗಾರಿಕೆಗೆ ಪ್ಲಾನ್‌ ಮಾಡಲಾಗಿದೆ. ಆದರೆ ಇಂಡಿಯಾ ಕೂಟದ ಸಭೆಗೆ ಮಮತಾರ ಟಿಎಂಸಿ ಗೈರು ಆಗುವ ಸಾಧ್ಯತೆಯಿದೆ.

 ನವದೆಹಲಿ :  ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಏಳನೆ ಹಾಗೂ ಕೊನೆಯ ಹಂತದ ಮತದಾನ ನಿಗದಿಯಾಗಿರುವ ಜೂ.1ರ ಶನಿವಾರ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಮಹತ್ವದ ಸಭೆಯೊಂದನ್ನು ಕರೆದಿದೆ.

ಏಳೂ ಹಂತದ ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟದ ಪಕ್ಷಗಳ ಸಾಧನೆ ಹಾಗೂ ಜೂ.4ರಂದು ಪ್ರಕಟಗೊಳ್ಳಲಿರುವ ಫಲಿತಾಂಶಕ್ಕೂ ಮುನ್ನ ರೂಪಿಸಬೇಕಾದ ರಣತಂತ್ರಗಳ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಆದರೆ ಜೂ.1ರಂದು ರಾಜ್ಯದಲ್ಲಿ ಅಂತಿಮ ಹಂತದ ಮತದಾನದ ಕಾರಣ ನೀಡಿ ಸಭೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೈರಾಗುವ ಸಾಧ್ಯತೆ ಇದೆ. ಇದು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಮತವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

ಜೂ.1ರಂದು ಕೊನೆಯ ಹಂತದ ಮತದಾನ ನಡೆಯುತ್ತಿರುವ ಹೊತ್ತಿನಲ್ಲೇ ಮಧ್ಯಾಹ್ನದ ವೇಳೆಗೆ ಈ ಸಭೆಯನ್ನು ದೆಹಲಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಭೆಯನ್ನು ಆಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರವನ್ನು ಎನ್‌ಡಿಎ ರಚಿಸಲಿದೆ ಎಂದು ಬಿಜೆಪಿ ಅದಮ್ಯ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಮತ್ತೊಂದೆಡೆ, ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಏರದಂತೆ ತಡೆಯುತ್ತೇವೆ ಎಂದು ಇಂಡಿಯಾ ಅಬ್ಬರಿಸುತ್ತಿದೆ. ಹೀಗಾಗಿ ಜೂ.4ರ ಫಲಿತಾಂಶದತ್ತ ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಮಣಿಸುವ ಉದ್ದೇಶದೊಂದಿಗೆ ಬಿಜೆಪಿಯೇತರ 28 ರಾಜಕೀಯ ಪಕ್ಷಗಳು ‘ಇಂಡಿಯಾ’ ಹೆಸರಿನಲ್ಲಿ ಒಗ್ಗೂಡಿದ್ದವು. ಆದರೆ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಾಗೂ ಜಯಂತ್‌ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ ಪಕ್ಷಗಳು ಇಂಡಿಯಾ ತೊರೆದು ಎನ್‌ಡಿಎಗೆ ಸೇರ್ಪಡೆಯಾಗಿದ್ದವು.