ಏ. 23ರಿಂದ ಭಾರತ - ಅಮೆರಿಕ ಮಾತುಕತೆ : 90 ದಿನದೊಳಗೆ ವ್ಯಾಪಾರ ಒಪ್ಪಂದಕ್ಕೆ ಯತ್ನ

| N/A | Published : Apr 20 2025, 02:01 AM IST / Updated: Apr 20 2025, 04:17 AM IST

ಸಾರಾಂಶ

ಶೇ.26ರಷ್ಟು ಪ್ರತಿತೆರಿಗೆ ದಾಳಿಗೆ ಅಮೆರಿಕ ಸರ್ಕಾರ 90 ದಿನಗಳ ತಡೆ ನೀಡಿದ ಬೆನ್ನಲ್ಲೇ, ಅಷ್ಟು ದಿನದೊಳಗೆ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಸರ್ಕಾರ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

 ನವದೆಹಲಿ: ಶೇ.26ರಷ್ಟು ಪ್ರತಿತೆರಿಗೆ ದಾಳಿಗೆ ಅಮೆರಿಕ ಸರ್ಕಾರ 90 ದಿನಗಳ ತಡೆ ನೀಡಿದ ಬೆನ್ನಲ್ಲೇ, ಅಷ್ಟು ದಿನದೊಳಗೆ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಸರ್ಕಾರ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಈ ನಿಟ್ಟಿನಲ್ಲಿ ಭಾರತದ ಅಧಿಕಾರಿಗಳ ಮಟ್ಟದ ನಿಯೋಗವೊಂದು ಅಮೆರಿಕಕ್ಕೆ ತೆರಳುತ್ತಿದ್ದು ಏ.23ರಿಂದ ಮೂರು ದಿನಗಳ ಕಾಲ ಅಮೆರಿಕದ ಅಧಿಕಾರಿಗಳ ಜೊತೆ ವ್ಯಾಪಾರ ಒಪ್ಪಂದದ ಅಂಶಗಳ ಬಗ್ಗೆ ಚರ್ಚೆ ನಡೆಸಲಿದೆ. ಈ ಮಾತುಕತೆ ತೆರಿಗೆ ಸೇರಿ 19 ವಿಷಯಗಳನ್ನು ಒಳಗೊಂಡಿರಲಿದೆ. ಇದು ತೆರಿಗೆ ಹೇರಿಕೆಯ ಬಳಿಕ ಉಭಯ ದೇಶಗಳ ನಡುವೆ ನಡೆಯಲಿರುವ ಮೊದಲ ನೇರ ಮಾತುಕತೆಯಾಗಿರಲಿದೆ.

ಇದಕ್ಕಾಗಿ ಭಾರತದ ಮುಖ್ಯ ಸಂಧಾನಕಾರರೂ ಆದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್‌ ಅಗರ್ವಾಲ್‌ ಅವರ ನೇತೃತ್ವದಲ್ಲಿ ಭಾರತೀಯ ಅಧಿಕಾರಿಗಳ ತಂಡ ಅಮೆರಿಕಕ್ಕೆ ತೆರಳಲಿದ್ದು, ವ್ಯಾಪಾರದ ಮೇಲಿನ ತೆರಿಗೆ, ತೆರಿಗೆಯೇತರ ತಡೆಗಳು, ನಿಯಮಗಳು, ಉತ್ಪನ್ನ, ಸೇವೆ, ಕಸ್ಟಮ್ ಸೌಲಭ್ಯ ಮತ್ತು ನಿಯಂತ್ರಕ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ದ್ವಿಪಕ್ಷೀಯ ಒಪ್ಪಂದದ ಮಾತುಕತೆಗೆ ಚೌಕಟ್ಟನ್ನು ಸಿದ್ಧಪಡಿಸಲಾಗುವುದು.

ಇದೇ ವೇಳೆ, ಕೆಲ ವಸ್ತುಗಳ ಮೇಲೆ ಹೇರಲಾಗಿರುವ ಪರಸ್ಪರರ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಇಲ್ಲವೆ ಕಡಿಮೆ ಮಾಡುವ ಸಾಧ್ಯತೆಯಿದೆ.