ಸಾರಾಂಶ
ಎನ್‌ಡಿಎ ಮೈತ್ರಿಕೂಟವ ಮಹಾರಾಷ್ಟ್ರದ ರಾಜ್ಯಪಾಲ ರಾಧಾಕೃಷ್ಣನ್ ಅವರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ವಿಪಕ್ಷಗಳು ಕೂಡಾ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿವೆ.
ನವದೆಹಲಿ: ಎನ್‌ಡಿಎ ಮೈತ್ರಿಕೂಟವ ಮಹಾರಾಷ್ಟ್ರದ ರಾಜ್ಯಪಾಲ ರಾಧಾಕೃಷ್ಣನ್ ಅವರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ವಿಪಕ್ಷಗಳು ಕೂಡಾ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿವೆ. ನೂತನ ಉಪರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಎನ್‌ಡಿಎ ಅಭ್ಯರ್ಥಿಗಳ ಬೆಂಬಲಿಸುವಂತೆ ಕೇಂದ್ರ ಸರ್ಕಾರ ವಿವಿಧ ವಿಪಕ್ಷಗಳಿಗೆ ಮನವಿ ಮಾಡಿದ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಜಂಟಿ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಮಂಗಳವಾರ ವಿಪಕ್ಷಗಳ ನಾಯಕರು ಸಭೆ ಸೇರಿದ್ದರು. ಈ ವೇಳೆ ಡಿಎಂಕೆ ನಾಯಕ ತಿರುಚಿ ಶಿವ, ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಮತ್ತು ಚಂದ್ರಯಾನ, ಮಂಗಳಯಾನ ಯೋಜನೆಯಲ್ಲಿ ಭಾಗಿಯಾಗಿದ್ದ ಇಸ್ರೋದ ನಿವೃತ್ತ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.