ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಶ್ರಮಶಕ್ತಿ ಹೋರಾಟ ಅಗತ್ಯ

| Published : Nov 14 2025, 01:45 AM IST

ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಶ್ರಮಶಕ್ತಿ ಹೋರಾಟ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿಐಟಿಯು ೧೬ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶ್ರಮಶಕ್ತಿ ಯೋಜನೆ ದುಡಿಯುವ ವರ್ಗದ ಹಕ್ಕುಗಳನ್ನೇ ಕುಗ್ಗಿಸುವ “ಮನುಸ್ಮೃತಿ ಆಧಾರಿತ ನೀತಿ” ಎಂದು ಟೀಕಿಸಿದರು. ಶತಮಾನಗಳ ಹೋರಾಟದ ಬೆನ್ನಲ್ಲೇ ಕಾರ್ಮಿಕರು ಗಳಿಸಿದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕ್ರಮೇಣ ಕಿತ್ತುಕೊಳ್ಳುತ್ತಿದೆ. ಶ್ರಮಶಕ್ತಿ ಯೋಜನೆ ಮೂಲಕ ಕಾರ್ಮಿಕ ಇಲಾಖೆಯೇ ಮಾಲೀಕರ ಪರವಾಗಿ ವಕಾಲತ್ತು ವಹಿಸುವ ಪರಿಸ್ಥಿತಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ದುಡಿಯುವ ಜನರ ಹಕ್ಕುಗಳನ್ನು ಕಾಪಾಡಲು ನಿರ್ಣಾಯಕ ಹೋರಾಟಕ್ಕೆ ಕಾಲದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ. ಹೇಮಲತಾ ಅವರು ಕರೆ ನೀಡಿದರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದ ಕಾಂ. ಎಂ.ಆರ್‌.ಎಲ್. ಶೆಣೈ ಸಭಾಂಗಣದಲ್ಲಿ ಗುರುವಾರ ಆರಂಭವಾದ ಸಿಐಟಿಯು ೧೬ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶ್ರಮಶಕ್ತಿ ಯೋಜನೆ ದುಡಿಯುವ ವರ್ಗದ ಹಕ್ಕುಗಳನ್ನೇ ಕುಗ್ಗಿಸುವ “ಮನುಸ್ಮೃತಿ ಆಧಾರಿತ ನೀತಿ” ಎಂದು ಟೀಕಿಸಿದರು. ಶತಮಾನಗಳ ಹೋರಾಟದ ಬೆನ್ನಲ್ಲೇ ಕಾರ್ಮಿಕರು ಗಳಿಸಿದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕ್ರಮೇಣ ಕಿತ್ತುಕೊಳ್ಳುತ್ತಿದೆ. ಶ್ರಮಶಕ್ತಿ ಯೋಜನೆ ಮೂಲಕ ಕಾರ್ಮಿಕ ಇಲಾಖೆಯೇ ಮಾಲೀಕರ ಪರವಾಗಿ ವಕಾಲತ್ತು ವಹಿಸುವ ಪರಿಸ್ಥಿತಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆ ಮಹಿಳೆಯರ, ದೀನ ದಲಿತರ, ದುಡಿಯುವ ವರ್ಗದ ಶೋಷಣೆಯ ಹೊಸ ರೂಪವಾಗಿದೆ. ಇದು ಆರ್‌ಎಸ್‌ಎಸ್‌ನ ಕಾರ್ಮಿಕ ವಿರೋಧಿ ಧೋರಣೆಯ ಭಾಗ. ಕಾರ್ಮಿಕ ಕಾನೂನಿನ ಉಲ್ಲಂಘನೆಗೆ ಕ್ರಿಮಿನಲ್ ಶಿಕ್ಷೆ ರದ್ದುಮಾಡಿ ಕೇವಲ ದಂಡದ ಮಟ್ಟಿಗೆ ಸೀಮಿತಗೊಳಿಸಿರುವುದು ದುಡಿಯುವ ವರ್ಗದ ವಿರುದ್ಧದ ಸ್ಪಷ್ಟ ದಾಳಿ ಎಂದರು. ಕೇಂದ್ರದ ಬಿಜೆಪಿ ಸರ್ಕಾರ ಹನ್ನೊಂದು ವರ್ಷಗಳಿಂದ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಕಾರ್ಮಿಕರ ಹೋರಾಟದ ಧ್ವನಿಯನ್ನು ಹತ್ತಿಕ್ಕಲು ಗೃಹಬಂಧನ ಹಾಗೂ ಪೊಲೀಸ್ ದೌರ್ಜನ್ಯ ಬಳಸಲಾಗುತ್ತಿದೆ. ಈ ತಂತ್ರ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿಯೂ ಮುಂದುವರಿದಿದೆ ಎಂದು ಕಿಡಿಕಾರಿದರು. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನ ಹೊರೆ ಕಾರ್ಮಿಕರ ಮೇಲೇ ಹಾಕಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕೂಲಿ ಅಭದ್ರತೆ, ಉದ್ಯೋಗದ ಅಭದ್ರತೆ, ಸಾಮಾಜಿಕ ಭದ್ರತೆಯ ಕೊರತೆ ಇವೆಲ್ಲವೂ ಕಾರ್ಮಿಕರನ್ನು ದಿಕ್ಕು ತಪ್ಪಿಸುತ್ತಿವೆ. ಆದರೆ ದುಡಿಯುವ ವರ್ಗ ಈಗ ಎಚ್ಚರಗೊಂಡಿದೆ. ಶೋಷಣೆಗೆ ವಿರೋಧವಾಗಿ ವಿಶ್ವದಾದ್ಯಂತ ಹೋರಾಟದ ಜ್ವಾಲೆ ಉರಿಯುತ್ತಿದೆ ಎಂದು ಹೇಳಿದರು.

ಸಮ್ಮೇಳನದ ಆರಂಭಕ್ಕೂ ಮುನ್ನ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಅವರು ಕೆಂಪು ಬಾವುಟವನ್ನು ಹಾರಿಸಿ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದಲ್ಲಿ ಮಡಿದ ಸಂಘಟನಗಾರರಿಗೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಸಮ್ಮೇಳನದಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎನ್.ಐ. ಉಮೇಶ್, ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ. ನಾಯರ್‌, ಕಾಂ. ಹರೀಶ್ ನಾಯಕ್, ಸ್ವಾಗತ ಸಮಿತಿ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಸ್ವಾಗತ ಸಮಿತಿಯ ಉಪಾಧ್ಯಕ್ಷ ರಾಜು ಗೊರೂರ್‌, ಜಿಲ್ಲಾ ಖಜಾಂಚಿ ಅರವಿಂದ್, ಕಾರ್ಯದರ್ಶಿ ಎಂ.ಜಿ. ಪೃಥ್ವಿ ಮತ್ತು ಕಾರ್ಯಕ್ರಮದ ನಿರೂಪಕರಾದ ಸ್ವಾಗತ ಸಮಿತಿಯ ಕಾರ್ಯದರ್ಶಿ ಎಚ್. ಆರ್‌. ನವೀನ್ ಕುಮಾರ್ ಸೇರಿದಂತೆ ಅನೇಕ ಕಾರ್ಮಿಕ ನಾಯಕರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕಾರ್ಮಿಕ ಪ್ರತಿನಿಧಿಗಳನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಚ್.ಎನ್. ಪರಮಶಿವಯ್ಯ ಸ್ವಾಗತಿಸಿದರು.