ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ನಾವು ಶಾಂತಿಯ ಪರವಾಗಿದ್ದೇವೆ. ಎಲ್ಲಾ ಶಾಂತಿ ಪ್ರಯತ್ನಗಳನ್ನು ನಾವು ಬೆಂಬಲಿಸುವುದು ಮಾತ್ರವಲ್ಲ, ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶುಕ್ರವಾರ ತಿಳಿಸಿದ್ದಾರೆ.

-ರಷ್ಯಾ-ಉಕ್ರೇನ್ ಯುದ್ಧದ ವಿಚಾರವಾಗಿ ನಿಲುವು ಸ್ಪಷ್ಟ-ಶಾಂತಿ ಪ್ರಯತ್ನಗಳಲ್ಲಿ ಹೆಗಲಿಗೆ ಹೆಗಲು ಕೊಡುತ್ತೇವೆ-ಜಗತ್ತು ಬೇಗ ಶಾಂತಿಯತ್ತ ತಿರುಗುತ್ತದೆ: ಪ್ರಧಾನಿ ವಿಶ್ವಾಸ-ಶಾಂತಿಸ್ಥಾಪನೆಗೆ ರಷ್ಯಾದಿಂದ ಪ್ರಯತ್ನ: ಪುಟಿನ್‌ ನುಡಿಪಿಟಿಐ ನವದೆಹಲಿ

ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ನಾವು ಶಾಂತಿಯ ಪರವಾಗಿದ್ದೇವೆ. ಎಲ್ಲಾ ಶಾಂತಿ ಪ್ರಯತ್ನಗಳನ್ನು ನಾವು ಬೆಂಬಲಿಸುವುದು ಮಾತ್ರವಲ್ಲ, ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶುಕ್ರವಾರ ತಿಳಿಸಿದ್ದಾರೆ. ಉಭಯ ನಾಯಕರ ಚರ್ಚೆ ವೇಳೆ ಯುದ್ಧವಿಚಾರವಾಗಿ ಭಾರತದ ನಿಲುವನ್ನು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅಮೆರಿಕ ಸೇರಿದಂತೆ ಹಲವು ದೇಶಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ‘ಉಕ್ರೇನ್ ಸಂಘರ್ಷ ಆರಂಭವಾದಂದಿನಿಂದಲೂ ನಾವು ಚರ್ಚೆ ನಡೆಸುತ್ತಿದ್ದೇವೆ. ಆಪ್ತ ಸ್ನೇಹಿತನಾಗಿ, ನೀವು ನಿರಂತರವಾಗಿ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿಸುತ್ತಿದ್ದೀರಿ. ಭಾರತ ತಟಸ್ಥವಲ್ಲ ಎಂದು ನಾನು ಎಂದಿನಿಂದಲೂ ಹೇಳುತ್ತ ಬಂದಿದ್ದೇನೆ. ಭಾರತ ಒಂದು ವಿಚಾರದ ಪರ ಇದೆ. ಅದು ಶಾಂತಿ. ನಾವು ಎಲ್ಲಾ ಶಾಂತಿ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ ಮತ್ತು ಅವುಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ನಾವೆಲ್ಲರೂ ಶಾಂತಿಯ ಹಾದಿಯನ್ನು ಕಂಡುಕೊಳ್ಳಬೇಕು. ಜಗತ್ತು ಶಾಂತಿಯತ್ತ ತಿರುಗುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್, ‘ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಷ್ಯಾ ಪ್ರಯತ್ನ ನಡೆಸುತ್ತಿದೆ’ ಎಂದರು.

==

ಪುಟಿನ್‌ಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ, ಗಾಂಧಿ ಸಮಾಧಿಗೆ ಭೇಟಿ

ಪಿಟಿಐ ನವದೆಹಲಿ2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ರಷ್ಯಾ ಅಧ್ಯಕ್ಷ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ದೊರಕಿತು ಮತ್ತು ಮೂರೂ ಸೇನಾಪಡೆಗಳ ಗೌರವ ರಕ್ಷೆಯನ್ನು ನೀಡಲಾಯಿತು.

ಪ್ರಧಾನ ಮಂತ್ರಿಯವರು ರಷ್ಯಾ ನಾಯಕನಿಗೆ ಖಾಸಗಿ ಭೋಜನ ಕೂಟ ಆಯೋಜಿಸಿದ ಒಂದು ದಿನದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮೋದಿ ಅವರು ಭವ್ಯ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಷ್ಯಾ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಗಾಂಧಿ ಸಮಾಧಿಗೂ ಭೇಟಿ:ಔಪಚಾರಿಕ ಸ್ವಾಗತದ ನಂತರ, ಪುಟಿನ್ ರಾಜ್ ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿಯವರ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು.

==

ಪುಟಿನ್‌ ಔತಣಕ್ಕೆ ರಾಗಾ, ಖರ್ಗೆಗಿಲ್ಲ, ತರೂರ್‌ಗಷ್ಟೇ ಆಹ್ವಾನ!

ನವದೆಹಲಿ: ಭಾರತದ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನೇತೃತ್ವದ ನಿಯೋಗಕ್ಕೆ ರಾಷ್ಟ್ರಪತಿಗಳ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸರ್ಕಾರದ ಆಹ್ವಾನ ಹೋಗಿಲ್ಲ.ಇದರ ಬದಲಾಗಿ ಮೋದಿ ಬಗ್ಗೆ ಮೃದು ಧೋರಣೆ ಹೊಂದಿರುವ ಕಾಂಗ್ರೆಸ್‌ ಸಂಸದ ಶಶಿತರೂರ್‌ ಅವರನ್ನು ಆಮಂತ್ರಿಸಲಾಗಿದೆ ಎನ್ನಲಾಗಿದೆ. ಸರ್ಕಾರದ ಈ ಕ್ರಮ ಇದೀಗ ಕಾಂಗ್ರೆಸ್‌ನ ಕೆಂಗಣ್ಣಿಗೆ ಕಾರಣವಾಗಿದೆ.

ಪುಟಿನ್‌ ನಿಯೋಗ ಭೇಟಿಯಾಗಲು ಪ್ರತಿಪಕ್ಷ ನಾಯಕರಿಗೆ ಅವಕಾಶ ನಿರಾಕರಿಸುವ ಮೂಲಕ ಸರ್ಕಾರ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ಮುರಿದಿದೆ ಎಂದು ರಾಹುಲ್‌ ಗಾಂಧಿ ಗುರುವಾರವಷ್ಟೇ ಆರೋಪಿಸಿದ್ದರು.