ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತವು ಮುಂದಿನ ನಾಲ್ಕು ವರ್ಷಗಳಲ್ಲಿ ಮೇಲ್ಮಧ್ಯಮ ಆದಾಯದ ದೇಶವಾಗಿ ರೂಪುಗೊಳ್ಳಲಿದೆ. ಜೊತೆಗೆ ಇನ್ನೆರಡು ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಡಾಲರ್ (415 ಲಕ್ಷ ಕೋಟಿ ರು.) ಆರ್ಥಿಕತೆಯಾಗಿ ಬದಲಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ತಿಳಿಸಿದೆ.
ನವದೆಹಲಿ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತವು ಮುಂದಿನ ನಾಲ್ಕು ವರ್ಷಗಳಲ್ಲಿ ಮೇಲ್ಮಧ್ಯಮ ಆದಾಯದ ದೇಶವಾಗಿ ರೂಪುಗೊಳ್ಳಲಿದೆ. ಜೊತೆಗೆ ಇನ್ನೆರಡು ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಡಾಲರ್ (415 ಲಕ್ಷ ಕೋಟಿ ರು.) ಆರ್ಥಿಕತೆಯಾಗಿ ಬದಲಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಅಧ್ಯಯನ ವರದಿ ತಿಳಿಸಿದೆ.
ಜನರ ತಲಾದಾಯ ಪರಿಗಣಿಸಿ ದೇಶಗಳನ್ನು ಕಡಿಮೆ, ಮಧ್ಯಮ, ಮೇಲ್ಮಧ್ಯಮ ವರ್ಗ ಮತ್ತು ಹೆಚ್ಚಿನ ಆದಾಯ ದೇಶಗಳೆಂದು ವಿಶ್ವಬ್ಯಾಂಕ್ ಪರಿಗಣಿಸುತ್ತದೆ. ಈ ಲೆಕ್ಕಾಚಾರದಲ್ಲಿ 2030ರ ವೇಳೆಗೆ ಭಾರತೀಯರ ತಲಾದಾಯ 4000 ಡಾಲರ್ (3.60 ಲಕ್ಷ ರು.) ದಾಟಲಿದ್ದು, ಈ ಮೂಲಕ ಮೇಲ್ ಮಧ್ಯಮ ವರ್ಗದ ಆದಾಯದ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ.
ವರದಿಯಲ್ಲಿ ಇನ್ನೇನಿದೆ?:
ಎಸ್‌ಬಿಐನ ವರದಿ ಅನ್ವಯ, 2014ರಿಂದ 2024ರ ನಡುವಿನ ದಶಕದಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಶೇ.95ರಷ್ಟು ದೇಶಗಳಿಗಿಂತ ಉತ್ತಮವಾಗಿತ್ತು. ಭಾರತವು ಕಡಿಮೆ ಆದಾಯದ ದೇಶದಿಂದ, ಮಧ್ಯಮ ಆದಾಯದ ದೇಶವಾಗಿ ಪರಿವರ್ತನೆಯಾಗಲು ಸುಮಾರು 60 ವರ್ಷ (2007ರಲ್ಲಿ) ತೆಗೆದುಕೊಂಡಿತು. 1962ರಲ್ಲಿ 90 ಡಾಲರ್‌ನಷ್ಟಿದ್ದ (8100 ರು.) ಒಟ್ಟು ತಲಾ ಆದಾಯವು 2007ಕ್ಕೆ 910 ಡಾಲರ್‌ಗೆ (82000 ರು.) ತಲುಪಿತು.
ಸ್ವಾತಂತ್ರ್ಯಾ ಬಳಿಕ ಭಾರತವು 1000 ಡಾಲರ್ ತಲಾದಾಯದ ದೇಶವಾಗಲು 62 ವರ್ಷ (2009) ತೆಗೆದುಕೊಂಡಿತು. ಅಲ್ಲಿಂದ 2000 ಡಾಲರ್ ತಲಾದಾಯಕ್ಕೆ ತಲುಪಲು 10 ವರ್ಷ(2019), ಅಲ್ಲಿಂದ 3000 ಡಾಲರ್ ತಲಾದಾಯಕ್ಕೆ 7 ವರ್ಷ (2026) ತೆಗೆದುಕೊಂಡಿತು. 2030ರಲ್ಲಿ ಭಾರತವು 4000 ಡಾಲರ್ (3.40 ಲಕ್ಷ ರು.) ತಲಾ ಆದಾಯದ ರಾಷ್ಟ್ರವಾಗಲಿದೆ. ಈ ಮೂಲಕ ಸದ್ಯ ಈ ಸ್ಥಾನದಲ್ಲಿರುವ ಚೀನಾ ಮತ್ತು ಇಂಡೋನೇಷ್ಯಾ ದೇಶಗಳ ಗುಂಪು ಸೇರಲಿದೆ ಎಂದು ವರದಿ ಹೇಳಿದೆ.
ಆರ್ಥಿಕತೆಯ ಹಾದಿ:
1 ಲಕ್ಷ ಕೋಟಿ ಡಾಲರ್ (83.25 ಲಕ್ಷ ಕೋಟಿ ರು.) ಆರ್ಥಿಕತೆಯಾಗಲೂ ಭಾರತವು ಸುಮಾರು 60 ವರ್ಷ ತೆಗೆದುಕೊಂಡಿತು. 2 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲು ಏಳು ವರ್ಷ (2014) ತೆಗೆದುಕೊಂಡಿತು. ಆ ಬಳಿಕ ಮೂರು ಲಕ್ಷ ಕೋಟಿ ರು. ಆರ್ಥಿಕತೆಯಾಗಲು ಏಳು ವರ್ಷ (2021)ತೆಗೆದುಕೊಂಡಿತು. ತರುವಾಯ 4 ಲಕ್ಷ ಕೋಟಿ ರು(332 ಲಕ್ಷ ಕೋಟಿ ರು.) ಆರ್ಥಿಕತೆಯಾಗಲು 4 ವರ್ಷ (2025), 5 ಲಕ್ಷ ಕೋಟಿ ಡಾಲರ್ (415 ಲಕ್ಷ ಕೋಟಿ ರು.) ಆರ್ಥಿಕತೆಯಾಗಲು ಕೇವಲ 2 ವರ್ಷ (2028) ತೆಗೆದುಕೊಳ್ಳಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಲಾದಾಯದ ಹಾದಿ
ವರ್ಷ - ತಲಾದಾಯ
1962 - 8100 ರು.
2009 - 90000 ರು.
2019 - 180000 ರು.
2026 - 270000 ರು.
2030 - 360000 ರು.
ಆರ್ಥಿಕತೆ ಬೆಳೆದು ಬಂದ ಹಾದಿ
ವರ್ಷ - ಜಿಡಿಪಿ
2007 1 ಲಕ್ಷ ಕೋಟಿ ಡಾಲರ್
2014 2 ಲಕ್ಷ ಕೋಟಿ ಡಾಲರ್
2021 3 ಲಕ್ಷ ಕೋಟಿ ಡಾಲರ್
2025 4 ಲಕ್ಷ ಕೋಟಿ ಡಾಲರ್
2028 5 ಲಕ್ಷ ಕೋಟಿ ಡಾಲರ್
