ಕನ್ನಡಪ್ರಭ ವಾರ್ತೆ ಬೈಲಹೊಂಗಲ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯ ಏಕತೆಯಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಾವೆಲ್ಲ ಅದಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಅವಶ್ಯ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ರಾಮ ಮಂದಿರದ ನಿರ್ಮಾಣ ಉಸ್ತುವಾರಿ ಗೋಪಾಲ ಜೀ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯ ಏಕತೆಯಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಾವೆಲ್ಲ ಅದಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಅವಶ್ಯ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ರಾಮ ಮಂದಿರದ ನಿರ್ಮಾಣ ಉಸ್ತುವಾರಿ ಗೋಪಾಲ ಜೀ ಹೇಳಿದರು.ನಗರದ ಕಿತ್ತೂರು ರಾಣಿ ಚನ್ನಮ್ಮಾಜಿ ಅವರ ಐಕ್ಯ ಸ್ಥಳದ ಮುಂಭಾಗದಲ್ಲಿ ಆಯೋಜಿಸಿದ್ದ ವಿರಾಟ್‌ ಹಿಂದೂ ಸಮ್ಮೇಳನದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಗಂಡುಮೆಟ್ಟಿದ ಬೈಲಹೊಂಗಲ ಪರಾಕ್ರಮಿ ನಾಡಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಅಮಟೂರು ಬಾಳಪ್ಪ ಅನೇಕ ವೀರರು ಹೋರಾಡಿದ ಪುಣ್ಯ ಭೂಮಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಶತಾಬ್ದಿ ನಿಮಿತ್ಯ ವಿರಾಟ್‌ ಹಿಂದೂ ಸಮ್ಮೇಳನ ಆಯೋಜನೆ ಮಾಡಲಾಗಿದೆ. ನಾವೆಲ್ಲ ಒಂದು ಎಂಬ ಭಾವನೆ ತರುವುದು ಮುಖ್ಯ ಉದ್ದೇಶವಾಗಿದೆ. ಸಂಘ ಕಳೆದ ನೂರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದು, ಭಾರತ ಹಿಂದೂ ರಾಷ್ಟ್ರ ನಿರ್ಮಿಸುವ ಸಂಕಲ್ಪ ಹೊಂದಿದೆ. ಸಂಘದ ಸಂಸ್ಥಾಪಕ ಡಾ.ಹೆಗಡೆವಾರ್‌ ಬಾಲ್ಯದಿಂದಲೇ ರಾಷ್ಟ್ರಪ್ರೇಮ ಬೆಳೆಸಿಕೊಂಡಿದ್ದರು. ತಮ್ಮ ಜೀವನನ್ನೇ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟಿದ್ದರು. ಬ್ರಿಟಿಷರ ಆದೇಶ ಧಿಕ್ಕರಿಸಿ ಶಾಲೆಯಲ್ಲಿ ವಂದೇ ಮಾತರಂ ಗೀತೆ ಹಾಡಿದ ಕೀರ್ತಿಗೆ ಹೆಗಡೆವಾರ್‌ ಪಾತ್ರರಾಗಿದ್ದರು ಎಂದರು.ಭಾಷೆ, ವೇಷ, ಪ್ರಾಂತ್ಯ, ಪಂಥ, ಪಕ್ಷ, ಪೂಜೆ, ವೈವಿಧ್ಯಗಳಲ್ಲಿ ಏಕತೆ ಸಾರುವ ದೇಶ ನಮ್ಮದಾಗಿದೆ. ದೇಶಭಕ್ತರ ದನಿಗೂಡಿಸಿ ದೇಶದ್ರೋಹಿಗಳ ಹಿಮ್ಮೆಟ್ಟಿಸಬೇಕು. ಮೇಲು ಕೀಳು ಭಾವನೆ ಅಳಿಸಿ ಹಾಕಿ, ಭಯೋತ್ಪಾದನೆ, ಮತಾಂತರ, ಗೋಹತ್ಯೆ ನಿಲ್ಲಿಸಲು ಭದ್ಧರಾಗಬೇಕಿದೆ. ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ, ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಸಿ ಜೀವನಶೈಲಿ ಹಾಗೂ ನಾಗರೀಕ ಶಿಷ್ಟಾಚಾರಗಳ ಮುಖಾಂತರ ಹಿಂದೂ ಸಮಾಜವನ್ನು ವಿಶ್ವದಲ್ಲಿ ವೈಭವಿಕರಿಸೋಣ ಎಂದು ಹೇಳಿದರು.ಸಮ್ಮೇಳನದ ಉಪಾಧ್ಯಕ್ಷೆ ಮೀನಾಕ್ಷಿ ಕೂಡಸೋಮಣ್ಣವರ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ಅದೃಶ್ಯಪ್ಪ ಸಿದ್ರಾಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂರುಸಾವಿರ ಶಾಖಾ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಹೊಸೂರಿನ ಗಂಗಾಧರ ಸ್ವಾಮೀಜಿ, ಇಂಚಲ ಪೂರ್ಣಾನಂದ ಸ್ವಾಮೀಜಿ, ಡಿವಾಳೇಶ್ವರ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಜಾಕನಾಯಕನ ಕೊಪ್ಪದ ಮಾತೋಶ್ರೀ ಶಿವಯೋಗಿನಿ ದೇವಿ, ವೀರಯ್ಯ ಹಿರೇಮಠ, ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಪ್ರಭಾ ಅಕ್ಕನವರು ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದ ಪ್ರಯುಕ್ತ ಚನ್ನಮ್ಮಾಜಿ ವೃತ್ತದ ಚನ್ನಮ್ಮಾಜಿ ಅವರ ಅಶ್ವಾರೂಢ ಮೂರ್ತಿಗೆ ಗೌರವ ಸಲ್ಲಿಸಿ, ಗೋ ಪೂಜೆಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿರಾಟ್‌ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯ ಕಾರ್ಯದರ್ಶಿ ಪ್ರಮೋದ ಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಮಡಿವಾಳಪ್ಪ ಹೋಟಿ, ಸುಭಾಷ್ ಬಾಗೇವಾಡಿ, ಮಹಾಂತೇಶ ಗದಗ, ಸಹ ಕಾರ್ಯದರ್ಶಿ ಶಂಕರ ಬರಬಳ್ಳಿ, ಶ್ರೀಶೈಲ ಸಿದಮನಿ, ಗಿರೀಶ ಹಲಸಗಿ ಸೇರಿದಂತೆ ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜಂಗಮ ವಟುಗಳಿಂದ ಮಂತ್ರಘೋಷ ಮೊಳಗಿತು. ಪ್ರಗತಿ ಬಿಳ್ಳೂರರಿಂದ ಭರತನಾಟ್ಯ ಜರುಗಿತು. ವಕೀಲ ಎಂ.ವೈ.ಸೋಮಣ್ಣವರ ಸ್ವಾಗತಿಸಿದರು.ಗಿರೀಶ ಹರಕುಣಿ ನಿರೂಪಿಸಿ, ವಂದಿಸಿದರು.