ಸಾರಾಂಶ
ನವದೆಹಲಿ: ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.
ಆ.7ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಆ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಚುನಾವಣೆಯ ದಿನವಾದ ಸೆ.9ರಂದೇ ಫಲಿತಾಂಶವೂ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.
ಮತದಾನ ಎಲ್ಲಿ, ಹೇಗೆ?:
ಅವಿರೋಧ ಆಯ್ಕೆ ಆಗದೇ ಹೋದರೆ ಸೆ.9ರಂದು ಸಂಸತ್ ಭವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
233 ರಾಜ್ಯಸಭೆಯ ಚುನಾಯಿತ ಸದಸ್ಯರು, 12 ನಾಮನಿರ್ದೇಶಿತ ಸದಸ್ಯರು ಹಾಗೂ 543 ಲೋಕಸಭಾ ಸಂಸದರು ಮತದಾನ ಮಾಡಲಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಯು 391 ಮತಗಳನ್ನು ಪಡೆಯುವ ಅಗತ್ಯವಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಲೋಕಸಭೆಯಲ್ಲಿ 293 ಹಾಗೂ ರಾಜ್ಯಸಭೆಯಲ್ಲಿ 129 ಸದಸ್ಯಬಲವಿದೆ. ಹಾಗಾಗಿ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸುವುದು ಬಹುತೇಕ ನಿಚ್ಚಳವಾಗಿದೆ.
ಸಂಭಾವ್ಯ ಅಭ್ಯರ್ಥಿಗಳು : ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಹಾರದ ಸಿಎಂ ನಿತೀಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಮತ್ತು ಭಾರತರತ್ನ ಪುರಸ್ಕೃತ ಕರ್ಪೂರಿ ಠಾಕೂರ್ ಪುತ್ರ ರಾಮನಾಥ್ ಠಾಕೂರ್, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಸಂಸದ ಶಶಿ ತರೂರ್, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಬಿಹಾರ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್, ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಹೆಸರು ಕೇಳಿಬರುತ್ತಿದೆ. ಇತ್ತ, ವಿಪಕ್ಷ ಇಂಡಿಯಾ ಕೂಟವೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.