ಸಾರಾಂಶ
ನವದೆಹಲಿ: ಜಗದೀಪ್ ಧನಕರ್ ಹಠಾತ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆ.9ರಂದು ನಡೆಯಲಿರುವ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಎನ್‌ಡಿಎ ಕೂಟದಲ್ಲಿ ಚಟುವಟಿಕೆ ಗರಿಗೆದರಿದೆ. ಭಾನುವಾರ ಬಿಜೆಪಿ, ಮಂಗಳವಾರ ಎನ್‌ಡಿಎ ಕೂಟದ ಸಂಸದೀಯ ಸಭೆಗಳು ನಡೆಯಲಿವೆ. ಇದರಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸೇರಿ ಹಲವರು ರೇಸ್‌ನಲ್ಲಿದ್ದಾರೆ.
ಸೆ.9 ರಂದು ಚುನಾವಣೆ ನಡೆಯಲಿದ್ದು, ಎನ್‌ಡಿಎ ಕೂಟದ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಕೂಟದ ನಾಯಕರು ಮೋದಿ ಮತ್ತು ನಡ್ಡಾ ಹೆಗಲಿಗೆ ನೀಡಿದ್ದಾರೆ. ಅದರ ಭಾಗವಾಗಿ ಬಿಜೆಪಿ ಭಾನುವಾರ ದೆಹಲಿಯಲ್ಲಿ ಸಂಸದೀಯ ಸಭೆ ಸೇರಲಿದ್ದು, ಅಭ್ಯರ್ಥಿ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರಾದ ಜೆ.ಪಿ. ನಡ್ಡಾ, ಅಮಿತ್ ಶಾ , ರಾಜನಾಥ್ ಸಿಂಗ್ ಸೇರಿ ಹಲವರು ಭಾಗಿಯಾಗಲಿದ್ದಾರೆ. ಅ.19ರಂದು ಮೋದಿ ಅಧ್ಯಕ್ಷತೆಯಲ್ಲಿ ಎನ್‌ಡಿಎ ಸಂಸದೀಯ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿ ಹೆಸರನ್ನು ಅಂತಿಮ ಮಾಡಲಿದ್ದಾರೆ,
ರೇಸ್‌ನಲ್ಲಿ ಯಾರ್‍ಯಾರು?:
ಈ ರೇಸ್‌ನಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ರಾಜ್ಯಸಭಾ ಉಪಸಭಾಪತಿ ಹರಿವಂಶ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಸಿಕ್ಕಿಂ ರಾಜ್ಯಪಾಲ ಓಂ ಮಾಥುರ್ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಆರ್‌ಎಸ್‌ಎಸ್ ಸಿದ್ಧಾಂತವಾದಿ ಶೇಷಾದ್ರಿ ಚಾರಿ ಇದ್ದಾರೆ.
ಜಗದೀಪ್ ಧನಕರ್ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಸೆ.9ರಂದು ಚುನಾವಣೆ
ಜಂಟಿ ಅಭ್ಯರ್ಥಿ ಕಣಕ್ಕಿಳಿಸಲು ಎನ್‌ಡಿಎ ನಿರ್ಧಾರ. ಅಭ್ಯರ್ಥಿ ಆಯ್ಕೆ ಹೊಣೆ ನಡ್ಡಾ, ಮೋದಿಗೆ ಹೆಗಲಿಗೆ
ಭಾನುವಾರ ಇಲ್ಲಿ ನಡೆವ ಸಭೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ. ಮಿತ್ರರ ಸಮ್ಮತಿ ಬಳಿಕ ಘೋಷಣೆ
ಹುದ್ದೆ ರೇಸಲ್ಲಿ ಗೆಹಲೋತ್, ವಿ.ಕೆ.ಸಕ್ಸೇನಾ, ಹರಿವಂಶ್, ಆರಿಫ್ ಮೊಹಮ್ಮದ್ ಖಾನ್, ಆಚಾರ್ಯ ದೇವವ್ರತ್