ಪಾಕಲ್ಲಿ 20 ಉಗ್ರರ ಹತ್ಯೆಗೈದ ಭಾರತ: ಬ್ರಿಟನ್‌ ಪತ್ರಿಕೆ ವರದಿ

| Published : Apr 06 2024, 12:50 AM IST / Updated: Apr 06 2024, 05:36 AM IST

ಪಾಕಲ್ಲಿ 20 ಉಗ್ರರ ಹತ್ಯೆಗೈದ ಭಾರತ: ಬ್ರಿಟನ್‌ ಪತ್ರಿಕೆ ವರದಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 2 ವರ್ಷದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ನಡೆದ 20 ಉಗ್ರರ ನಿಗೂಢ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ.

ಲಂಡನ್‌: ಕಳೆದ 2 ವರ್ಷದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ನಡೆದ 20 ಉಗ್ರರ ನಿಗೂಢ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರಿಂದ ನಡೆದ 39 ಯೋಧರ ಹತ್ಯೆಗೆ ಪ್ರತಿಯಾಗಿ ಭಾರತ ಈ ದಾಳಿಗಳನ್ನು ರೂಪಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್‌ನ ‘ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

ಆದರೆ ಈ ವರದಿಯನ್ನು ಸಂಪೂರ್ಣ ನಿರಾಧಾರ ಎಂದು ಭಾರತದ ವಿದೇಶಾಂಗ ಇಲಾಖೆ ತಳ್ಳಿಹಾಕಿದೆ.

ಹತ್ಯೆ ಯಾಕೆ?:

2019ರ ಪುಲ್ವಾಮಾ ದಾಳಿಯಲ್ಲಿ ಪಾಕ್‌ ಮೂಲದ ಉಗ್ರ ಸಂಘಟನೆಗಳ ಕೈವಾಡ ಪತ್ತೆಯಾಗಿತ್ತು. ಆದರೆ ಅದರ ನಿರ್ವಾಹಕರು ಪಾಕಿಸ್ತಾನದಲ್ಲಿದ್ದ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಅಸಹಾಯತೆಯಲ್ಲಿ ಭಾರತ ಇತ್ತು. ಈ ನಡುವೆ ಸೌದಿ ಅರೇಬಿಯಾ ಸರ್ಕಾರ, ಪತ್ರಕರ್ತ ಜಮಾಲ್‌ ಕಶೋಗಿಯನ್ನು ಹತ್ಯೆ ಮಾಡಿದ್ದನ್ನೇ ಪ್ರೇರೇಪಣೆಯಾಗಿ ಬಳಸಿಕೊಂಡ ಭಾರತ ವಿದೇಶಗಳಲ್ಲಿನ ಉಗ್ರರ ಹತ್ಯೆಗೆ ಸಂಚು ರೂಪಿಸಿತು. ಜೊತೆಗೆ ವಿದೇಶದೊಳಗೆ ನುಗ್ಗಿ ಎದುರಾಳಿಗಳನ್ನು ಹತ್ಯೆಗೈಯುವ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸ್ಸಾದ್‌ ಮತ್ತು ರಷ್ಯಾದ ಗುಪ್ತಚರ ಸಂಸ್ಥೆ ಕೆಜೆಬಿ ಕೂಡಾ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್‌ ಆ್ಯಂಡ್ ಅನಾಲಿಸಿಸ್‌ ವಿಂಗ್‌ (ರಾ)ಗೆ ಪ್ರೇರೇಪಣೆ ಆಯಿತು ಎಂದು ವರದಿ ಹೇಳಿದೆ.

ಹತ್ಯೆ ಹೇಗೆ?:

ಭಾರತದ ಗುಪ್ತಚರ ಇಲಾಖೆಯು ವಿವಿಧ ದೇಶಗಳಲ್ಲಿ ಇರುವ ತನ್ನ ಸ್ಲೀಪರ್‌ಸೆಲ್‌ ಗುಪ್ತಚರರನ್ನು ಬಳಸಿಕೊಂಡು ವಿವಿಧ ಸಂಘಟನೆಗಳ ಉಗ್ರರು ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಿಸಿದೆ. ಅದರಲ್ಲೂ ವಿಶೇಷವಾಗಿ ಯುಎಇನಲ್ಲಿ ಇರುವ ಭಾರತೀಯ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಈ ಕೆಲಸ ಮಾಡಿದ್ದಾರೆ.

ಪ್ರಧಾನಿ ಕಚೇರಿಯ ನೇರ ಉಸ್ತುವಾರಿಯಲ್ಲಿ ರಾ ಇದರ ಉಸ್ತುವಾರಿ ವಹಿಸಿತ್ತು. ವಿದೇಶಿ ನೆಲದ ಕುಳಿತು ತನ್ನ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಉಗ್ರರ ಮಟ್ಟಹಾಕಲು ಭಾರತ ಈ ಹತ್ಯೆ ನಡೆಸಿತ್ತು. ಇಂಥದ್ದೊಂದು ಮಾಹಿತಿ, ಎರಡೂ ದೇಶಗಳ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಮತ್ತು ಉಗ್ರರ ಹತ್ಯೆ ಬಗ್ಗೆ ಪಾಕಿಸ್ತಾನ ತಯಾರಿಸಿದ ರಹಸ್ಯ ವರದಿಯಿಂದ ತನಗೆ ತಿಳಿದುಬಂದಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಪಾಕ್‌ ಹಿಂದೇಟು:

ಇನ್ನೊಂದೆಡೆ ಈ ಉಗ್ರರ ಹತ್ಯೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಪಾಕಿಸ್ತಾನ ಕೂಡಾ ಹಿಂಜರಿದಿದೆ. ಕಾರಣ ಹತ್ಯೆಗೊಳಗಾದವರಲ್ಲಿ ಬಹುತೇಕರು ನಿಷೇಧಿತ ಉಗ್ರ ಸಂಘಟನೆಗೆ ಸೇರಿದವರು. ಒಂದು ವೇಳೆ ಒಪ್ಪಿಕೊಂಡರೆ ಅವರೆಲ್ಲಾ ತನ್ನ ದೇಶದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಒಪ್ಪಿಕೊಂಡಂತೆ ಆಗುತ್ತದೆ ಎನ್ನುವುದು ಪಾಕಿಸ್ತಾನ ಹಿಂಜರಿಕೆ ಎಂದು ಪತ್ರಿಕೆ ವರದಿ ಮಾಡಿದೆ.