ಸಾರಾಂಶ
ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶೃಂಗಕ್ಕೆ ಬಂದಿರುವ ವಿಶ್ವನಾಯಕರ ಜತೆ ಫಲಪ್ರದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ರಿಯೋ ಡಿ ಜನೈರೋ: ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶೃಂಗಕ್ಕೆ ಬಂದಿರುವ ವಿಶ್ವನಾಯಕರ ಜತೆ ಫಲಪ್ರದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜತೆ ಇಟಲಿ-ಭಾರತ ಸಂಬಂಧದ ಮುಂದಿನ 5 ವರ್ಷಗಳ ಕ್ರಿಯಾ ಯೋಜನೆಯನ್ನು ಮೋದಿ ಅಂತಿಮಗೊಳಿಸಿದ್ದಾರೆ. ಈ ಪ್ರಕಾರ ರಕ್ಷಣೆ, ವ್ಯಾಪಾರ, ಸ್ವಚ್ಛ ಇಂಧನ ಸೇರಿ ಹಲವು ವಲಯಗಳಲ್ಲಿ ಉಭಯ ದೇಶಗಳು ಸಹಕರಿಸಲಿವೆ.ಇನ್ನು ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಭೇಟಿ ಮಾಡಿದ ಮೋದಿ, ಭಾರತ-ಬ್ರಿಟನ್ ನಡುವೆ ಸ್ಥಗಿತಗೊಂಡಿದ್ದ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಮರುಚಾಲನೆ ನೀಡಲು ಸಮ್ಮತಿಸಿದ್ದಾರೆ.
ಬ್ರೆಜಿಲ್, ಇಂಡೋನೇಷ್ಯಾ, ಈಜಿಪ್ಟ್, ನಾರ್ವೆ, ಪೋರ್ಚುಗಲ್ ಹಾಗೂ ದ.ಕೊರಿಯಾ ನಾಯಕರು, ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಜತೆಗೂ ಮೋದಿ ಜಿ20 ಪಾರ್ಶ್ವದಲ್ಲಿ ಮಾತುಕತೆ ನಡೆಸಿದರು.==
ಜಿ20 ಗ್ರೂಪ್ ಫೋಟೋದಲ್ಲಿ ಬೈಡೆನ್, ಟ್ರುಡೋ, ಮೆಲೋನಿ ಮಿಸ್!ರಿಯೋ ಡಿ ಜನೈರೋ: ಜಿ20 ಶೃಂಗದಲ್ಲಿ ಪಾಲ್ಗೊಂಡಿರುವ ವಿಶ್ವ ನಾಯಕರ ಗ್ರೂಪ್ ಫೋಟೋ ಸೆಷನ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿ ಮೂಡಿಸಿದೆ.ಫೋಟೋ ಸೆಷನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿ ಅನೇಕರು ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಪಾಲ್ಗೊಂಡಿದ್ದರು. ಆದರೆ ಬೈಡೆನ್, ಟ್ರುಡೋ, ಮೆಲೋನಿ ನಾಪತ್ತೆಯಾಗಿದ್ದರು.
ನಿಗದಿತ ಸಮಯಕ್ಕಿಂತ ಮೊದಲೇ ಸೆಷನ್ ನಡೆಯಿತು. ಹೀಗಾಗಿ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಿದ್ದ ಬೈಡೆನ್ ಹಾಗೂ ಟ್ರುಡೋ ಸೆಷನ್‌ನಿಂದ ವಂಚಿತರಾದರು ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು ಕಿಡಿಕಾರಿದ್ದಾರೆ.