ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ನಿರಂತರ ಗದ್ದಲ ಎಬ್ಬಿಸಿದ ಕಾರಣ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಬಹುತೇಕ ಭಂಗವಾಗಿದೆ. ಹೀಗಾಗಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ನವದೆಹಲಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ನಿರಂತರ ಗದ್ದಲ ಎಬ್ಬಿಸಿದ ಕಾರಣ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಬಹುತೇಕ ಭಂಗವಾಗಿದೆ. ಹೀಗಾಗಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಗದ್ದಲದ ನಡುವೆಯೇ, ಮಣಿಪುರದಲ್ಲಿ ಜಿಎಸ್‌ಟಿ ಕಾನೂನಿಗೆ ತಿದ್ದುಪಡಿಗಳನ್ನು ಜಾರಿಗೆ ತರುವ ಮಸೂದೆಯನ್ನು ಸಂಕ್ಷಿಪ್ತ ಚರ್ಚೆಯ ನಂತರ ಅಂಗೀಕರಿಸಲಾಯಿತು.
ಬೆಳಗ್ಗೆ 11ಕ್ಕೆ ಸದನ ಆರಂಭವಾದ ನಂತರ 12ಕ್ಕೆ ಹಾಗೂ ನಂತರ ಮಧ್ಯಾಹ್ನಕ್ಕೆ ಮುಂದೂಡಲಾಯಿತು. 2.30ಕ್ಕೆ ಕಲಾಪ ಮತ್ತೆ ಸೇರಿದಾಗಲೂ ಗದ್ದಲ ನಿಲ್ಲದ ಕಾರಣ ಮಂಗಳವಾರಕ್ಕೆ ಕಲಾಪ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಗದ್ದಲ:
ರಾಜ್ಯಸಭೆಯಲ್ಲಿ ಲೋಕಸಭೆಯಷ್ಟು ಅಡ್ಡಿ ಆಗದಿದ್ದರೂ ಎಸ್ಐಆರ್ ವಿಷಯ ಆಗಾಗ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ಕಿಡಿಕಾರಿದ ಸಂಸದೀಯ ಸಚಿವ ಕಿರಣ್ ರಿಜಿಜು, ‘ಸರ್ಕಾರ ಚರ್ಚೆಗೆ ಸಿದ್ಧವಿದೆ. ಆದರೆ ಕೂಡಲೇ ಆಗಬೇಕು ಎಂಬ ಷರತ್ತು ಸರಿಯಲ್ಲ. ಸಮಯಾವಕಾಶ ನೀಡಬೇಕು’ ಎಂದರು.
ಹತಾಶೆ ಹೊರಹಾಕಲು ವಿಪಕ್ಷಗಳಿಂದ ಸಂಸತ್ ಬಳಕೆ: ಮೋದಿ
ನವದೆಹಲಿ : ‘ವಿರೋಧ ಪಕ್ಷಗಳು ಸಂಸತ್ತನ್ನು ಸೋಲಿನ ಹತಾಶೆಯನ್ನು ಹೊರಹಾಕುವ ವೇದಿಕೆ ಮಾಡಿಕೊಂಡಿವೆ. ಅದರ ತಾಲೀಮನ್ನು ಅವು ಸದನದಲ್ಲಿ ಪ್ರದರ್ಶಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನವು ರಾಜಕೀಯ ನಾಟಕಗಳಿಗೆ ವೇದಿಕೆಯಾಗಬಾರದು, ಬದಲಾಗಿ ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಗೆ ವೇದಿಕೆಯಾಗಬೇಕು. ಅವರು ಹತಾಶೆಯಿಂದ ಹೊರಬಂದು ತಮ್ಮ ತಂತ್ರವನ್ನು ಬದಲಾಯಿಸಬೇಕು. ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡಲು ಸಿದ್ಧ’ ಎಂದರು.
ಬಿಹಾರ ಚುನಾವಣೆಯಲ್ಲಿ ವಿಪಕ್ಷಗಳ ಸೋಲನ್ನು ಉಲ್ಲೇಖಿಸಿದ ಅವರು, ‘ಚುನಾವಣಾ ಸೋಲಿನಿಂದ ವಿರೋಧ ಪಕ್ಷಗಳು ಕಂಗಾಲಾಗಿವೆ ಮತ್ತು ವೈಫಲ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಕುಟುಕಿದರು.
ಮೊದಲ ಬಾರಿ ಸಭಾಪತಿ ಪೀಠ ಅಲಂಕರಿಸಿದ ರಾಧಾಕೃಷ್ಣನ್
ನವದೆಹಲಿ : ರಾಜ್ಯಸಭೆ ಸಭಾಪತಿಗಳೂ ಆದ ನೂತನ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಇತ್ತೀಚಿನ ತಮ್ಮ ಆಯ್ಕೆ ಬಳಿಕ ಮೊದಲ ಬಾರಿ ಸಭಾಪತಿ ಪೀಠವನ್ನು ಸೋಮವಾರ ಅಲಂಕರಿಸಿದರು.
ಅವರನ್ನು ಸ್ವಾಗತಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಸಾಮಾನ್ಯ ಹಿನ್ನೆಲೆಯಿಂದ ಉಪರಾಷ್ಟ್ರಪತಿ ಹುದ್ದೆಗೆ ಏರಿದ ಸಿಪಿ ರಾಧಾಕೃಷ್ಣನ್ ಅವರ ಸಾಧನೆಯು ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದರು,ಇದೇ ವೇಳೆ, ವಿಪಕ್ಷ ನಾಯಕ ಖರ್ಗೆ ಕೂಡ ಸ್ವಾಗತಿಸಿ, ‘ರಾಧಾಕೃಷ್ಣನ್ ನಿಷ್ಪಕ್ಷವಾಗಿ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದರು.
ಇದಕ್ಕೆ ಉತ್ತರಿಸಿದ ರಾಧಾಕೃಷ್ಣನ್, ‘ಲಕ್ಷ್ಮಣರೇಖೆ ದಾಟದಂತೆ ಸದಸ್ಯರು ಸದನದಲ್ಲಿ ವರ್ತಿಸಬೇಕು’ ಎಂದು ಕೋರಿದರು.
ವಂದೇ ಮಾತರಂಗೆ 150 ವರ್ಷ: ಇದೇ ವಾರ ಸಂಸತ್ತಲ್ಲಿ ಚರ್ಚೆ
ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸದ್ಯ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಇದೇ ವಾರ ಚರ್ಚೆ ನಡೆಯಲಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಲಿದ್ದಾರೆ.ಅಧಿವೇಶನಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಅಥವಾ ಶುಕ್ರವಾರ ಸುಮಾರು 10 ಗಂಟೆಗಳ ಕಾಲ ಸಮಯ ನಿಗದಿಪಡಿಸಿದ್ದಾರೆ.
