ಸಾರಾಂಶ
ನವದೆಹಲಿ: 31 ಟ್ಯಾಬ್ಲೋಗಳು, ಭಾರತದ ಗುಡ್ಡಗಾಡು ಜನರ ಜಾನಪದ ಶ್ರೀಮಂತಿಕೆ, ಸುಖೋಯ್, ರಫೇಲ್ ಯುದ್ಧ ವಿಮಾನಗಳು, ಸೇನಾ ಹೆಲಿಕಾಪ್ಟರ್‌ಗಳ ಕಸರತ್ತುಗಳು, ನಾರಿ ಶಕ್ತಿ ಭಾರತದ 76ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಕಣ್ಮನಸೆಳೆಯಿತು.
ಸುವರ್ಣ ಭಾರತ-ಪರಂಪರೆ ಮತ್ತು ಪ್ರಗತಿ ಯ ಧ್ಯೇಯವನ್ನಿಟ್ಟುಕೊಂಡು ದೆಹಲಿಯ ಕರ್ತವ್ಯಪಥದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ, ಸೇನಾ ಶಕ್ತಿ, ಆರ್ಥಿಕ ಪ್ರಗತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ದೇಶ-ವಿದೇಶದ ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು.
ಚುಮುಚುಮು ಚಳಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಈ ಬಾರಿಯ ಗಣರೋಜ್ಯೋತ್ಸವದ ವಿಶೇಷ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂಟೋ ಅವರು ಸಾರೋಟಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರು, ಸೇನಾ ಮುಖ್ಯಸ್ಥರು, ವಿದೇಶಿ ರಾಯಭಾರಿಗಳು, ಹಿರಿಯ ಅಧಿಕಾರಿಗಳು ಹಾಗೂ 10 ಸಾವಿರ ಜನಸಾಮಾನ್ಯ ಅತಿಥಿಗಳು ಭಾರತದ ಸಾಂಸ್ಕೃತಿಕ ವೈಭವ ಮತ್ತು ಸೇನಾ ಶಕ್ತಿಯನ್ನು ಕಣ್ತುಂಬಿಕೊಂಡರು.
ಸಾಂಸ್ಕೃತಿಕ ವೈಭವ ಅನಾವರಣ: ಇದೇ ಮೊದಲ ಬಾರಿಗೆ 5 ಸಾವಿರಕ್ಕೂ ಹೆಚ್ಚು ಜಾನಪದ ಮತ್ತು ಗುಡ್ಡಗಾಡು ಕಲಾವಿದರು ದೇಶದ ವಿವಿಧೆಡೆಯ ಸುಮಾರು 45 ನೃತ್ಯರೂಪಕವನ್ನು ಪ್ರದರ್ಶಿಸಿ ಗಮನಸೆಳೆದರು.
ಗುಡ್ಡಗಾಡು ಜನರ ಹೆಮ್ಮೆ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಗೌರವಾರ್ಥವಾಗಿ ದೇಶದ ಗುಡ್ಡಗಾಡು ಜನರ ವರ್ಣಮಯ ಜಾನಪದ ಕಲಾ ಶ್ರೀಮಂತಿಕೆಯನ್ನು ಈ ಬಾರಿ ಪ್ರದರ್ಶಿಸಲಾಯಿತು.
ಮರದ ಗೊಂಬೆ, ಮಹಾಕುಂಭ ಮೇಳ ಹೀಗೆ ವಿವಿಧ 31 ಟ್ಯಾಬ್ಲೋಗಳು ಗಣರೋಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದವು.
ಭಾರತದ ದಾಳಿ, ರಕ್ಷಣಾ ಶಕ್ತಿ ಅನಾವರಣ
ನವದೆಹಲಿ: ಭಾರತದ 76ನೇ ಗಣರಾಜ್ಯೋತ್ಸವದಂದು ದೇಶದ ಸೇನಾ ಶಕ್ತಿಯನ್ನು ವಿಜೃಂಬಣೆಯಿಂದ ಅನಾವರಣಗೊಳಿಸಲಾಯಿತು. ‘ಸಶಕ್ತ ಮತ್ತು ಸುರಕ್ಷಿತ ಭಾರತ’ ಥೀಂನ ಅಡಿಯಲ್ಲಿ ಭೂಸೇನೆ, ವಾಯು ಹಾಗೂ ನೌಕಾಪಡೆಗಳ ಜಂಟಿ ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಸಾಗಿದವು. ಇದು ಅರ್ಜುನ್ ಯುದ್ಧ ಟ್ಯಾಂಕರ್, ತೇಜಸ್ ಯುದ್ಧವಿಮಾನ ಹಾಗೂ ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿತ್ತು. ಈ ವೇಳೆ, ಮೊದಲ ಬಾರಿಗೆ ಸ್ವದೇಶಿ ನಿರ್ಮಿತ, ಕಡಿಮೆ ದೂರ ಕ್ರಮಿಸಬಲ್ಲ ‘ಪ್ರಳಯ್’ ಕ್ಷಿಪಣಿ ವ್ಯವಸ್ಥೆಯನ್ನು ಜಗತ್ತಿನೆದುರು ತೆರೆದಿಡಲಾಯಿತು. ಇದು 500ರಿಂದ 1 ಸಾವಿರ ಕೆ.ಜಿ. ಸಾಮರ್ಥ್ಯದ ಪೇಲೋಡ್ ಹೊಂದಿದ್ದು, 150ರಿಂದ 500 ಕಿ.ಮೀ. ವರೆಗೆ ನಿಖರವಾಗಿ ನುಗ್ಗಿ ದಾಳಿ ಮಾಡಬಲ್ಲದು.
ತ್ರಿ-ಪಡೆಗಳ ಸಾಮರ್ಥ್ಯ ಪ್ರದರ್ಶನ:
ಮೊತ್ತಮೊದಲು ಲೆ. ಅಹಾನ್ ಕುಮಾರ್ ನೇತೃತ್ವದಲ್ಲಿ ವಿಶ್ವದ ಏಕೈಕ ಸಕ್ರಿಯ ಅಶ್ವದಳವಾದ 61 ಅಶ್ವಸೈನ್ಯವು ಪಥಸಂಚಲನವನ್ನು ಮುನ್ನಡೆಸಿತು. ಇದನ್ನು 9 ಯಂತ್ರಗಳನ್ನೊಳಗೊಂಡ ಟಿ-90 ಭೀಷ್ಮ, ನಾಗ್ ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್ ಕ್ಷಿಪಣಿ, ಹಲವು ರಾಕೆಟ್ ಉಡಾವಣೆ ಮಾಡಬಲ್ಲ ಪಿನಾಕಾ, ಅಗ್ನಿಬಾಣ, ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆ, ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆ, ಎಲ್ಲಾ ಭೂರಚನೆಗಳಲ್ಲಿ ಸಾಗಬಲ್ಲ ಚೇತಕ್, ಹಾಗೂ 9 ಪಥಸಂಚಲನ ತುಕಡಿಗಳು ಹಿಂಬಾಲಿಸಿದವು. ಲೆ. ಕಮಾಂಡರ್ ಸಾಹಿಲ್ ಅಹ್ಲುವಾಲಿಯಾ ನೇತೃತ್ವದಲ್ಲಿ ನೌಕಾಪಡೆಯ 144 ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು, ಆತ್ಮನಿರ್ಭರತೆಯನ್ನು ಪ್ರದರ್ಶಿಸುವ ಐಎನ್‌ಎಸ್ ಸೂರತ್, ಫ್ರಿಗೆಟ್ ನಿಲಗಿರಿ, ಜಲಾಂತರ್ಗಾಮಿ ವಾಘಶೀರ್ ಒಳಗೊಂಡ ಸ್ತಬ್ಧಚಿತ್ರವೂ ಇತ್ತು.
ಸ್ಕ್ವಾಡ್ರನ್ ನಾಯಕ ಮಹೇಂದ್ರ ಸಿಂಗ್ ಗರತಿ ಸಾರಥ್ಯದ ತುಕಡಿ ವಾಯುಪಡೆಯ 4 ಅಧಿಕಾರಿಗಳು ಹಾಗೂ 144 ಸಿಬ್ಬಂದಿಯನ್ನು ಒಳಗೊಂಡಿತ್ತು. ಇದರ ಹಿಂದೆ ಮಿಗ್-29 ವಿಮಾನಗಳು ಹದ್ದಿನ ಆಕೃತಿಯಲ್ಲಿ ಹಾರಾಟ ನಡೆಸಿ ಸೆಳೆದವು.ಸೇನೆಯಲ್ಲಿರುವ ಹಲವು ಮಹಿಳಾ ಅಧಿಕಾರಿಗಳು ಸಿಬ್ಬಂದಿ ಪಥಸಂಚಲನದಲ್ಲಿ ಭಾಗವಹಿಸಿ ನಾರಿ ಶಕ್ತಿಯನ್ನು ಪ್ರದರ್ಶಿಸಿದರು. ಕಮಾಂಡಂಟ್ ಐಶ್ವರ್ಯಾ ಜಾಯ್ ನತೃತ್ವದಲ್ಲಿ ಸಿಆರ್‌ಪಿಎಫ್‌ನ 148 ಮಹಿಳಾ ಸಿಬ್ಬಂದಿಗಳೂ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.
ಡಿಆರ್‌ಡಿಒ ವತಿಯಿಂದ ಅನೇಕ ಬೆದರಿಕೆಗಳನ್ನು ಏಕಕಾಲಕ್ಕೆ ಎದುರಿಸುವ ಹಲವು ಪದರಗಳ ‘ರಕ್ಷಾ ಕವಚ’ ಸ್ತಬ್ಧಚಿತ್ರ ಮೆರವಣಿಗೆಯ ಭಾಗವಾಗಿತ್ತು. ಉಪಗ್ರಹ ಆಧಾರಿತ ಕಣ್ಗಾವಲು ವ್ಯವಸ್ಥೆ, ಮಧ್ಯಮ ಸಾಮರ್ಥ್ಯದ ರಡಾರ್ ಆರುದ್ರಾ, ಸುಧಾರಿತ ಲಘು ಟಾರ್ಪೆಡೋ, ವಿದ್ಯುತ್ ಯುದ್ಧ ವ್ಯವಸ್ಥೆಯಾದ ಧಾರಾಶಕ್ತಿ, ಲೇಸರ್ ಆಧಾರಿತ ಆಯುಧ, ಮಾನವರಹಿತ ಹಾಗೂ ಕಡಿಮೆ ದೂರ ಕ್ರಮಿಸಬಲ್ಲ ವ್ಯವಸ್ಥೆಗಳೂ ಇದ್ದವು.ಡೇರ್ ಡೆವಿಲ್ ಶೌರ್ಯ ದರ್ಶನ:
ಡೇರ್ ಡೆವಿಲ್ಸ್ ಎಂದೇ ಖ್ಯಾತರಾಗಿರುವ ಬೈಕ್ ಆರೋಹಿಗಳು ಬುಲೆಟ್ ಸೆಲ್ಯೂಟ್, ಟ್ಯಾಂಕ್ ಟಾಪ್, ಡಬಲ್ ಜಿಮ್ಮಿ, ಡೆವಿಲ್ಸ್ ಡೌನ್, ಲ್ಯಾಡರ್ ಸೆಲ್ಯೂಟ್, ಶತ್ರುಜೀತ್, ಶ್ರದ್ಧಾಂಜಲಿ, ಮರ್ಕ್ಯುರಿ ಪೇಕ್, ಇನ್ಫೋ ವಾರಿಯರ್ಸ್, ಲೋಟಸ್, ಮಾನವ ಪಿರಮಿಡ್ ಸೇರಿದಂತೆ ವಿವಿಧ ರಚನೆಗಳ ಮೂಲಕ ಅಚ್ಚರಿಗೊಳಿಸುವ ಸಾಹಸಗಳನ್ನು ಪ್ರದರ್ಶಿಸಿದರು.ಕೊನೆಯಲ್ಲಿ, ವಾಯುಪಡೆಯ 40 ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ಫ್ಲೈಪಾಸ್ಟ್ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ರಾಷ್ಟ್ರಪತಿ ಭವನಕ್ಕೆ ಆಹ್ವಾನಿತರಿಗೆ ಕರ್ನಾಟಕದ ಗಂಜೀಫಾ ಕಲೆಯ ಮ್ಯಾಗ್ನೆಟ್ ಇರುವ ಆಮಂತ್ರಣ
ನವದೆಹಲಿ: ಭಾರತದ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿಗಳು ತಮ್ಮ ನಿವಾಸಕ್ಕೆ ಆಹ್ವಾನಿಸಿದ ವಿಶೇಷ ಅತಿಥಿಗಳಿಗೆ ಕರ್ನಾಟಕದ ಮೈಸೂರಿನ ಗಂಜಿಫಾ ಕಲೆಯುಳ್ಳ ಅಯಸ್ಕಾಂತ ಸೇರಿದಂತೆ ದಕ್ಷಿಣ ಭಾರತದ ವಿವಿಧ ಕರಕುಶಲ ವಸ್ತುಗಳನ್ನು ಒಳಗೊಂಡ ಬಿದಿರಿನ ಪೆಟ್ಟಿಗೆ ಉಡುಗೊರೆಯಾಗಿ ನೀಡಿದ್ದಾರೆ. ಉಳಿದಂತೆ ಆಂಧ್ರಪ್ರದೇಶದ ಕಲಂಕಾರಿ ವರ್ಣಚಿತ್ರವುಳ್ಳ ಬಿದಿರಿನ ಪೆಟ್ಟಿಗೆ ಹಾಗೂ ಎಟೀಕೊಪ್ಪಾಕ ಗೊಂಬೆ, ತೆಲಂಗಾಣದ ಇಕತ್ ಪೂಚಂಪಲ್ಲಿ ಕವರ್, ತಮಿಳುನಾಡಿನ ಕಾಂಜೀವರಂ ರೇಶ್ಮೆಯ ಕೈಚೀಲ, ಕೇರಳದ ತಾಳೆ ಎಲೆಯ ಬುಕ್‌ಮಾರ್ಕ್‌ಗಳನ್ನೂ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ.
ರೋಬೋ ಶ್ವಾನಗಳಿಂದ ಗಣರಾಜ್ಯೋತ್ಸವ ಪರೇಡ್
ಕೋಲ್ಕತಾ: 76ನೇ ಗಣರಾಜ್ಯೋತ್ಸವದ ಅಂಗವಾಗಿ ಕೋಲ್ಕತಾದಲ್ಲಿ ಭಾನುವಾರ ಭಾರತೀಯ ಸೇನೆ ಯೋಧರು ‘ಮ್ಯೂಲ್’ ಕೃತಕ ಬುದ್ಧಿಮತ್ತೆ ಆಧರಿತ ರೋಬೋ ನಾಯಿಗಳ ಜೊತೆ ಪಥಸಂಚಲನ ನಡೆಸಿದರು. ಯೋಧರಂತೆ ಹೆಜ್ಜೆ ಇಡುತ್ತಾ, ಕಾಲನ್ನು ಹಿಂದೆ ಮುಂದೆ ಮಾಡುತ್ತಾ ಸಾಗಿದ ರೋಬೋ ಶ್ವಾನಗಳ ವಿಡಿಯೋ ವೈರಲ್ ಆಗಿದೆ.
ಮ್ಯೂಲ್ ವೈಶಿಷ್ಟ್ಯತೆ:
ಮ್ಯೂಲ್ (ಮಲ್ಟಿ ಯೂಟಿಲಿಟಿ ಲೆಗ್ಡ್ ಇಕ್ವಿಪ್ಮೆಂಟ್) ನಾಯಿಗಳು ಎಲ್ಲಾ ಹವಾಗುಣಗಳಲ್ಲಿಯೂ ಮೈನಸ್ 40 ಡಿಗ್ರಿಯಿಂದ 55 ಡಿಗ್ರಿ ಉಷ್ಣಾಂಶದ ವರೆಗೆ ಸುಲಲಿತವಾಗಿ ಕೆಲಸ ಮಾಡುತ್ತದೆ. ಇದಲ್ಲದೇ ಮೆಟ್ಟಿಲು, ಕಡಿದಾದ ಪ್ರದೇಶ, ಇಳಿಜಾರು ಮತ್ತು ಅಡೆತಡೆಗಳ ನಡುವೆ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಒಂದೊಂದು ನಾಯಿಯು 15 ಕೇಜಿ ಭಾರ ಹೊತ್ತು ಸುಲಭವಾಗಿ ಕೆಲಸ ಮಾಡಲಿವೆ. ಇವುಗಳು ಕೆಮಿಕಲ್ ದುರಂತ, ಗಡಿ ಭದ್ರತೆ, ಯುದ್ಧಭೂಮಿ, ಆಸ್ತಿ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಭಾರತದಲ್ಲಿ 100 ಮ್ಯೂಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ‘ಸಂಜಯ್’ ಎಂದು ಹೆಸರಿಡಲಾಗಿದೆ.