2047ರ ವೇಳೆಗೆ ವಿಕಸಿತ ಭಾರತವಾಗಿಸುವ ಪ್ರಧಾನಿ ಮೋದಿ ಕನಸು ನನಸಾಗಲು ಶ್ರಮ ಅಗತ್ಯ: ನೀತಿ ಆಯೋಗ

| Published : Jul 29 2024, 12:53 AM IST / Updated: Jul 29 2024, 04:32 AM IST

ಸಾರಾಂಶ

2047ರ ವೇಳೆಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ದೇಶ ಭಾರೀ ಶ್ರಮ ಪಡಬೇಕಾದ ಅಗತ್ಯವಿದೆ ಎಂದು ನೀತಿ ಆಯೋಗ ಹೇಳಿದೆ.

ನವದೆಹಲಿ: 2047ರ ವೇಳೆಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ದೇಶ ಭಾರೀ ಶ್ರಮ ಪಡಬೇಕಾದ ಅಗತ್ಯವಿದೆ ಎಂದು ನೀತಿ ಆಯೋಗ ಹೇಳಿದೆ.ನೀತಿ ಆಯೋಗ ಬಿಡುಗಡೆ ಮಾಡಿರುವ‘ವಿಷನ್‌ ಫಾರ್‌ ವಿಕಸಿತ್‌ ಭಾರತ್‌ @ 2047: ಆ್ಯನ್‌ ಅಪ್ರೋಚ್‌ ಪೇಪರ್‌’ನ ಅನ್ವಯ 2047ರ ವೇಳೆಗೆ ಭಾರತವು 30 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲು ಮತ್ತು ಭಾರತೀಯರ ತಲಾದಾಯ 15 ಲಕ್ಷ ರು.ಗೆ ತಲುಪಲು ಭಾರತವು ಮಧ್ಯಮ ವರ್ಗದ ಬಲೆಯನ್ನು ಅತ್ಯಂತ ಜಾಗರೂಕವಾಗಿ ತಪ್ಪಿಸಬೇಕಿದೆ.

 ಈ ಗುರಿ ಮಟ್ಟಲು ಹಾಲಿ ಇರುವ ಜಿಡಿಪಿಯಾದ 3.36 ಲಕ್ಷ ಕೋಟಿ ಡಾಲರ್‌ನ 9 ಪಟ್ಟು ಬೆಳೆಯಬೇಕು ಮತ್ತು ಹಾಲಿ ತಲಾದಾಯವಾದ 1.98 ಲಕ್ಷ ರು.ಗಿಂತ 8 ಪಟ್ಟು ಹೆಚ್ಚಳವಾಗಬೇಕು.’ ಎಂದು ಹೇಳಿದೆ.ಜೊತೆಗೆ ಮಧ್ಯಮ ವರ್ಗದ ಬಲೆಯಿಂದ ತಪ್ಪಿಸಿಕೊಳ್ಳಲು ದೇಶ 20-30 ವರ್ಷಗಳ ಕಾಲ ಸತತವಾಗಿ ವಾರ್ಷಿಕ ಶೇ.7- ಶೇ.10ರಷ್ಟು ಬೆಳವಣಿಗೆ ಕಾಣಬೇಕು.

 ಜಗತ್ತಿನಲ್ಲಿ ಕೆಲವೇ ದೇಶಗಳು ಮಾತ್ರವೇ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿವೆ ಎಂದು ವರದಿ ಹೇಳಿದೆ.ಇದೇ ವೇಳೆ ವಿಕಸಿತ ಭಾರತವೆಂದರೆ, ಅಭಿವೃದ್ಧಿ ಹೊಂದಿದ ದೇಶವೊಂದರ ಎಲ್ಲಾ ಗುಣಲಕ್ಷಣಗಳನ್ನೂ ಭಾರತ ಹೊಂದಿರಬೇಕು ಮತ್ತು ಹಾಲಿ ವಿಶ್ವದಲ್ಲಿ ಶ್ರೀಮಂತ ದೇಶಗಳು ಹೊಂದಿರುವ ತಲಾದಾಯ ಮಟ್ಟವನ್ನು ಮುಟ್ಟಬೇಕು. ಅದುವೇ ವಿಕಸಿತ ಭಾರತ ಎಂದು ವರದಿ ಹೇಳಿದೆ. ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ತಾಂತ್ರಿಕವಾಗಿ, ಸಾಂಸ್ಥಿಕವಾಗಿಯೂ ಅಭಿವೃದ್ಧಿಯಾಗಬೇಕು ಎಂದು ಹೇಳಿದೆ.