ದೇಶದಲ್ಲಿ ಇನ್ನು ಮುಂದೆ ಉತ್ಪಾದನೆ ಹಾಗೂ ಮಾರಾಟ ಆಗುವ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ ಸೈಬರ್‌ ಸೆಕ್ಯುರಿಟಿ ಆ್ಯಪ್ ‘ಸಂಚಾರ್‌ ಸಾಥಿ’ ಅನ್ನು ಅಳವಡಿಸುವಂತೆ ಎಲ್ಲ ಸ್ಮಾರ್ಟ್‌ಫೋನ್‌ ಉತ್ಪಾದಕರಿಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ಖಾಸಗಿ ಸೂಚನೆ ನೀಡಿದೆ.

 ನವದೆಹಲಿ : ದೇಶದಲ್ಲಿ ಇನ್ನು ಮುಂದೆ ಉತ್ಪಾದನೆ ಹಾಗೂ ಮಾರಾಟ ಆಗುವ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ ಸೈಬರ್‌ ಸೆಕ್ಯುರಿಟಿ ಆ್ಯಪ್ ‘ಸಂಚಾರ್‌ ಸಾಥಿ’ ಅನ್ನು ಅಳವಡಿಸುವಂತೆ ಎಲ್ಲ ಸ್ಮಾರ್ಟ್‌ಫೋನ್‌ ಉತ್ಪಾದಕರಿಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ಖಾಸಗಿ ಸೂಚನೆ ನೀಡಿದೆ.

ಡಿಲೀಟ್‌ ಮಾಡಲಾಗದ ರೀತಿ ಕಡ್ಡಾಯವಾಗಿ ಇದನ್ನು ಪ್ರಿ-ಇನ್‌ಸ್ಟಾಲ್‌ ಮಾಡಬೇಕು ಎಂದಿರುವ ಕೇಂದ್ರ, ಆ್ಯಪ್‌ ಇನ್‌ಸ್ಟಾಲ್‌ಗೆ 90 ದಿನಗಳ ಕಾಲಾವಧಿ ನೀಡಿ ನ.28ರಂದು ಎಲ್ಲ ಸ್ಮಾರ್ಟ್‌ಫೋನ್‌ ಉತ್ಪಾದಕರಿಗೆ ಸೂಚನೆ ನೀಡಿದೆ. ಈಗಾಗಲೇ ಮಾರುಕಟ್ಟೆಗೆ ಪೂರೈಕೆಯಾಗಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್‌ ಅಪ್ಡೇಟ್‌ ಮೂಲಕ ಈ ಆ್ಯಪ್‌ ಇನ್‌ಸ್ಟಾಲ್‌ ಮಾಡುವಂತೆ ತಿಳಿಸಲಾಗಿದೆ.

ಸಂಚಾರ ಸಾಥಿ ಕಡ್ಡಾಯ ಏಕೆ?:

ಸಂಚಾರ್ ಸಾಥಿ ಆ್ಯಪ್‌ ಸೈಬರ್‌ ಭದ್ರತೆಗೆ ಅವಶ್ಯಕ. ಇದರಿಂದ ಅನುಮಾನಾಸ್ಪದ ಕರೆಗಳನ್ನು ವರದಿ ಮಾಡಲು, ಐಎಂಇಐ ನಂಬರ್‌ ಪರಿಶೀಲಿಸಲು ಮತ್ತು ಕದ್ದ ಮೊಬೈಲ್ ಫೋನ್‌ ಅನ್ನು ಪೊಲೀಸರು ಪತ್ತೆ ಮಾಡಲು ಹಾಗೂ ಬಳಕೆಯನ್ನು ನಿರ್ಬಂಧಿಸಲು ಸಾಧ್ಯವಾಗುತ್ತದೆ. ವಂಚನೆ ಕರೆಗಳನ್ನೂ ತಡೆಯಲು ಇದರಿಂದ ಅನುಕೂಲ ಆಗಲಿದೆ.

ಭಾರತವು ವಿಶ್ವದ ಅತಿದೊಡ್ಡ ಫೋನ್‌ ಮಾರುಕಟ್ಟೆಗಳಲ್ಲೊಂದಾಗಿದೆ. ಸುಮಾರು 120 ಕೋಟಿ ಮೊಬೈಲ್‌ ಬಳಕೆದಾರರು ದೇಶದಲ್ಲಿದ್ದಾರೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಜನವರಿಯಲ್ಲಿ ಬಿಡುಗಡೆ ಮಾಡಿದ ಈ ಆ್ಯಪ್‌ನಿಂದಾಗಿ ಅಕ್ಟೋಬರ್‌ವೊಂದರಲ್ಲೇ 50 ಸಾವಿರ ಸೇರಿ ಒಟ್ಟು 7 ಲಕ್ಷ ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ.

ಆ್ಯಪಲ್‌ನಿಂದ ವಿರೋಧ?:

ಆದರೆ ಇದಕ್ಕೆ ಆ್ಯಪಲ್‌ ಮತ್ತು ಖಾಸಗಿತನದ ಹಕ್ಕಿನ ಪ್ರತಿಪಾದಕರ ವಿರೋಧ ವ್ಯಕ್ತವಾಗುವ ಸಂಭವವಿದೆ.

ಏಕೆಂದರೆ ಆ್ಯಪಲ್‌ ಕಂಪನಿ ತನ್ನದೇ ಆದ ಆ್ಯಪ್‌ಗಳನ್ನಷ್ಟೇ ಮಾರಾಟಕ್ಕೆ ಮೊದಲು ಐಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡುತ್ತದೆ. ಸರ್ಕಾರಿ ಅಥವಾ ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಲ್ಲ ಎಂಬುದು ಆ ಕಂಪನಿಯ ನೀತಿ. ಹೀಗಾಗಿ ಸರ್ಕಾರದ ನಿರ್ದೇಶನವನ್ನು ಅದು ವಿರೋಧಿಸುವ ಸಂಭವವಿದೆ.