ಸಾರಾಂಶ
‘ಜಾಗತಿಕ ಆರ್ಥಿಕತೆಯ ಸ್ಥಿರತೆ ಕಾಪಾಡಲು ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವುದು ಅವಶ್ಯಕ. ಇದಕ್ಕಾಗಿ ಪರಸ್ಪರ ಗೌರವ, ಆಸಕ್ತಿ ಮತ್ತು ಸೂಕ್ಷ್ಮತೆಯ ಆಧಾರದಲ್ಲಿ ದೀರ್ಘಕಾಲಿನ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ಭಾರತ ಸಿದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟೋಕಿಯೋ : ‘ಜಾಗತಿಕ ಆರ್ಥಿಕತೆಯ ಸ್ಥಿರತೆ ಕಾಪಾಡಲು ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವುದು ಅವಶ್ಯಕ. ಇದಕ್ಕಾಗಿ ಪರಸ್ಪರ ಗೌರವ, ಆಸಕ್ತಿ ಮತ್ತು ಸೂಕ್ಷ್ಮತೆಯ ಆಧಾರದಲ್ಲಿ ದೀರ್ಘಕಾಲಿನ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ಭಾರತ ಸಿದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿ ಅವರ 2 ದಿನಗಳ ಚೀನಾ ಪ್ರವಾಸ ಭಾನುವಾರದಿಂದ ಆರಂಭವಾಗಲಿದೆ. ಅಲ್ಲದೆ, ಭಾರತ-ಅಮೆರಿಕ ಸಂಬಂಧ ಇತ್ತೀಚೆಗೆ ಹಳಸುತ್ತಿದೆ. ಇದರ ನಡುವೆಯೇ ಈವರೆಗೆ ಭಾರತದ ವೈರಿ ಎನ್ನಿಸಿಕೊಂಡಿದ್ದ ಚೀನಾ ಬಗ್ಗೆ ಮೋದಿ ಸಕಾರಾತ್ಮಕ ಮಾತು ಆಡಿರುವುದು ಗಮನಾರ್ಹವಾಗಿದೆ.
ಶುಕ್ರವಾರ ಜಪಾನಿ ಪತ್ರಿಕೆ ‘ಯೊಮಿಯೂರಿ ಶಿಂಬುನ್’ಗೆ ಸಂದರ್ಶನ ನೀಡಿದ ಮೋದಿ, ‘ಈಗ ವಿಶ್ವದಲ್ಲಿ ಆರ್ಥಿಕ ಅಸ್ಥಿರತೆ ಇದೆ. ಹೊಯ್ದಾಟ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನೆರೆಹೊರೆಯ ಮತ್ತು ಅತಿದೊಡ್ಡ ಆರ್ಥಿಕತೆಗಳಾದ ಭಾರತ ಹಾಗೂ ಚೀನಾದ ನಡುವೆ ಸ್ಥಿರ, ಊಹಿಸಬಹುದಾದ ಮತ್ತು ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧ ಇರಬೇಕು. ಇದು ಸ್ಥಳೀಯ ಮತ್ತು ಜಾಗತಿಕ ಶಾಂತಿಗೆ ಸಹಕಾರಿ. ಇದು ಬಹು ಧ್ರುವೀಯ ಏಷ್ಯಾ ಮತ್ತು ಬಹು ಧ್ರುವೀಯ ಜಗತ್ತಿಗೆ ನಿರ್ಣಾಯಕವಾಗಿದೆ’ ಎಂದರು.
ಅಲ್ಲದೆ, ‘ಜಪಾನ್ ಪ್ರವಾಸದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಹ್ವಾನದ ಮೇರೆಗೆ ಚೀನಾಗೆ ಭೇಟಿ ನೀಡಿ ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಕಳೆದ ವರ್ಷ ನಾನು ಕ್ಸಿ ಅವರನ್ನು ಕಜಾನ್‌ನಲ್ಲಿ ಭೇಟಿ ಮಾಡಿದ್ದೆ. ಆ ಬಳಿಕ ನಮ್ಮ ಸಂಬಂಧಗಳ ನಡುವೆ ಗಣನೀಯ ಸುಧಾರಣೆ ಆಗಿದೆ’ ಎಂದರು.
ಮೋದಿ ನಾಳೆ ಚೀನಾಕ್ಕೆ: ಗಲ್ವಾನ್ ಸಂಘರ್ಷದ ಬಳಿಕ ಮೊದಲ ಭೇಟಿ
ಪ್ರಧಾನಿ ನರೇಂದ್ರ ಮೋದಿ ಭಾನುವಾರದಿಂದ 2 ದಿನ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಗಲ್ವಾನ್ ಸಂಘರ್ಷದ ಬಳಿಕ ಇದೇ ಮೊದಲ ಬಾರಿ ಚೀನಾಗೆ ಹೋಗುತ್ತಿರುವ ಪ್ರಧಾನಿ, ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ 2 ಸುತ್ತಿನ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ. ಇದೇ ವೇಳೆ ಶೃಂಗಕ್ಕೆ ಆಗಮಿಸಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗೂ ಮಾತುಕತೆ ನಡೆಸಲಿದ್ದಾರೆ.
ಭಾರತದಲ್ಲಿ 6 ಲಕ್ಷ ಕೋಟಿ ರು. ಹೂಡಿಕೆ: ಜಪಾನ್ ಘೋಷಣೆ
ಟೋಕಿಯೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಪ್ರವಾಸ ಯಶಸ್ವಿ ಆಗಿದ್ದು. ಮುಂದಿನ 1 ದಶಕದಲ್ಲಿ ಜಪಾನ್ ಭಾರತದಲ್ಲಿ ₹6 ಲಕ್ಷ ಕೋಟಿ (10 ಟ್ರಿಲಿಯನ್ ಯೆನ್) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದಲ್ಲದೆ ಚಂದ್ರಯಾನ-5 ಅನ್ನು ಜಂಟಿಯಾಗಿ ಕೈಗೊಳ್ಳಲು ಎರಡೂ ದೇಶಗಳು ನಿರ್ಧರಿಸಿವೆ. ಭಾರತ-ಜಪಾನ್ ಶೃಂಗದಲ್ಲಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಗೆರು ಇಶಿಬಾ ನಡುವೆ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.