ಸಾರಾಂಶ
ಆರ್ಥಿಕ ಬೆಳವಣಿಗೆಯ ದರವು 2030ರ ಬಳಿಕವೂ ಇದೇ ರೀತಿ ಮುಂದುವರಿದರೆ ಕೊಂಡುಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ 2038ರಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ಹೇಳಿದೆ.
ನವದೆಹಲಿ: ಆರ್ಥಿಕ ಬೆಳವಣಿಗೆಯ ದರವು 2030ರ ಬಳಿಕವೂ ಇದೇ ರೀತಿ ಮುಂದುವರಿದರೆ ಕೊಂಡುಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ 2038ರಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ಹೇಳಿದೆ.
ಅರ್ನೆಸ್ಟ್ ಆ್ಯಂಡ್ ಯಂಗ್ ಎಕನಾಮಿಕ್ ವಾಚ್ ವರದಿ ಅನ್ವಯ, ‘ ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ದರವು ಈಗಿರುವ ರೀತಿಯಲ್ಲೇ 2030ರ ಬಳಿಕವೂ ಮುಂದುವರೆದರೆ ಭಾರತದ ಆರ್ಥಿಕತೆ 34.2 ಲಕ್ಷ ಕೋಟಿ ಡಾಲರ್ ತಲುಪುವ ಮೂಲಕ ಅದು ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ವರದಿ ಹೇಳಿದೆ.
ವರದಿ ಅನ್ವಯ, 2028ರ ವೇಳೆಗೆ ಜರ್ಮನಿ ಹಿಂದಿಕ್ಕಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2038ರ ವೇಳೆಗೆ 2ನೇ ಸ್ಥಾನಕ್ಕೆ ತಲುಪಲಿದೆ. ಚೀನಾ ಮೊದಲ ಸ್ಥಾನದಲ್ಲಿ ಮುಂದುವರೆಯಲಿದೆ.
ಹೆಚ್ಚುತ್ತಿರುವ ಕೌಶಲ್ಯಯುತ ಯುವಜನರು, ಉಳಿತಾಯ ಮತ್ತು ಹೂಡಿಕೆ ಪ್ರಮಾಣ ಹಾಗೂ ಸರ್ಕಾರಿ ಸಾಲದ ಪ್ರಮಾಣವು 2024- 2030ರ ನಡುವೆ ಶೇ.81.3ರಿಂದ 2030ರಲ್ಲಿ ಶೇ.75.8ಕ್ಕೆ ಇಳಿಯಲಿರುವುದರಿಂದ ಇತರೆ ಪ್ರಮುಖ ಆರ್ಥಿಕತೆಗೆ ಹೋಲಿಸಿದರೆ ಭಾರತದ ಅರ್ಥವ್ಯವಸ್ಥೆಯು ಉತ್ತಮ ಸಾಧನೆ ಮಾಡಲಿದೆ ಎಂದು ವರದಿ ಹೇಳಿದೆ.
2028ರಿಂದ 2030ರ ವರೆಗೆ ಭಾರತ ಮತ್ತು ಅಮೆರಿಕದ ಸರಾಸರಿ ಬೆಳವಣಿಗೆ ದರವು ಕ್ರಮವಾಗಿ ಶೇ.6.5 ಮತ್ತು ಶೇ.2.1ರಷ್ಟು ಇರಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ಚೀನಾವು 2030ರಲ್ಲೇ ಈ ಮಾನದಂಡಗಳ ಆಧಾರದ ಮೇಲೆ 36 ಲಕ್ಷ ಕೋಟಿ ರು ಡಾಲರ್. ಆರ್ಥಿಕತೆಯಾಗಿ ಹೊರಹೊಮ್ಮಲಿದ್ದು, ಆ ಬಳಿಕ ಹೆಚ್ಚುತ್ತಿರುವ ಸಾಲ ಹಾಗೂ ಕೌಶಲ್ಯಯುತ ಯುವಜನರ ಕೊರತೆಯಿಂದಾಗಿ ಸಮಸ್ಯೆಗಳನ್ನು ಎದುರಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.