ಸಾರಾಂಶ
ನವದೆಹಲಿ: ಭಾರೀ ವೇಗದ ಆರ್ಥಿಕಾಭಿವೃದ್ಧಿಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ಇದೀಗ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಪೈಕಿ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿರುವ ಭಾರತವು ಅಮೆರಿಕ ಮತ್ತು ಚೀನಾದ ನಂತರದ ಸ್ಥಾನಕ್ಕೆ ಏರಿದೆ.
ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್ ‘2024ನೇ ಆವೃತ್ತಿಯ ಏಷ್ಯಾ ಪವರ್ ಇಂಡೆಕ್ಸ್ (ಎಪಿಐ)’ ಹೆಸರಿನ ಈ ವರದಿ ಸಿದ್ಧಪಡಿಸಿದ್ದು, ಇದನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಏಷ್ಯಾ ಪೆಸಿಫಿಕ್ ರಾಷ್ಟ್ರಗಳು ಅಂದರೆ ಪಶ್ಚಿಮ ಪೆಸಿಫಿಕ್ ಮಹಾಸಾಗರಕ್ಕೆ ಅಂಟಿಕೊಂಡಿರುವ ದೇಶಗಳು. ಈ ದೇಶಗಳ ಪೈಕಿ ಮೂರನೇ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
8 ಮಾನದಂಡ ಆಧರಿಸಿ ವರದಿ:
ಮಿಲಿಟರಿ ಶಕ್ತಿ, ರಕ್ಷಣಾ ಜಾಲ, ಆರ್ಥಿಕ ಸಾಮರ್ಥ್ಯ, ಜಾಗತಿಕ ಸಂಬಂಧಗಳು, ರಾಜತಾಂತ್ರಿಕ ಶಕ್ತಿ, ಸಾಂಸ್ಕೃತಿಕ ಪ್ರಭಾವ, ಅಪಾಯಗಳನ್ನು ಎದುರಿಸುವ ಶಕ್ತಿ, ಭವಿಷ್ಯದ ಸಂಪನ್ಮೂಲಗಳು - ಈ ಎಂಟು ಮಾನದಂಡಗಳನ್ನು ಇರಿಸಿಕೊಂಡು ಏಷ್ಯಾ ಪವರ್ ಇಂಡೆಕ್ಸ್ ತಯಾರಿಸಲಾಗುತ್ತದೆ.
ವರದಿಯಲ್ಲಿರುವ ಅಂಶಗಳು:
‘ಭಾರತ ಇನ್ನೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಹೊಂದಿಲ್ಲವಾದರೂ, ಇದು ಈಗ ಜಪಾನ್ ದೇಶವನ್ನು ಹಿಂದಿಕ್ಕಿ ಏಷ್ಯಾ ಪೆಸಿಫಿಕ್‌ನಲ್ಲಿ ಮೂರನೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಅಭಿವೃದ್ಧಿಯ ಬಗ್ಗೆ ಇನ್ನೂ ಸಾಕಷ್ಟು ನಿರೀಕ್ಷೆಗಳಿವೆ. ಅದೇ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಾಕಷ್ಟು ಇತಿಮಿತಿಗೂ ಇವೆ. ಭವಿಷ್ಯದಲ್ಲಿ ದೇಶವು ಇನ್ನಷ್ಟು ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
‘ಭಾರತದ ಅತಿದೊಡ್ಡ ಶಕ್ತಿಯೆಂದರೆ ಅದರ ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಮತ್ತು ಆರ್ಥಿಕತೆ. ಏಷ್ಯಾದ ಅನೇಕ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ನಂತರ ಭಾರತ ಆರ್ಥಿಕವಾಗಿ ದೊಡ್ಡ ಪ್ರಗತಿ ಸಾಧಿಸಿದೆ. ಹಾಗೆಯೇ ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ಆದರೆ, ಆರ್ಥಿಕ ಸಂಬಂಧಗಳ ವಿಷಯದಲ್ಲಿ ಭಾರತ ಇನ್ನೂ ಹಿಂದುಳಿದಿದೆ. ರಕ್ಷಣಾ ಸಂಪರ್ಕ ಜಾಲದಲ್ಲಿ ದೇಶ 9ನೇ ಸ್ಥಾನಕ್ಕೆ ಕುಸಿದಿದೆ’ ಎಂದೂ ವರದಿ ಹೇಳಿದೆ.