ಸಾರಾಂಶ
ಐತಿಹಾಸಿಕ ಕ್ರಮವೊಂದರಲ್ಲಿ ಕೇಂದ್ರ ಸರ್ಕಾರವು 2020ರಿಂದ ಜಾರಿಯಾಗದೆ ಬಾಕಿ ಉಳಿದಿದ್ದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಇದರ ಕಂಪನಿ ಸ್ನೇಹಿ ಕ್ರಮಗಳಾದ ಕೆಲಸದ ಸಮಯ ಹೆಚ್ಚಳ ಹಾಗೂ ಉದ್ಯೋಗದಾತ ಸ್ನೇಹಿ ವಜಾ ನಿಯಮಗಳ ಜಾರಿಗೂ ಅನುಮತಿಸಿದೆ.
ನವದೆಹಲಿ : ಐತಿಹಾಸಿಕ ಕ್ರಮವೊಂದರಲ್ಲಿ ಕೇಂದ್ರ ಸರ್ಕಾರವು 2020ರಿಂದ ಜಾರಿಯಾಗದೆ ಬಾಕಿ ಉಳಿದಿದ್ದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರು ಸೇರಿ ಎಲ್ಲರಿಗೂ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ಸಕಾಲಿಕ ಕನಿಷ್ಠ ವೇತನ, ಸಾರ್ವತ್ರಿಕ ಸಾಮಾಜಿಕ ಭದ್ರತೆಯಂತಹ ಕಾರ್ಮಿಕಸ್ನೇಹಿ ಕ್ರಮ ಪರಿಚಯಿಸಲಾಗಿದೆ. ಇದರ ಜತೆಗೆ, ಕಂಪನಿ ಸ್ನೇಹಿ ಕ್ರಮಗಳಾದ ಕೆಲಸದ ಸಮಯ ಹೆಚ್ಚಳ ಹಾಗೂ ಉದ್ಯೋಗದಾತ ಸ್ನೇಹಿ ವಜಾ ನಿಯಮಗಳ ಜಾರಿಗೂ ಅನುಮತಿಸಿದೆ.
ಹಳೆಯ ಬ್ರಿಟಿಷ್ ಕಾಲದ ಕಾರ್ಮಿಕ ಕಾನೂನನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಬದಲಿಸಿ 5 ವರ್ಷಗಳ ಹಿಂದೆ ಸಂಸತ್ತು 4 ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ (2019), ಕೈಗಾರಿಕಾ ಸಂಬಂಧ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020) ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ (2020)ಗಳನ್ನು ಅಂಗೀಕರಿಸಿತ್ತು. ಆದರೆ ಕಾರ್ಮಿಕ ಸಂಘಟನೆಗಳ ಕೆಲವು ವಿರೋಧದ ಕಾರಣ ಇವುಗಳ ಜಾರಿ ವಿಳಂಬವಾಗಿತ್ತು. ಇದೀಗ ಅಧಿಸೂಚನೆ ಪ್ರಕಟಿಸಿ ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಜಾರಿಗೊಳಿಸಲಾಗಿದೆ. ಇವನ್ನು ಹಳೆಯ 29 ವಿಭಿನ್ನ ಕಾನೂನುಗಳನ್ನು ಬದಲಿಸಿ ಜಾರಿ ಮಾಡಲಾಗಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಶ್ರಮಮೇವ ಜಯತೆ.. ಇಂದು ನಾವು ಜಾರಿಗೆ ತಂದ ಕಾನೂನು ಸ್ವಾತಂತ್ರ್ಯದ ನಂತರದ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಕಾರ್ಮಿಕ ಸುಧಾರಣೆಗಳಲ್ಲಿ ಒಂದಾಗಿದೆ. ಈ ನಿರ್ಧಾರವು ಕಾರ್ಮಿಕರ ಸಬಲೀಕರಣವನ್ನು ಮತ್ತಷ್ಟು ಬಲಪಡಿಸಿದೆ’ ಎಂದಿದ್ದಾರೆ. ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
ಕಾರ್ಮಿಕ ಸ್ನೇಹಿ ನಿಯಮಗಳು:
ಸಂಹಿತೆ ಪ್ರಕಾರ ಹಲವು ಕಾರ್ಮಿಕ ಸ್ನೇಹಿ ಕ್ರಮ ಜಾರಿಗೆ ತರಲಾಗಿದೆ. ನೌಕರರಿಗೆ/ಕಾರ್ಮಿಕರಿಗೆ ಕಡ್ಡಾಯ ನೇಮಕಾತಿ ಪತ್ರ, ಗಿಗ್, ಪ್ಲಾಟ್‌ಫಾರ್ಮ್, ಗುತ್ತಿಗೆ ಮತ್ತು ವಲಸೆ ಕಾರ್ಮಿಕರನ್ನು ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರುವುದು, ಈ ಮೂಲಕ ಅವರಿಗೆ ಪಿಎಫ್, ಇಎಸ್ಐಸಿ ಮತ್ತು ವಿಮಾ ಪ್ರಯೋಜನ ಒದಗಿಸುವುದು. ಎಲ್ಲಾ ವಲಯಗಳಲ್ಲಿ ಶಾಸನಬದ್ಧ ಕನಿಷ್ಠ ವೇತನ ಮತ್ತು ಪ್ರತಿ ತಿಂಗಳ 7ನೇ ತಾರೀಖಿನ ಒಳಗೆ ವೇತನ ಪಾವತಿ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ, ಕಂಪನಿಗಳಲ್ಲಿ ಕಡ್ಡಾಯವಾಗಿ ಕುಂದುಕೊರತೆ ಸಮಿತಿಗಳ ರಚನೆ ಹಾಗೂ 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ. 40 ವರ್ಷಕ್ಕಿಂತ ಹೆಚ್ಚಿನವರಿಗೆ ಸಾಮಾಜಿಕ ಭದ್ರತೆ, ನಿರ್ದಿಷ್ಟ ಅವಧಿಯ ನೌಕರರಿಗೆ 1 ವರ್ಷದ ಬಳಿಕ ಗ್ರ್ಯಾಚುಟಿ, ಹೆಚ್ಚುವರಿ ಅವಧಿಯ ಕೆಲಸಕ್ಕೆ ದುಪ್ಪಟ್ಟು ವೇತನ, ಅಪಾಯಕಾರಿ ಕ್ಷೇತ್ರಗಳಲ್ಲಿ ಕೆಲಸಗಾರರಿಗೆ ಶೇ.100ರಷ್ಟು ಆರೋಗ್ಯ ಸುರಕ್ಷತೆ- ಇವು ಸಂಹಿತೆಯಲ್ಲಿನ ನೌಕರ ಸ್ನೇಹಿ ಅಂಶಗಳು.
ಕಂಪನಿ ಸ್ನೇಹಿ ಕ್ರಮಗಳು:
ಉದ್ಯೋಗದಾತ ಸ್ನೇಹಿ ಕ್ರಮಗಳನ್ನೂ ಇದೇ ವೇಳೆ ಜಾರಿ ಮಾಡಲಾಗಿದೆ. ಕಾರ್ಮಿಕ ಸಂಘಟನೆಗಳ ವಿರೋಧ ಇದ್ದರೂ ಇವನ್ನು ಜಾರಿಗೆ ತರಲಾಗಿದೆ.
ಒಂದು ಕಂಪನಿ ಮುಚ್ಚುವಿಕೆ, ನೌಕರರ ವಜಾಗೊಳಿಸುವಿಕೆ ಅಥವಾ ನೌಕರಿ ಕಡಿತ ಮಾಡಬೇಕಾದರೆ ಸರ್ಕಾರದ ಅನುಮತಿ ಅಗತ್ಯ ಎಂಬುದರ ಮಿತಿಯನ್ನು 100ರಿಂದ 300 ನೌಕರರಿಗೆ ಹೆಚ್ಚಿಸಲಾಗಿದೆ. ಅರ್ಥಾತ್ ಇನ್ನು ಯಾವುದೇ ಕಂಪನಿ 300ಕ್ಕಿಂತ ಕಡಿಮೆ ನೌಕರರನ್ನು ಹೊಂದಿದ್ದರೆ ಈ ಮೇಲಿನ ಕ್ರಮಗಳಿಗೆ ಸರ್ಕಾರದ ಅನುಮತಿ ಪಡೆಯಬೇಕಿಲ್ಲ. ಈ ಮುಂಚೆ 100ಕ್ಕಿಂತ ಕಡಿಮೆ ನೌಕರರಿದ್ದರೆ ಈ ನಿಯಮ ಪಾಲಿಸಬೇಕಿತ್ತು.
ಇದೇ ವೇಳೆ, ಕಾರ್ಖಾನೆಗಳಲ್ಲಿ ಕೆಲಸದ ಸಮಯವನ್ನು 9 ರಿಂದ 12 ಗಂಟೆಗಳಿಗೆ ಮತ್ತು ಅಂಗಡಿಗಳು ಮತ್ತು ಸಂಸ್ಥೆಗಳಲ್ಲಿ 9ರಿಂದ 10 ಗಂಟೆಗಳಿಗೆ ಹೆಚ್ಚಿಸಲಾಗಿದೆ.
ಮೊದಲ ಬಾರಿಗೆ ಗಿಗ್ ಕಾರ್ಮಿಕರಿಗೆ ಮನ್ನಣೆ
ಹೊಸ ಕಾರ್ಮಿಕರ ಸಂಹಿತೆಯಲ್ಲಿ ಮೊದಲ ಬಾರಿಗೆ ಗಿಗ್ ಕೆಲಸ, ಪ್ಲಾಟ್‌ಫಾರ್ಮ್ ಕೆಲಸ ಮತ್ತು ಅಗ್ರಿಗೇಟರ್‌ಗಳ ಪ್ರಸ್ತಾಪ ಮಾಡಲಾಗಿದೆ. ಫುಡ್ ಡೆಲಿವರಿ, ಪಾರ್ಸೆಲ್-ಕೊರಿಯರ್ ಡೆಲಿವರಿ ಕಾರ್ಮಿಕರಿಗೆ ಗಿಗ್ ಕಾರ್ಮಿಕರು ಎನ್ನುತ್ತಾರೆ. ಇನ್ನು, ಆಧಾರ್ ಸಂಯೋಜಿತ ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್) ಜಾರಿಗೆ ನಿರ್ಧರಿಸಲಾಗಿದ್ದು, ಸರ್ಕಾರದ ಕಲ್ಯಾಣ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡುತ್ತದೆ. ಈ ಯುಎಎನ್ ಅನ್ನು ನೀವು ಯಾವುದೇ ರಾಜ್ಯಕ್ಕೆ ವಲಸೆ ಹೋದರೂ ಬಳಸಬಹುದಾಗಿದೆ.
ಏನೇನು ಬದಲಾವಣೆ?-
ಗಿಗ್ ಕಾರ್ಮಿಕರು ಸೇರಿ ಎಲ್ಲಾ ಕಾರ್ಮಿಕರಿಗೆ ಪಿಎಫ್, ಎಸ್‌ಐಸಿ, ವಿಮೆ ಮತ್ತು ಇತರೆ ಸಾಮಾಜಿಕ ಭದ್ರತೆ
- ಎಲ್ಲಾ ಕಾರ್ಮಿಕರಿಗೆ ಕಾನೂನುಬದ್ಧ ಕನಿಷ್ಠ ವೇತನ ಮತ್ತು ಪ್ರತಿ ತಿಂಗಳ 7ರೊಳಗೆ ವೇತನ ಪಾವತಿ
- ಅಪಾಯಕಾರಿ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ನೌಕರ ಕೆಲಸ ಮಾಡುತ್ತಿದ್ದರೂ ಸೇಫ್ಟಿ ಆಫೀಸರ್ ನೇಮಕ ಕಡ್ಡಾಯ
- ಗುತ್ತಿಗೆ ಉದ್ಯೋಗಿಗಳಿಗೂ ಪರ್ಮನೆಂಟ್ ನೌಕರರಂತೆ ರಜೆ, ವೈದ್ಯಕೀಯ, ಸಾಮಾಜಿಕ ಭದ್ರತೆ ಎಲ್ಲಾ ಸೌಲಭ್ಯಗಳ ಲಾಭ
- ಪ್ಲ್ಯಾಂಟೇಷನ್ ಕಾರ್ಮಿಕರೂ ಔದ್ಯೋಗಿಕ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ವ್ಯಾಪ್ತಿಗೆ.
- ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿರುವ ಪತ್ರಕರ್ತರೂ ಸೇರಿ ಆಡಿಯೋ ವಿಜುವಲ್ ನೌಕರರು, ಡಬ್ಬಿಂಗ್ ಕಲಾವಿದರು ಮತ್ತು ಸ್ಟಂಟ್ ಕಲಾವಿದರಿಗೂ ಸಾಮಾಜಿಕ ಸೌಲಭ್ಯ
)