ಸಾರಾಂಶ
ವಾರ್ಸಾ: ಭಾರತ ಶಾಂತಿಯನ್ನು ಪ್ರತಿಪಾದಿಸುತ್ತದೆ. ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಾಶ್ವತ ಶಾಂತಿ ಸ್ಥಾಪನೆಗೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಭಾರತ ಸದಾ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಗುರುವಾರ ಇಲ್ಲಿ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಜೊತೆ ಮಾತುಕತೆ ನಡೆಸಿದ ಮೋದಿ ಈ ವೇಳೆ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಳಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ‘ಯಾವುದೇ ಬಿಕ್ಕಟ್ಟಿನಲ್ಲಿ ಮುಗ್ಧ ಜನರ ಪ್ರಾಣಹಾನಿ ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ‘ಇದು ಯುದ್ಧದ ಯುಗವಲ್ಲ. ಯಾವುದೇ ಸಂಘರ್ಷವನ್ನು ರಾಜತಾಂತ್ರಿಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸಬೇಕು. ಭಾರತವು ಉಕ್ರೇನ್ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಬಯಸುತ್ತದೆ’. ಭಾರತ ರಾಜತಾಂತ್ರಿಕತೆ ಹಾಗೂ ಚರ್ಚೆಗಳಲ್ಲಿ ನಂಬಿಕೆ ಹೊಂದಿದೆ’ ಎಂದು ಹೇಳಿದರು.
ಜೊತೆಗೆ ‘ಎಲ್ಲಾ ದೇಶಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದು ಅಂದಿನ ಭಾರತದ ನೀತಿ. ಆದರೆ ಎಲ್ಲಾ ದೇಶಗಳಿಗೂ ಹತ್ತಿರವಾಗುವುದು ಇಂದಿನ ಭಾರತದ ನೀತಿ. ಇದರ ಭಾಗವಾಗಿಯೇ ಇಂದಿನ ಭಾರತ ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ, ಎಲ್ಲರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ ಹಾಗೂ ಎಲ್ಲರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತದೆ’ ಎಂದು ಹೇಳಿದರು.
ಇದೇ ವೇಳೆ ಹಾಲೆಂಡ್ ಕೂಡಾ ರಷ್ಯಾ- ಉಕ್ರೇನ್ ಬಿಕಟ್ಟು ನಿರ್ವಹಣೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.
==
ರೈಲಿನ ಮೂಲಕ ಉಕ್ರೇನ್‌ಗೆ ಮೋದಿ ಆಗಮನ: ಪೋಲೆಂಡ್‌ನಿಂದ 10 ಗಂಟೆ ರೈಲು ಪ್ರಯಾಣ
ಕೀವ್: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪೋಲೆಂಡ್ ಪ್ರವಾಸ ಮುಗಿಸಿ ಶುಕ್ರವಾರ ಮುಂಜಾನೆ ಉಕ್ರೇನ್‌ಗೆ ಬಂದಿಳಿದಿದ್ದಾರೆ. ವಿಶೇಷವೆಂದರೆ ಪೋಲೆಂಡ್‌ನಿಂದ ಉಕ್ರೇನ್ ರಾಜಧಾನಿ ಕೀವ್‌ಗೆ ಆಗಮಿಸಲು ಮೋದಿ ಬಳಸಿದ್ದು ಐಷಾರಾಮಿ ‘ಟ್ರೈನ್ ಫೋರ್ಸ್ ಒನ್ ರೈಲು’ಗುರುವಾರ ರಾತ್ರಿ ಪೋಲೆಂಡ್‌ನಿಂದ ಹೊರಟ ಮೋದಿ ಸತತ 10 ಗಂಟೆ ಪ್ರಯಾಣ ಮಾಡಿ ಕೀವ್‌ಗೆ ಬಂದಿಳಿದರು. ಕೀವ್‌ನಲ್ಲಿ 7 ಗಂಟೆಗಳ ಕಾಲ ಇರುವ ಮೋದಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಇದು 1991ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದ ಬಳಿಕ ಅಲ್ಲಿಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ. ಭಾರತ, ರಷ್ಯಾದ ಅತ್ಯಾಪ್ತ ದೇಶವಾಗಿದ್ದು ಇತ್ತೀಚೆಗಷ್ಟೇ ಪ್ರಧಾನಿ ಮೋದಿ ರಷ್ಯಾಕ್ಕೆ ತೆರಳಿದ್ದರು. ಅದರ ಬೆನ್ನಲ್ಲೇ ವಿಶ್ವದ ಎಲ್ಲಾ ದೇಶಗಳ ಜೊತೆಗೂ ಶಾಂತಿ ಸ್ಥಾಪನೆಯ ಭಾಗವಾಗಿ ಪೋಲೆಂಡ್ ಸಮೀಪದಲ್ಲೇ ಇರುವ ಉಕ್ರೇನ್‌ಗೂ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಭೇಟಿ ಬಳಿಕ ಮರಳಿ ರೈಲಿನಲ್ಲೇ ಮೋದಿ ಪೋಲೆಂಡ್‌ಗೆ ತೆರಳಲಿದ್ದಾರೆ.
ಹಾಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯ ಕಾರಣಕ್ಕಾಗಿ ಮೋದಿ ರೈಲಿನಲ್ಲಿ ಸಂಚಾರ ಕೈಗೊಂಡಿದ್ದಾರೆ.